ಬೆಂಗಳೂರು: ಗಂಡನೊಬ್ಬ ತನಗೆ ಹೆಂಡತಿಯಿಂದ ಜೀವನಾಂಶ ಕೊಡಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ (High court order), ಆತನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದೆ.
ನಾನು ನಿರುದ್ಯೋಗಿ, ಹಾಗಾಗಿ ಆಕೆಯನ್ನು ಸಾಕಲು ಆಗುತ್ತಿಲ್ಲ. ಇದರಿಂದಾಗಿ ಆಕೆಯಿಂದಲೇ ನನಗೆ ಜೀವನಾಂಶ ಕೊಡಿಸಿ ಎನ್ನುವುದು ಆತನ ಬೇಡಿಕೆಯಾಗಿತ್ತು. ಇದಕ್ಕೆ ಆತನನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್ ʻʼಕೂತು ಸೋಮಾರಿಯಾಗದೇ ಸಕ್ರಿಯವಾಗಿ ಸವೆಯುವುದು ಉತ್ತಮʼ ಎಂದು ಹೇಳಿದೆ.
ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರ ಅಡಿ ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯೊಂದನ್ನು ವಿಚಾರಣಾಧೀನ ನ್ಯಾಯಾಲಯ ಮಾನ್ಯ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಬೆಂಗಳೂರು ದಕ್ಷಿಣ ತಾಲೂಕಿನ ನಿವಾಸಿಯೊಬ್ಬರು ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನೀನು ಜೀವನಾಂಶ ಕೇಳುವಂತಿಲ್ಲ ಎಂದಿದೆ.
“ಜೀವನಾಂಶ ವಿತರಣೆಗೆ ಸಂಬಂಧಿಸಿದಂತೆ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24 ಲಿಂಗ ತಟಸ್ಥವಾಗಿದೆ ಎಂದ ಮಾತ್ರಕ್ಕೆ ಪತಿಯ ಸಂಪಾದನೆಗೆ ಯಾವುದೇ ಅಡ್ಡಿ ಅಥವಾ ಅಂಗವಿಕಲತೆ ಇಲ್ಲದಿದ್ದರೂ ಜೀವನಾಂಶಕ್ಕೆ ಆದೇಶಿಸುವುದು ಸೋಮಾರಿತನಕ್ಕೆ ಉತ್ತೇಜನ ನೀಡಿದಂತಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
“ತನ್ನ ಜೀವನನ್ನೇ ಸಾಗಿಸಲು ಉದ್ಯೋಗವಿಲ್ಲ. ಹೀಗಾಗಿ, ಪತ್ನಿಯ ಜೀವನ ವೆಚ್ಚ ನಿರ್ವಹಿಸಲು ಸಾಧ್ಯವಿಲ್ಲ. ಇದರಿಂದ ಪತ್ನಿಯೇ ಜೀವನಾಂಶ ನೀಡಬೇಕು ಎಂಬ ವಾದವನ್ನು ಒಪ್ಪಲಾಗದು. ಈ ವಾದವು ಮೂಲದಲ್ಲೇ ಸಮಸ್ಯಾತ್ಮಕವಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“ಅರ್ಜಿದಾರರು ಕೋವಿಡ್‌ನಿಂದ ಉದ್ಯೋಗ ಕಳೆದುಕೊಂಡಿದ್ದಾರೆ ಎಂದ ಮಾತ್ರಕ್ಕೆ ಅವರು ದುಡಿಯಲು ಸಮರ್ಥರಲ್ಲ ಎಂದು ಹೇಳಲಾಗದು. ಪತ್ನಿಯಿಂದ ಜೀವನಾಂಶ ಕೋರುವ ಮೂಲಕ ಪತಿಯು ಸೋಮಾರಿಯಾಗಿ ಬದುಕಲು ನಿರ್ಧರಿಸಿದ್ದಾರೆ ಎಂಬುದು ಅವರ ನಡತೆಯಿಂದ ನಿರ್ವಿವಾದವಾಗಿ ತಿಳಿಯುತ್ತದೆ” ಎಂದು ನ್ಯಾಯಾಲಯ ಹೇಳಿದೆ. “ಉದ್ಯೋಗ ಕಂಡುಕೊಂಡು ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ದೈಹಿಕ ಅಥವಾ ಮಾನಸಿಕ ಅನಾರೋಗ್ಯ ಇರುವುದನ್ನು ಸಾಬೀತುಪಡಿಸದ ಹೊರತು ಕಾಯಿದೆಯ ಸೆಕ್ಷನ್ 24ರ ಅಡಿ ಪತಿಯು ಜೀವನಾಂಶ ಕೋರಲಾಗದು. ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಸದೃಢ ಪತಿಯ ಕರ್ತವ್ಯವಾಗಿದೆ” ಎಂದು ಪೀಠ ಹೇಳಿದೆ.
ಏನಿದು ವಿಶೇಷ ಪ್ರಕರಣ?
ಪತಿ-ಪತ್ನಿಯ ನಡುವೆ ವೈಮನಸ್ಸು ಉಂಟಾಗಿದ್ದರಿಂದ ಪತಿಯು ವಿಚ್ಚೇದನ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ, ಪತ್ನಿಯು ವೈವಾಹಿಕ ಹಕ್ಕುಗಳ ಜಾರಿ ಕೋರಿ ಅರ್ಜಿ ಸಲ್ಲಿಸಿದ್ದರು. ಪತ್ನಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶ ಮತ್ತು 25 ಸಾವಿರ ರೂಪಾಯಿ ಕಾನೂನು ವೆಚ್ಚ ಭರಿಸಬೇಕು ಎಂದು ಆದೇಶಿಸಿದ್ದ ನ್ಯಾಯಾಲಯವು 2 ಲಕ್ಷ ರೂಪಾಯಿ ಜೀವನಾಂಶ ಮತ್ತು 30 ಸಾವಿರ ರೂಪಾಯಿ ಕಾನೂನು ವೆಚ್ಚವನ್ನು ಪತ್ನಿಯಿಂದ ಕೊಡಿಸಬೇಕು ಎಂದು ಕೋರಿದ್ದ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನೇ ಹೈಕೋರ್ಟ್ ಅನುಮೋದಿಸಿದೆ.
ಇದನ್ನೂ ಓದಿ | High court | ಸಂತ್ರಸ್ತೆಯನ್ನೇ ಮದುವೆಯಾದ ಅತ್ಯಾಚಾರ ಆರೋಪಿ: ಎಚ್ಚರಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದ ಕೋರ್ಟ್