ಕೋರ್ಟ್
Allahabad High Court: ದೀರ್ಘ ಕಾಲದವರೆಗೆ ಸಂಗಾತಿಗೆ ಸೆಕ್ಸ್ ನಿರಾಕರಿಸಿದರೆ, ಅದು ಮಾನಸಿಕ ಕ್ರೌರ್ಯ! ಕೋರ್ಟ್ ಹೀಗೆ ಹೇಳಿದ್ದೇಕೆ?
Allahabad High Court: ಉತ್ತರ ಪ್ರದೇಶದ ಕೌಟುಂಬಿಕ ನ್ಯಾಯಾಲಯವೊಂದು ಡಿವೋರ್ಸ್ ನೀಡಲು ನಿರಾಕರಿಸಿದ ಬೆನ್ನಲ್ಲೇ ವ್ಯಕ್ತಿಯೊಬ್ಬರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ದೀರ್ಘ ಕಾಲದವರೆಗೆ ತಮ್ಮ ಹೆಂಡತಿ ಜತೆ ಭೌತಿಕ ಸಂಪರ್ಕ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದರು.
ಅಲಹಾಬಾದ್, ಉತ್ತರ ಪ್ರದೇಶ: ದೀರ್ಘ ಕಾಲದವರೆಗೆ, ಯಾವುದೇ ಕಾರಣವಿಲ್ಲದೇ ಸಂಗಾತಿಗೆ(ಗಂಡ/ಹೆಂಡತಿ) ಸೆಕ್ಸ್ ನಿರಾಕರಿಸಿದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ (mental cruelty) ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (Allahabad High Court) ಅಭಿಪ್ರಾಯಪಟ್ಟಿದೆ. ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್ (divorce) ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯವು, ಸಂಗಾತಿಯೊಂದಿಗೆ ದೀರ್ಘ ಕಾಲದವರೆಗೆ ಸೆಕ್ಸ್ ಮಾಡದಿದ್ದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿತು.
ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಿಂದ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅರ್ಜಿದಾರರು ದೀರ್ಘ ಸಮಯದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂಬುದು ಖಾತ್ರಿಯಾಗುತ್ತದೆ. ವೈವಾಹಿಕ ಹೊಣೆಗಾರಿಕೆಯನ್ನು ನಿಭಾಯಿಸಲು ಪತ್ನಿಯು ಸ್ಪಷ್ಟವಾಗಿ ನಿರಾಕರಿಸಿದ್ದಾರೆಂದು ತಿಳಿದು ಬರುತ್ತದೆ ಎಂದು ನ್ಯಾಯಾಲಯವು ಹೇಳಿದೆ.
1979ರಲ್ಲಿ ದಂಪತಿಯು ವಿವಾಹವಾಗಿದ್ದರು. 7 ವರ್ಷದ ಬಳಿಕ ಗೌನಾ (ಉತ್ತರ ಭಾರತದಲ್ಲಿ ಆಚರಣೆಯಲ್ಲಿರುವ ಪದ್ಧತಿ) ಸಮಾರಂಭದ ಬಳಿಕ ದಂಪತಿ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದರು. ವೈವಾಹಿಕ ಜೀವನದ ಹೊಣೆಗಾರಿಕೆಯನ್ನು ನಿಭಾಯಿಸಲು ಹೆಂಡತಿ ನಿರಾಕರಿಸಿದ್ದಾಳೆ. ಅಲ್ಲದೇ ಮನೆಯಲ್ಲೇ ತನ್ನ ಪೋಷಕರನ್ನು ಬಿಟ್ಟು ಹೋಗಿದ್ದಾಳೆಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.
ಹೆಂಡತಿಯ ಮನವೊಲಿಸುವ ಅನೇಕ ಪ್ರಯತ್ನಗಳನ್ನು ಅರ್ಜಿದಾರರು ಮಾಡಿದ್ದಾರೆ. ಆದರೆ, ಗಂಡನ ಜತೆಗೆ ಯಾವುದೇ ಭೌತಿಕ ಸಂಪರ್ಕ ಹೊಂದಲು ಹೆಂಡತಿ ನಿರಾಕರಿಸಿದ್ದಾಳೆ. 1994ರ ಜುಲೈ ತಿಂಗಳಲ್ಲಿ ಅರ್ಜಿದಾರ ತನ್ನ ಹೆಂಡತಿಗೆ 22,000 ರೂ. ಜೀವನಾಂಶ ಪಾವತಿಸಿ, ಪಂಚಾಯ್ತಿಯ ಮುಂದೆ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು. ಬಳಿಕ ಆಕೆ, ಬೇರೋಬ್ಬನನ್ನು ಮದುವೆಯಾಗಿದ್ದಳು.
