ಬೆಂಗಳೂರು: ಕೊಲೆ ಪ್ರಕರಣದಲ್ಲಿ ಜೈಲು ಸೇರಿದರೂ ತನ್ನ ಪ್ರೀತಿಯನ್ನು ಮಾತ್ರ ಯಥಾವತ್ತಾಗಿ ಕಾಯ್ದುಕೊಂಡು ಬಂದಿದ್ದ ಅಪರಾಧಿಯೊಬ್ಬನಿಗೆ ರಾಜ್ಯ ಹೈಕೋರ್ಟ್ ಸಂಪ್ರದಾಯಬದ್ಧ ಮದುವೆಗಾಗಿ (Marriage) 60 ದಿನಗಳ ಕಾಲ ಪೆರೋಲ್ (Parole by high court) ನೀಡಿದೆ.
10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಈ ಅಪರಾಧಿಗೆ ತನ್ನ ಪ್ರಿಯತಮೆಯನ್ನು ವರಿಸಲು ಹೈಕೋರ್ಟ್ ಮೊದಲು 15 ದಿನ ಪೆರೋಲ್ ನೀಡಲಾಗಿತ್ತು. ನೋಂದಣಿ ಮೂಲಕ ಅವನ ಮದುವೆಯೂ ನಡೆದಿತ್ತು. ಆದರೆ, ಜೋತಿಷಿಗಳು ಅವನ ಮದುವೆಯನ್ನು ಹಿಂದೂ ಸಂಪ್ರದಾಯದಂತೆಯೇ ಪರಿಪೂರ್ಣವಾಗಿ ನಡೆಸಬೇಕು ಎಂದು ಸಲಹೆ ನೀಡಿದ್ದರಿಂದ ಯುವತಿಯ ಪೋಷಕರು ಪಟ್ಟು ಹಿಡಿದಿದ್ದರು. ಹೀಗಾಗಿ ಅಪರಾಧಿಯ ಮನವಿಗೆ ತಲೆಬಾಗಿದ ಕೋರ್ಟ್ 60 ದಿನಗಳ ಕಾಲ ಪೆರೋಲ್ ವಿಸ್ತರಿಸಿ ಆದೇಶಿಸಿದೆ. ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಪೆರೋಲ್ ವಿಸ್ತರಣೆಯ ಮನವಿಯನ್ನು ಪುರಸ್ಕರಿಸಿದೆ.
ಏನು ಪ್ರಕರಣವಿದು? ಯಾಕೆ ಪೆರೋಲ್ ವಿಸ್ತರಣೆ?
ಕೋಲಾರ ಮೂಲದ ಈ ವ್ಯಕ್ತಿ ಸ್ಥಿರಾಸ್ತಿ ವ್ಯಾಜ್ಯದ ಗಲಾಟೆಯಲ್ಲಿ 2015ರ ಆಗಸ್ಟ್ 17ರಂದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಬಂಧಿತನಾಗಿದ್ದ. ಕೊಲೆ ಮಾಡಿದಾಗ ಅವನಿಗೆ 21 ವರ್ಷ. 2019ರಲ್ಲಿ ಸತ್ರ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಮೇಲ್ಮನವಿ ಸಲ್ಲಿಸಿದ್ದನ್ನು ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಶಿಕ್ಷೆಯ ಪ್ರಮಾಣವನ್ನು 10 ವರ್ಷಕ್ಕೆ ಇಳಿಸಿತ್ತು. ಇದರಲ್ಲಿ ಆರು ವರ್ಷದ ಜೈಲು ಶಿಕ್ಷೆಯನ್ನು ಆತ ಈಗಾಗಲೇ ಪೂರೈಸಿದ್ದಾನೆ.
