ಬೆಂಗಳೂರು: ಕಳೆದ 20 ವರ್ಷಗಳಿಂದ ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗನೊಬ್ಬನಿಗೆ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಅಕ್ರಮ ವಾಸದ ಹಿನ್ನೆಲೆಯಲ್ಲಿ ಈತನ ಬಂಧನ ನಡೆದಿತ್ತು. ಬೆಂಗಳೂರಿನಲ್ಲಿ ಗುಜರಿ ಅಂಗಡಿ ನಡೆಸುತ್ತಿರುವ ಈತ ಆಧಾರ್ ಸೇರಿದಂತೆ ಎಲ್ಲ ದಾಖಲೆಗಳನ್ನು ಹೊಂದಿದ್ದಾನೆ. ಈ ದಾಖಲೆಗಳನ್ನು ಅಕ್ರಮವಾಗಿ ಪಡೆದು ವಾಸಿಸುತ್ತಿರುವ ಮಾತ್ರಕ್ಕೆ ಆತನನ್ನು ಭಾರತೀಯನೆಂದು ಒಪ್ಪಿಕೊಳ್ಳಲಾಗದು ಎಂಬರ್ಥದಲ್ಲಿ ಹೈಕೋರ್ಟ್ (High court) ಅಭಿಪ್ರಾಯ ವ್ಯಕ್ತಪಡಿಸಿದೆ.
ಬೆಂಗಳೂರಿನಲ್ಲಿ ಗುಜರಿ ಅಂಗಡಿ ಹೊಂದಿದ್ದ ಸೈಯದುಲ್ ಅಖೋನ್ ಅಲಿಯಾಸ್ ಶಾಹಿದ್ ಅಹ್ಮದ್ (42) ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಅರ್ಜಿದಾರ ಆರೋಪಿಯು ತನ್ನನ್ನು ಭಾರತದ ಪ್ರಜೆ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಆಧಾರ್ ಕಾರ್ಡ್ ಸೇರಿ ಹಲವು ನಕಲಿ ಗುರುತಿನ ಚೀಟಿ ಸೃಷ್ಟಿಸಿದ್ದಾನೆ ಎನ್ನಲಾಗಿದೆ. ಈ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಇಂತಹ ಕೃತ್ಯಗಳು ದೇಶದ ಭದ್ರತೆಗೆ ಅಪಾಯ ಉಂಟು ಮಾಡುವಂತಹದ್ದಾಗಿದೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇಂಥ ಕೃತ್ಯಗಳು ಭದ್ರತೆಗೆ ಅಪಾಯಕಾರಿ
ಅರ್ಜಿದಾರನ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಇವು ದೇಶದ ಭದ್ರತೆಗೆ ಅಪಾಯ ಒಡ್ಡುವಂತಹ ಕೃತ್ಯಕ್ಕೆ ಸಂಬಂಧಿಸಿದ ಆರೋಪಗಳಾಗಿವೆ. ಆರೋಪಿ ಭಾರತೀಯ ಪ್ರಜೆಯಾಗಿದ್ದು, ಉತ್ತರಪ್ರದೇಶದ ನಿವಾಸಿ ಎಂದು ತಿಳಿಸಿ, ಅದನ್ನು ಸಾಬೀತುಪಡಿಸುವ ಹಲವು ದಾಖಲೆಗಳನ್ನು ಆರೋಪಿಯ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೆ, ಆರೋಪಿ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಅಕ್ರಮವಾಗಿ ಭಾರತದೊಳಗೆ ನುಸುಳಿ, ಕಳೆದ 20 ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದಾನೆ ಎನ್ನುವುದನ್ನು ತನಿಖಾಧಿಕಾರಿ ಸಲ್ಲಿಸಿರುವ ಆರೋಪಪಟ್ಟಿ ಬಹಿರಂಗಪಡಿಸಿದೆ. ಜತೆಗೆ, ಪ್ರಕರಣದ ಇನ್ನೂ ಹಲವು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಜಾಮೀನಿಗೆ ಅರ್ಹನಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜಾಮೀನು ಅರ್ಜಿ ವಜಾಗೊಳಿಸಿದೆ.