ಇದನ್ನೂ ಓದಿ: 13 ವರ್ಷದ ಹುಡುಗನೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಮಗು ಹೆತ್ತ 31 ವರ್ಷದ ಮಹಿಳೆ ಜೈಲು ಶಿಕ್ಷೆಯಿಂದ ಪಾರು!
ಇಷ್ಟೆಲ್ಲ ಘಟನೆಗಳು ನಡೆದ ಬಳಿಕ ಪತಿ, ಮಾನಸಿಕ ಕ್ರೌರ್ಯ ಮತ್ತು ಪರಿತ್ಯಕ್ತ ಆಧಾರದ ಮೇಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಕೌಟುಂಬಿಕ ನ್ಯಾಯಾಲಯವು ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡಲು ನಿರಾಕರಿಸಿತು. ತನ್ನ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ನೊಂದ ಅವರು ಅಲಹಾಬಾದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಕರ್ನಾಟಕ
Karnataka High court: ಡಿಎನ್‌ಎ ವರದಿ ಇಲ್ಲದ ಕಾರಣಕ್ಕೆ ಅತ್ಯಾಚಾರಿಯ ಖುಲಾಸೆ; ಆದೇಶ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು: ಅವಳಿಗೆ ಆಗ ಇನ್ನೂ 18 ತುಂಬಿರಲಿಲ್ಲ. ಸೋದರ ಸಂಬಂಧಿಯೊಬ್ಬ ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಸಖ್ಯ ಬೆಳೆಸಿದ್ದ (Sexual harrassment). ಆಕೆ ಗರ್ಭಿಣಿಯಾದಾಗ ಊರಿನವರ ಮುಂದೆ ಮದುವೆಯಾಗುವುದಾಗಿ ಮಾತುಕೊಟ್ಟಿದ್ದ. ಆಕೆಗೆ ಹೆರಿಗೆಯಾದಾಗ ತಪ್ಪಿಸಿಕೊಂಡಿದ್ದ. ಇನ್ನೊಂದು ಕಡೆ ಕೋರ್ಟ್ ಕೂಡಾ ಆತನನ್ನು ಖುಲಾಸೆಗೊಳಿಸಿತು. ಎರಡೂ ಕಡೆ ಮೋಸಕ್ಕೊಳಗಾದ ಯುವತಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತಿದ್ದಳು. ಈಗ ಕೊನೆಗೆ ಆತನನ್ನು ಖುಲಾಸೆಗೊಳಿಸಿದೆ ವಿಚಾರಣಾಧೀನ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್ (Karnataka High court) ಆತನಿಗೆ ಶಿಕ್ಷೆ ವಿಧಿಸುವಂತೆ ಆದೇಶ ಮಾಡಿದೆ. ಡಿಎನ್‌ಎ ಪರೀಕ್ಷೆ ವರದಿ ಇಲ್ಲ ಎಂಬ ಕಾರಣಕ್ಕೆ ಆತನಿಗೆ ಆವತ್ತು ಖುಲಾಸೆಯಾಗಿತ್ತು. ಆದರೆ, ಇದನ್ನು ಹೈಕೋರ್ಟ್ ಒಪ್ಪಿಲ್ಲ.
ಇದು ಮಡಿಕೇರಿಯ ಮಡೆ ಗ್ರಾಮದ ವಿಜಯ ಅಲಿಯಾಸ್ ವಿಜಯಕುಮಾರ್ ಎಂಬಾತನ ಮೇಲಿರುವ ಅತ್ಯಾಚಾರದ ಕೇಸು. 2016ರ ಮಾರ್ಚ್ 10ರಂದು ಕೊಡಗಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆತನನ್ನು ಖುಲಾಸೆಗೊಳಿಸಿತ್ತು. ಇದನ್ನು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
ಹಾಗಿದ್ದರೆ ಹೈಕೋರ್ಟ್ ಆದೇಶದಲ್ಲಿ ಹೇಳಿದ್ದೇನು?
- ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರೂಪಿಸಲಾಗಿರುವ ನಿಯಮಗಳಿಗೆ ಪೂರಕವಾಗಿ ಅಧಿಕೃತ ಸಾಕ್ಷ್ಯಗಳನ್ನು ವಿಚಾರಣಾಧೀನ ನ್ಯಾಯಾಲಯವು ಪರಿಗಣಿಸದೇ ಆರೋಪಿಯನ್ನು ಖುಲಾಸೆಗೊಳಿಸುವ ಮೂಲಕ ಕಾನೂನುಬಾಹಿರವಾಗಿ ನಡೆದುಕೊಂಡಿದೆ.
- ನಿಷಿದ್ಧವಾಗಿರುವ 15 ವರ್ಷದ ತನ್ನ ಸೋದರ ಸಂಬಂಧಿಯ ಜೊತೆ ಸಂಭೋಗ ನಡೆಸಿರುವುದಲ್ಲದೇ ಆಕೆಗೆ ವಂಚಿಸಿರುವುದನ್ನು ಪರಿಗಣಿಸಲು ವಿಚಾರಣಾಧೀನ ನ್ಯಾಯಾಲಯ ವಿಫಲವಾಗಿದೆ.
- ಆರೋಪಿಯನ್ನು ಖುಲಾಸೆ ಮಾಡಿರುವ ಆದೇಶವು ನ್ಯಾಯದಾನಕ್ಕೆ ಮಾರಕವಾಗಿದ್ದು, ಅದನ್ನು ಬದಿಗೆ ಸರಿಸಲು ಅರ್ಹವಾಗಿದೆ.
- ಅತ್ಯಾಚಾರ ಪ್ರಕರಣಗಳಲ್ಲಿ ವಂಶವಾಹಿ ಪರೀಕ್ಷೆ ನಡೆಸಿಲ್ಲ ಎಂಬ ಅಂಶವನ್ನು ವಿಚಾರಣೆಯ ಹಣೆಬರಹ ನಿರ್ಧರಿಸಲು ಅನುಮತಿಸಲಾಗದು ಎಂದು ಸುಪ್ರೀಂ ಕೋರ್ಟ್ ವೀರೇಂದ್ರ ಪ್ರಕರಣದಲ್ಲಿ ತಿಳಿಸಿದೆ ಎಂದು ಹೈಕೋರ್ಟ್ ನೆನಪಿಸಿದೆ.
ಮೂಲ ಘಟನೆ ನಡೆದಿದ್ದು 2008ರಲ್ಲಿ.. ಈಗ ಆಕೆ ಎಲ್ಲಿದ್ದಾಳೆ?
ಅತ್ಯಾಚಾರದ ಮೂಲ ಘಟನೆ ನಡೆದಿರುವುದು 2008ರಲ್ಲಿ. ಆಕೆ ಜನಿಸಿದ್ದು 1992ರ ಫೆಬ್ರವರಿ 29ರಂದು. ಆರೋಪಿಯು ಆಕೆಯ ಚಿಕ್ಕಪ್ಪನ ಮಗ. 2008ರ ಆ ದಿನ ಆರೋಪಿಯ ಜಮೀನಿಗೆ ಕೂಲಿ ಕೆಲಸಕ್ಕೆ ತೆರಳಿದ್ದ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಬಳಸಿಕೊಂಡಿದ್ದ.
ಇದರಿಂದ ಆಕೆ ಗರ್ಭಿಣಿಯಾಗಿದ್ದು, ವಿಚಾರ ಪೋಷಕರ ಗಮನಕ್ಕೆ ಬಂದಿತ್ತು. ಮಗುವನ್ನು ತೆಗೆಸಿದರೆ ಮದುವೆಯಾಗುವುದಾಗಿ ಆತ ಷರತ್ತು ವಿಧಿಸಿದ್ದ. ಊರಿನವರ ಪಂಚಾಯಿತಿಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದ. ಆದರೆ, ಬಳಿಕ ನಾಪತ್ತೆಯಾಗಿದ್ದ. ಹೀಗಾಗಿ, ಆತನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 ಮತ್ತು 420ರ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಸಂತ್ರಸ್ತೆಗೆ ಈ ಸಂಬಂಧದಿಂದ ಹೆಣ್ಣು ಮಗು ಹುಟ್ಟಿತ್ತು. ಬಳಿಕ ಆಕೆ ಮತ್ತೊಂದು ಮದುವೆಯಾಗಿದ್ದರು. ಈ ಸಂಬಂಧದಿಂದ ಮತ್ತೊಂದು ಮಗುವಿದೆ.