ಕೊಲೆ ಮಾಡುವುದಕ್ಕೆ ಮೊದಲು ಅವನು ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅವರ ಪ್ರೀತಿಗೆ ಈಗ ಒಂಬತ್ತು ವರ್ಷ. ಇತ್ತೀಚೆಗೆ ಪ್ರೇಯಸಿಗೆ ಬೇರೊಬ್ಬರ ಜೊತೆಗೆ ಮದುವೆ ಮಾಡಲು ಪೋಷಕರು ನಿಶ್ಚಯಿಸಿದ್ದರು. ಆಗ ಎಚ್ಚೆತ್ತುಕೊಂಡ ಅಪರಾಧಿ ಮತ್ತು ಪ್ರೇಯಸಿ ಮದುವೆಯಾಗಲು ನಿರ್ಧರಿಸಿದರು. ಮದುವೆಗೆಂದು ಆತ ಪೆರೋಲ್‌ಗೆ ಮನವಿ ಮಾಡಿದ್ದ. ಆದರೆ, ಜೈಲು ಅಧಿಕಾರಿಗಳು ಅದನ್ನು ಪರಿಗಣಿಸಿರಲಿಲ್ಲ. ಹೀಗಾಗಿ ಅರ್ಜಿದಾರನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಮನ್ನಿಸಿದ ಹೈಕೋರ್ಟ್ 2023ರ ಮಾರ್ಚ್ 31ರಂದು 15 ದಿನ ಪೆರೋಲ್ ಮಂಜೂರು ಮಾಡಿತ್ತು.
ಏಪ್ರಿಲ್ 5ರಿಂದ ಏಪ್ರಿಲ್ 20ರ ಸಂಜೆ 6 ಗಂಟೆಯವರೆಗೆ ಪೆರೋಲ್ ನೀಡಲಾಗಿತ್ತು. ಆತ ಏಪ್ರಿಲ್ 11ರಂದು ನೋಂದಣಿ ಮೂಲಕ ಮದುವೆಯಾಗಿದ್ದ. ಈ ನಡುವೆ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಡಿ ಮೋಹನ್ ಕುಮಾರ್ ಅವರು, ಪ್ರಕರಣದಲ್ಲಿ ಹೈಕೋಟ್ ಪೆರೋಲ್ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರ ತನ್ನ ಪ್ರೇಯಸಿಯನ್ನು ಏಪ್ರಿಲ್ 11ರಂದು ವಿವಾಹವಾಗಿದ್ದಾರೆ. ಆದರೆ, ಹಿಂದೂ ಧರ್ಮದ ಸಂಪ್ರದಾಯ ಮತ್ತು ಆಚರಣೆ ಅನ್ವಯ ಜೂನ್ ಮೊದಲ ವಾರದಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಅರ್ಜಿದಾರನ ಪತ್ನಿಯ ಪೋಷಕರು ನಿಶ್ಚಯಿಸಿದ್ದಾರೆ. ಆದರೆ, ಈ ಹಿಂದೆ ಮಂಜೂರು ಮಾಡಿದ ಪೆರೋಲ್ ಅವಧಿ ಏಪ್ರಿಲ್ 20ಕ್ಕೆ ಕೊನೆಯಾಗಲಿದ್ದು, ಮತ್ತೆ 60 ದಿನಗಳ ಕಾಲ ಪೆರೋಲ್ ವಿಸ್ತರಿಸಬೇಕು ಎಂದು ಕೋರಿದ್ದರು.
ಹೈಕೋರ್ಟ್ ಕೆಲವು ಷರತ್ತುಗಳೊಂದಿಗೆ ಇದಕ್ಕೆ ಒಪ್ಪಿದೆ. ಆದರೆ, ಪದೇಪದೆ ಇದೇ ಮಾದರಿಯ ಕಾರಣ ನೀಡಿ ಪೆರೋಲ್ ವಿಸ್ತರಣೆ ಕೋರಬಾರದು ಎಂದು ಎಚ್ಚರಿಸಿದೆ. ಪೆರೋಲ್ ನೀಡಿದ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಸಂಬಂಧಪಟ್ಟ ಠಾಣೆಗೆ ಹಾಜರಾಗಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಇದನ್ನೂ ಓದಿ : Highway Toll : 10 ರೂ. ಹೆಚ್ಚುವರಿ ಟೋಲ್ ಸಂಗ್ರಹಿಸಿದ್ದಕ್ಕೆ ಕೋರ್ಟ್‌ಗೆ ಹೋದಾಗ ಸಿಕ್ಕಿತು 8000 ರೂ. ಪರಿಹಾರ!