ಉತ್ತರ ಪ್ರದೇಶ ಮೂಲದವನು ಎಂದ ವಕೀಲರು!
ಆರೋಪಿಯ ಪರ ವಕೀಲರು, ಆತನ ವಿರುದ್ಧ ದಾಖಲಿಸಿರುವ ಪ್ರಕರಣ ಆಧಾರರಹಿತವಾಗಿದೆ. ಭಾರತೀಯ ಪ್ರಜೆಯಾಗಿರುವ ಆರೋಪಿ, ಉತ್ತರಪ್ರದೇಶದಲ್ಲಿ ಜನಿಸಿದ್ದಾನೆ. ಆತನ ಕುಟುಂಬದವರು ಈಗಲೂ ಉತ್ತರ ಪ್ರದೇಶದಲ್ಲೇ ನೆಲೆಸಿದ್ದಾರೆ. ಅರ್ಜಿದಾರ ಭಾರತೀಯ ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಹೊಂದಿದ್ದಾನೆ. ಹೀಗಿದ್ದರೂ, ತನಿಖಾಧಿಖಾರಿಗಳು ಆ ಯಾವುದೇ ದಾಖಲೆಗಳನ್ನು ಪರಿಗಣಿಸಿದೆಯೇ ಅರ್ಜಿದಾರನ ವಿರುದ್ಧ ತಪ್ಪು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಮೇಲಾಗಿ ಪ್ರಕರಣದ ತನಿಖೆ ಈಗಾಗಲೇ ಪೂರ್ಣಗೊಂಡಿದೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಆರೋಪಿ ಬದ್ಧನಾಗಿರಲಿದ್ದಾನೆ. ಆದ್ದರಿಂದ, ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ಗಂಭೀರ ಸ್ವರೂಪದ ಅಪರಾಧ ಕೃತ್ಯವೆಸಗಿರುವ ಆರೋಪ ಅರ್ಜಿದಾರನ ಮೇಲಿದೆ. ಆತ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಪಾಸ್‌ಪೋರ್ಟ್ ಹಾಗೂ ವೀಸಾ ಇಲ್ಲದೆಯೇ ಭಾರತ ಪ್ರವೇಶಿಸಿದ್ದಾನೆ. ಬೆಂಗಳೂರಿನಲ್ಲಿ ಗುಜರಿ ಅಂಗಡಿ ನಡೆಸುತ್ತಿರುವ ಆತ ತನ್ನ ವಾಸದ ವಿಳಾಸವನ್ನು ಬೆಂಗಳೂರಿಗೆ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದ. ಕಳೆದ 20 ವರ್ಷಗಳಿಂದಲೂ ಅಕ್ರಮವಾಗಿ ದೇಶದಲ್ಲಿ ನೆಲೆಸಿರುವ ಅರ್ಜಿದಾರ ಪ್ರಕರಣದ ಇತರ ಆರೋಪಿಗಳೊಂದಿಗೆ ಸೇರಿ ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾನೆ. ಆದ್ದರಿಂದ, ಆತನಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದ್ದರು.
ಕಳೆದ ವರ್ಷ ನಡೆದಿದ್ದ ಅಕ್ರಮ ವಲಸಿಗನ ಬಂಧನ
ಅಕ್ರಮವಾಗಿ ಭಾರತದಲ್ಲಿ ನೆಲೆಸಿದ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ಅರ್ಜಿದಾರನನ್ನು 2022ರ ಮೇ 23ರಂದು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದರು. ಆರೋಪಿಯ ವಿರುದ್ಧ ವಿದೇಶಿಯರ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯಿದೆ, ಪಾಸ್‌ಪೋರ್ಟ್ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ತನಿಖೆ ನಡೆಸಿದ್ದ ಅಧಿಕಾರಿಗಳು ವಿಚಾರಣಾಧೀನ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸೈಯದುಲ್ ಅಖೋನ್ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : Karnataka High court: ಅಪಮಾನದ ಉದ್ದೇಶವಿಲ್ಲದೆ ಜಾತಿ ಹೆಸರು ಬಳಸಿದರೆ ಅಪರಾಧವಲ್ಲ