ವಿಚಾರಣಾಧೀನ ನ್ಯಾಯಾಲಯ ಏನು ಹೇಳಿತ್ತು?
ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆಯ ವಯಸ್ಸು ಸಾಬೀತಾಗಿಲ್ಲ. ಆರೋಪಿ ಮತ್ತು ಸಂತ್ರಸ್ತೆಯ ನಡುವಿನ ಸಂಬಂಧ ಒಪ್ಪಿತವಾಗಿತ್ತು. ಆರೋಪಿಯು ಸಂತ್ರಸ್ತೆಯ ಜೊತೆಗೆ ಹೊಂದಿದ್ದ ಸಂಭೋಗದಿಂದ ಆಕೆ ಗರ್ಭಿಣಿಯಾಗಿದ್ದಳು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಂಶವಾಹಿ ಪರೀಕ್ಷೆ ವರದಿ ಸಲ್ಲಿಸಿಲ್ಲ ಎಂದು ಕಾರಣಗಳನ್ನು ನೀಡಿ, ಆರೋಪಿಯನ್ನು ಖುಲಾಸೆಗೊಳಿಸಿತ್ತು.
ಇದನ್ನೂ ಓದಿ: High court Relief : ಅಪರಾಧಿಯ ಮದುವೆಗಾಗಿ ಭರ್ಜರಿ ರಿಲೀಫ್, 60 ದಿನ ಪೆರೋಲ್!
ಕರ್ನಾಟಕ
Cow slaughter: ಜಾನುವಾರು ಸಾಗಾಟದ ವೇಳೆ ಸಾವು; ಪುನೀತ್ ಕೆರೆಹಳ್ಳಿ ಟೀಮ್‌ಗೆ ಷರತ್ತುಬದ್ಧ ಜಾಮೀನು
Puneet Kerehalli: ಸಾತನೂರಿನಲ್ಲಿ ನಡೆದ ಜಾನುವಾರು ಸಾಗಾಟಗಾರನ ಕೊಲೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಪುನೀತ್ ಕೆರೆಹಳ್ಳಿ ಮತ್ತು ತಂಡಕ್ಕೆ ಹೈಕೋರ್ಟ್ ಜಾಮೀನು ನೀಡಿದೆ.
ಬೆಂಗಳೂರು: ಏಪ್ರಿಲ್ 1ರಂದು ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾನುವಾರು ಸಾಗಾಟವನ್ನು (Cow slaughter) ತಡೆದ ಸಂದರ್ಭದಲ್ಲಿ ಇದ್ರಿಸ್ ಪಾಷಾ ಎಂಬ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ (puneet kerehalli) ಮತ್ತು ಇತರ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ (Karnataka High court) ಷರತ್ತುಬದ್ಧ ಜಾಮೀನು ನೀಡಿದೆ.
ಮಾರ್ಚ್ 31ರಂದು ರಾತ್ರಿ ಮಂಡ್ಯದ ಕಡೆಯಿಂದ ಬರುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್ ಠಾಣೆ ಸಮೀಪ ಅಡ್ಡಗಟ್ಟಿದ್ದ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಏಪ್ರಿಲ್ 1ರಂದು ಬೆಳಗ್ಗೆ ಘಟನಾ ಸ್ಥಳದಿಂದ 100 ಮೀಟರ್ ದೂರದಲ್ಲಿ ಇದ್ರೀಶ್ ಪಾಷಾ ಅವರ ಶವ ಪತ್ತೆಯಾಗಿತ್ತು.
ಪುನೀತ್ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಪಾಷಾ ಅವರ ಸಹೋದರ ಯೂನಸ್ ಪಾಷಾ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳ ವಿರುದ್ಧ ಸಾತನೂರು ಠಾಣೆಯಲ್ಲಿ ಐಪಿಸಿ ಸೆಕ್ಷನ್ 302, 324, 341, 504, 506 ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 5ರಂದು ಆರೋಪಿಗಳನ್ನು ರಾಜಸ್ಥಾನದ ಬನ್‌ಸ್ವಾರ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು.
ಆರೋಪಿಗಳಾದ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ, ಗೋಪಿ, ಸುರೇಶ್, ಪವನ್ ಕುಮಾರ್ ಎ ಎನ್, ಪಿ ಲಿಂಗಪ್ಪ ಅವರು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ ಉಮಾ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ ಶ್ಯಾಮ್ ಅವರು “ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದ್ದು, ಗಂಭೀರ ಗಾಯಗಳ ಬಗ್ಗೆ ಏನೂ ಮಾಹಿತಿ ಇಲ್ಲ. ಪ್ರಕರಣವು ಸಾತನೂರು ಠಾಣೆಯ 100 ಮೀಟರ್ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದಾಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲೇಬೇಕಿತ್ತು. ಈಗ ತನಿಖೆ ಪೂರ್ಣಗೊಂಡಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಏನೇನು ವಶಪಡಿಸಿಕೊಳ್ಳಬೇಕು ಎಲ್ಲವೂ ಪೂರ್ಣಗೊಂಡಿದೆ. ಇನ್ನೂ ಆರೋಪ ಪಟ್ಟಿ ಸಲ್ಲಿಕೆಯಾಗಿ, ವಿಚಾರಣೆ ನಡೆಯಬೇಕಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.
ಇದನ್ನೂ ಓದಿ : Cow slaughter : ಜಾನುವಾರು ಸಾಗಾಟಗಾರನ ಸಾವು; ಪುನೀತ್ ಕೆರೆಹಳ್ಳಿ ಸೇರಿ ಐವರು ರಾಜಸ್ಥಾನದಲ್ಲಿ ಸೆರೆ
ಕರ್ನಾಟಕ
DK Shivakumar: ಮತ್ತೆ ಬೆನ್ನುಹತ್ತಿದ ಸಿಬಿಐ; ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್
Supreme court: ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವ ಆರೋಪದಡಿ ತನಿಖೆ ನಡೆಸಲು ಹೈಕೋರ್ಟ್ ವಿಧಿಸಿರುವ ತಡೆಯಾಜ್ಞೆಯ ತೆರವಿಗೆ ಮನವಿ ಮಾಡಿ ಸಿಬಿಐ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅಲ್ಲಿ ಏನಾಯಿತು?
ಬೆಂಗಳೂರು: ಒಂದು ಕಡೆ ಡಿ.ಕೆ. ಶಿವಕುಮಾರ್ (DK Shivakumar) ಅವರು ರಾಜ್ಯದ ಮುಖ್ಯಮಂತ್ರಿಯಾಗಲು ಭಾರಿ ಪ್ರಯತ್ನ ನಡೆಸುತ್ತಿರುವ ನಡುವೆಯೇ ಕೇಂದ್ರೀಯ ತನಿಖಾ ಮಂಡಳಿ (Central bureau of investigation) ಅವರ ಬೆನ್ನು ಹತ್ತಲು ಶುರು ಮಾಡಿದೆ. ಅವರ ಮೇಲಿರುವ ಪ್ರಕರಣಗಳ ವಿಚಾರಣೆಗೆ ರಾಜ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯ ತೆರವು ಕೋರಿ ಸಿಬಿಐ ಬುಧವಾರ ಸುಪ್ರೀಂಕೋರ್ಟ್ (Supreme court) ಮೆಟ್ಟಿಲು ಹತ್ತಿದೆ. ಆದರೆ, ಸುಪ್ರೀಂಕೋರ್ಟ್ ಈ ಹಂತದಲ್ಲಿ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಈ ಮೂಲಕ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹ ಮಾಡಿದ ಆರೋಪಕ್ಕೆ ಸಂಬಂಧಿಸಿ ಡಿ.ಕೆ. ಶಿವಕುಮಾರ್ ವಿರುದ್ಧ ತನಿಖೆಗೆ ಸಿಬಿಐ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ನಾನಾ ಹಂತಗಳಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆಯ ತೆರವಿಗೆ ಹೈಕೋರ್ಟ್‌ಗೆ ಸಿಬಿಐ ಮನವಿ ಸಲ್ಲಿಸಿದೆ.
ಈ ನಡುವೆ ಕೇಂದ್ರೀಯ ತನಿಖಾ ಮಂಡಳಿ ಗುರುವಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ತನಿಖೆಗೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ರದ್ದುಗೊಳಿಸಬೇಕು, ತನಿಖೆಗೆ ಅವಕಾಶ ನೀಡಬೇಕು ಕೇಳಿಕೊಂಡಿದೆ.
ಈ ಅರ್ಜಿಯ ವಿಚಾರಣೆಯ ವೇಳೆ ಡಿ.ಕೆ. ಶಿವಕುಮಾರ್ ಅವರ ಪರ ವಕೀಲರಾದ ಅಭಿಷೇಕ್ ಮನುಸಿಂಘ್ವಿ ಅವರು, ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಮಂಗಳವಾರ (ಮೇ 23) ಹೈಕೋರ್ಟ್‌ನಲ್ಲೇ ವಿಚಾರಣೆ ಇದೆ. ಇದು ಮಧ್ಯಂತರ ಆದೇಶ ಅಷ್ಟೇ. ಹೀಗಾಗಿ ನೀವು ಇದರ ಬಗ್ಗೆ ಈಗ ವಿಚರಣೆ ಮಾಡಬೇಡಿʼʼ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು, ಸುಪ್ರೀಂಕೋರ್ಟ್ ರಜೆ ಇರುವುದರಿಂದ ನಾವು ತ್ವರಿತ ವಿಚರಣೆಗೆ ಕೇಳಿದ್ದೇವೆ ಎಂದು ಹೇಳಿದರು.
ಆದರೆ, ಮೇ 23ರಂದು ಹೈಕೋರ್ಟ್‌ನಲ್ಲೇ ವಿಚಾರಣೆ ಇರುವುದರಿಂದ ತಕ್ಷಣಕ್ಕೆ ವಿಚಾರಣೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಾದವನ್ನು ಹೈಕೋರ್ಟ್‌ನಲ್ಲೇ ಮಂಡಿಸಿ ಎಂದು ಸೂಚಿಸಿತು. ಸುಪ್ರೀಂಕೋರ್ಟ್‌ಗೆ ರಜೆ ಇದ್ದರೂ ಬೇಸಗೆ ರಜೆ ನ್ಯಾಯಪೀಠ ಪ್ರತಿ ದಿನವೂ ಕಾರ್ಯ ನಿರ್ವಹಿಸಲಿದೆ. ಏನೇ ಸಮಸ್ಯೆ ಇದ್ದರೂ ಆಗ ನೀವು ಬರಬಹುದು ಎಂದ ನ್ಯಾ ಗವಾಯ್ ನೇತೃತ್ವದ ನ್ಯಾಯಪೀಠ ಹೇಳಿತು.
ಹೀಗಾಗಿ ಈ ಯಾವುದೇ ತಡೆಯಾಜ್ಞೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ.
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳು ಹಲವಾರು ಪ್ರಕರಣಗಳನ್ನು ದಾಖಲಿಸಿವೆ. ಎಲ್ಲ ಪ್ರಕರಣಗಳು ವಿಚಾರಣೆಯ ನಾನಾ ಹಂತದಲ್ಲಿವೆ. ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಮುಂದಾಗುತ್ತಿದ್ದಂತೆಯೇ ಪ್ರಕರಣಗಳು ಮೇಲೆದ್ದು ಬರುತ್ತಿವೆ. ಅದರ ನಡುವೆ ಸಿಬಿಐ ನಿರ್ದೇಶಕರಾಗಿ, ಡಿ.ಕೆ.ಶಿ ಅವರು ಕಟುವಾಗಿ ಟೀಕಿಸಿದ ಪ್ರವೀಣ್ ಸೂದ್ ಅವರೇ ನೇಮಕಗೊಂಡಿದೆ.
ಕರ್ನಾಟಕ
Road accident Case: ಅಪಘಾತ ಪ್ರಕರಣದಲ್ಲಿ ಕೋರ್ಟ್ ತೀರ್ಪೇ ಫೈನಲ್, ನ್ಯಾಯಮಂಡಳಿಯದ್ದಲ್ಲ
Vehicle accident case: ಅಪಘಾತ ಪ್ರಕರಣಗಳಲ್ಲಿ ಕೋರ್ಟ್ ನೀಡಿದ ತೀರ್ಪನ್ನು ನ್ಯಾಯಮಂಡಳಿಗಳು ಏಕಾಏಕಿಯಾಗಿ ಬದಲಿಸುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ಏನಿದು ವಿಶೇಷ ಪ್ರಕರಣ? ಇಲ್ಲಿದೆ ಪೂರ್ಣ ವರದಿ.
ಬೆಂಗಳೂರು: ವಾಹನ ಅಪಘಾತ ಪ್ರಕರಣಗಳಲ್ಲಿ (Vehicle accident case) ನ್ಯಾಯಾಲಯ ಒಮ್ಮೆ ತೀರ್ಪು ನೀಡಿದ ಬಳಿಕ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಮಂಡಳಿ ಅದನ್ನು ಬದಲಿಸಲು ಅವಕಾಶವಿಲ್ಲ ಎಂದು ರಾಜ್ಯ ಹೈಕೋರ್ಟ್ (Karnataka High court) ಹೇಳಿದೆ. ಹಲವು ದಾಖಲೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿ ಕೋರ್ಟ್ ಚಾಲಕ ತಪ್ಪಿತಸ್ಥ ಎಂದು ತೀರ್ಮಾನಿಸಿದ ಬಳಿಕ ಇನ್ಯಾವುದೋ ದಾಖಲೆಯನ್ನು ಮುಂದಿಟ್ಟುಕೊಂಡು ನ್ಯಾಯ ಮಂಡಳಿ ಅದನ್ನು ಬದಲಿಸುವ ಹಾಗಿಲ್ಲ ಎನ್ನುತ್ತದೆ ಹೈಕೋರ್ಟ್‌ನ ಒಂದು ತೀರ್ಪು.
ಏನಿದು ಪ್ರಕರಣ? ಯಾಕೆ ಹೈಕೋರ್ಟ್‌ಗೆ ಬಂತು?
ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ 2015ರಲ್ಲಿ ಒಂದು ಅಪಘಾತ ನಡೆದಿತ್ತು. ಶುಕ್ರು ಸಾಬ್ ಮತ್ತು ಅವರ ಮೊಮ್ಮಗಳು ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ನಿಂತಿದ್ದಾಗ ಕಾರೊಂದು ಢಿಕ್ಕಿ ಹೊಡೆದು ಶುಕ್ರು ಸಾಬ್ ಸಾವನ್ನಪ್ಪಿದರೆ, ಮೊಮ್ಮಗಳು ಗಾಯಗೊಂಡಿದ್ದರು. ಅತಾವುಲ್ಲಾ ಖಾನ್ ಎಂಬಾತ ಕಾರು ಚಾಲಕನಾಗಿದ್ದ.
ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಅತಾವುಲ್ಲಾ ಖಾನ್ ಕಾರು ಚಾಲನೆ ಮಾಡಿ ಅಪಘಾತ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದ ಕ್ರಿಮಿನಲ್ ಕೋರ್ಟ್ ಆತನನ್ನು ದೋಷಿಯಾಗಿ ತೀರ್ಮಾನಿಸಿತ್ತು. ಈ ನಡುವೆ ಪ್ರಕರಣದಲ್ಲಿ ಪರಿಹಾರ ಕೋರಿ ಮೃತನ ಪತ್ನಿ ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯ ವೇಳೆ ನ್ಯಾಯಮಂಡಳಿ ಪ್ರಕರಣದ ಗತಿಯನ್ನೇ ಬದಲಾಯಿಸಿತ್ತು.
ವಿಮಾ ಕಂಪೆನಿ ಪರ ವಕೀಲರು, ಪ್ರಕರಣದ ವೈದ್ಯಕೀಯ ದಾಖಲೆಗಳಲ್ಲಿ (ಎಂಎಲ್‌ಸಿ) ಕಾರು ಚಾಲಕನ ಹೆಸರು ಅತಾವುಲ್ಲಾ ಖಾನ್ ಬದಲಾಗಿ ಅಖ್ತರ್ ಎಂದು ತೋರಿಸಲಾಗಿದೆ. ಅಖ್ತರ್ ಕಾರು ಚಾಲನೆ ಪರವಾನಗಿ ಹೊಂದಿರಲಿಲ್ಲ. ಇದರಿಂದ ಪೊಲೀಸರು ಅತಾವುಲ್ಲಾ ಎಂಬಾತನನ್ನು ಪ್ರಕರಣದಲ್ಲಿ ಸಿಲುಕಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆದ್ದರಿಂದ, ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಈ ವಾದ ಪುರಸ್ಕರಿಸಿದ ನ್ಯಾಯ ಮಂಡಳಿಯು ಪರಿಹಾರ ಪಾವತಿ ಹೊಣೆಗಾರಿಕೆಯನ್ನು ವಿಮಾ ಕಂಪೆನಿಯ ಬದಲಾಗಿ ಕಾರು ಮಾಲೀಕ ಪ್ರಭಾಕರ್ ಮೇಲೆ ಹೊರಿಸಿತ್ತು. ಸಂತ್ರಸ್ತರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿ ದರಲ್ಲಿ 4,43,000 ರೂಪಾಯಿ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ, ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ನೇತೃತ್ವದ ಏಕಸದಸ್ಯ ಪೀಠವು ಒಮ್ಮೆ ಕ್ರಿಮಿನಲ್ ಕೋರ್ಟ್‌ನಲ್ಲಿ ಆಗಿರುವ ತೀರ್ಪನ್ನು ನ್ಯಾಯಮಂಡಳಿ ಬದಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಮತ್ತು ವಾಹನದ ಮಾಲೀಕನೇ ಪರಿಹಾರ ನೀಡಬೇಕು ಎಂಬ ಆದೇಶವನ್ನು ರದ್ದುಪಡಿಸಿತು.
ಸಂತ್ರಸ್ತರಿಗೆ ಪರಿಹಾರ ಪಾವತಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿರುವ ನ್ಯಾಯಾಲಯವು ನ್ಯಾಯ ಮಂಡಳಿಯು ನಿಗದಿಪಡಿಸಿದ 4,43,000 ರೂಪಾಯಿ ಪರಿಹಾರದ ಮೊತ್ತವನ್ನು 9,48,200 ರೂಪಾಯಿಗೆ ಹೆಚ್ಚಿಸಿದೆ. ಆ ಮೊತ್ತವನ್ನು ವಾರ್ಷಿಕ ಶೇ 6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸೂಚಿಸಿದೆ.
ಇದನ್ನೂ ಓದಿ: High court Relief : ಅಪರಾಧಿಯ ಮದುವೆಗಾಗಿ ಭರ್ಜರಿ ರಿಲೀಫ್, 60 ದಿನ ಪೆರೋಲ್!
tribunal cant change criminal courts order in vehicle accident case says High court
-
ಸುವಚನ12 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
South Cinema24 hours ago
Priya Prakash Varrier: ಕಣ್ಣು ಹೊಡೊಯೊ ಐಡಿಯಾ ಕೊಟ್ಟಿದ್ದು ನಾನೆ ಎಂದ ಪ್ರಿಯಾ; ಆಕೆಗೆ ತೈಲ ಕೊಡ್ರಪ್ಪ ಎಂದ ನಿರ್ದೇಶಕ!
-
South Cinema23 hours ago
Kannada New Movie: ಹಿಮಾಲಯದ ಕೊರೆಯುವ ಚಳಿಯಲ್ಲಿ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಶೂಟಿಂಗ್!
-
South Cinema22 hours ago
Nandamuri Balakrishna: ‘ಐ ಡೋಂಟ್ ಕೇರ್ʼ ಎಂದು ಮಾಸ್ ಅವತಾರವೆತ್ತ ನಂದಮೂರಿ ಬಾಲಕೃಷ್ಣ; ಟೈಟಲ್ ರಿವೀಲ್!
-
ಪ್ರಮುಖ ಸುದ್ದಿ18 hours ago
ವಿಸ್ತಾರ ಸಂಪಾದಕೀಯ: ಇಂದಿರಾ ಗಾಂಧಿ ಹತ್ಯೆಯ ಸಂಭ್ರಮ; ಕೆನಡಾದಲ್ಲಿ ಖಲಿಸ್ತಾನಿಗಳ ಉದ್ಧಟತನ ಖಂಡನೀಯ
-
ಪ್ರಮುಖ ಸುದ್ದಿ23 hours ago
ವಿಧವೆ ಅನ್ನೋದಕ್ಕೆ ರಾಷ್ಟ್ರಪತಿಯನ್ನು ಸಂಸತ್ ಭವನ ಉದ್ಘಾಟನೆಗೆ ಮೋದಿ ಆಹ್ವಾನಿಸಿಲ್ಲವೆಂದ ಕುಂ. ವೀರಭದ್ರಪ್ಪ
-
ಕರ್ನಾಟಕ22 hours ago
Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
-
ದೇಶ20 hours ago
ಸಹಕಾರಿ ಬ್ಯಾಂಕ್ಗಳು ಕೂಡ ಸುಸ್ತಿದಾರರ ಜತೆ ರಾಜಿ, ಸಾಲ ರೈಟ್-ಆಫ್ ಮಾಡಬಹುದು; ಆರ್ಬಿಐ ಮಹತ್ವದ ಘೋಷಣೆ