ಬೆಂಗಳೂರು: ಅವರೊಬ್ಬ ನಿವೃತ್ತ ಸರ್ಕಾರಿ ನೌಕರ. ಈಗ 80 ವರ್ಷದ ವೃದ್ಧ. ಮೂವತ್ತಾರು ವರ್ಷದ ಹಿಂದೆ ಸರ್ಕಾರಿ ಉದ್ಯೋಗಿಯಾಗಿದ್ದಾಗ ವಿಧವಾ ವೇತನ ದುರ್ಬಳಕೆ ಮಾಡಿದ್ದ ಆರೋಪ ಅವರ ಮೇಲಿತ್ತು. ಈ ಆರೋಪದ ವಿಚಾರಣೆ ನಡೆದು ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಈಗ ಹೈಕೋರ್ಟ್ (High court order) ಅವರ ವಯಸ್ಸು, ಅವರ ಆರೋಗ್ಯ ಸಮಸ್ಯೆಗಳು, ಅವರ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷೆಯನ್ನು ಒಂದು ದಿನಕ್ಕೆ ಇಳಿಸಿದೆ. ಮೈಸೂರು ಜಿಲ್ಲೆಯ ಕೆ ಆರ್ ನಗರದ ನಿವಾಸಿ ಹನುಮಂತ ರಾವ್ ಅವರೇ ಶಿಕ್ಷೆಗೊಳಗಾಗಿ, ಶಿಕ್ಷೆ ಕಡಿತಕ್ಕೆ ಒಳಗಾದ ನಿವೃತ್ತ ಸರ್ಕಾರಿ ನೌಕರ.
ಏನಿದು ವಿಧವಾ ವೇತನ ದುರ್ಬಳಕೆ ಪ್ರಕರಣ?
ಮೈಸೂರಿನ ಹನುಮಂತ ರಾವ್ ಅವರು 1981ರ ನವೆಂಬರ್ 21ರಿಂದ 1987ರ ಜನವರಿ 5ರ ಅವಧಿಯಲ್ಲಿ ಮಂಡ್ಯದ ಕೆ ಆರ್ ಪೇಟೆಯಲ್ಲಿ ರಾಜ್ಯ ಖಜಾನೆ ಇಲಾಖೆ ಅಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ವಿಧವಾ ವೇತನ ಮಂಜೂರಾತಿಯಲ್ಲಿ 54,299 ರೂಪಾಯಿ ದುರ್ಬಳಕೆ ಮಾಡಿದ ಆರೋಪ ಎದುರಾಗಿತ್ತು. ಲೆಕ್ಕ ಪರಿಶೋಧನೆ ವೇಳೆ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡ ಹಣವನ್ನು 1987ರ ಜನವರಿ 31ರ ಅಂತ್ಯದ ವೇಳೆಗೆ ಹಿಂದಿರುಗಿಸುವಂತೆ ನೋಟಿಸ್ ಜಾರಿಗೊಳಿಸಿತ್ತು. ನಂತರ ಆ ಮೊತ್ತವನ್ನು ರಾವ್ ವೇತನದಿಂದ ಕಡಿತ ಮಾಡಿತ್ತು.
ಈ ನಡುವೆ ಅಂದಿನ ಮಂಡ್ಯ ಜಿಲ್ಲಾ ಖಜಾನೆ ಅಧಿಕಾರಿ ಸಿ.ಎಸ್ ಮುತ್ತಣ್ಣ, ಸರ್ಕಾರಿ ಆಸ್ತಿಗೆ ಸಂಬಂಧಿಸಿದಂತೆ ನಂಬಿಕೆ ದ್ರೋಹ (ಐಪಿಸಿ ಸೆಕ್ಷನ್ 409) ಮತ್ತು ಸುಳ್ಳು ಲೆಕ್ಕ ಬರೆದ (ಐಪಿಸಿ ಸೆಕ್ಷನ್ 477ಎ) ಆರೋಪ ಸಂಬಂಧ ಕೆ ಆರ್ ಪೇಟೆ ಪೊಲೀಸ್ ಠಾಣೆಗೆ ಕ್ರಿಮಿನಲ್ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆ ಆರ್ ಪೇಟೆ ಜೆಎಂಎಫ್‌ಸಿ ನ್ಯಾಯಾಲಯವು ಈ ಎರಡೂ ಅಪರಾಧಗಳಿಗೆ ತಲಾ ಒಂದು ವರ್ಷ ಶಿಕ್ಷೆ ಮತ್ತು 3 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿತ್ತು. ಈ ಆದೇಶ ಹೊರಬಿದ್ದಿದ್ದು ಘಟನೆ ನಡೆದು 24 ವರ್ಷಗಳ ಬಳಿಕ ಅಂದರೆ, 2009ರ ಏಪ್ರಿಲ್ 8ರಂದು. ಈ ಆದೇಶವನ್ನು ಮಂಡ್ಯದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಎತ್ತಿ ಹಿಡಿದಿತ್ತು. ಆಗಲೇ ಸೇವೆಯಿಂದ ನಿವೃತ್ತರಾಗಿದ್ದ ಹನುಮಂತ್ ರಾವ್ ಅವರು ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ
ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಹನುಮಂತ ರಾವ್ ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದ್ದು, ಶಿಕ್ಷೆಯನ್ನು ಕಡಿಮೆ ಮಾಡಿದೆ.
ಹನುಮಂತ ರಾವ್ ಪರ ವಕೀಲರ ವಾದ ಏನಿತ್ತು?
ಅರ್ಜಿದಾರರ ಪರ ವಾದ ಮಾಡಿದ ವಕೀಲ ಎಂ ಬಿ ಚಂದ್ರಚೂಡ್ ಅವರು “ಹನುಮಂತ ರಾವ್ ಅವರಿಗೆ ಸದ್ಯ 80 ವರ್ಷ. ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದಾರೆ. ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 1987ರಲ್ಲಿಯೇ ಸರ್ಕಾರವು ವಸೂಲಿ ಮಾಡಿದೆ. ನಿವೃತ್ತ ನೌಕರರಾದ ಅರ್ಜಿದಾರರು ಎಸಗಿದ ಮೊದಲ ಅಪರಾಧ ಕೃತ್ಯ ಇದಾಗಿದೆ. ರಾವ್ ಅವರು ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಆದ್ದರಿಂದ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು” ಎಂದು ಮನವಿ ಮಾಡಿದ್ದರು.
ಶಿಕ್ಷೆ ಕಡಿಮೆ ಮಾಡಿದ ಆದೇಶಕ್ಕೆ ಕೋರ್ಟ್ ನೀಡಿದ ಕಾರಣ
ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ಎತ್ತಿಹಿಡಿಯಲಾಗಿದೆ. ಆದರೆ, ಆರೋಪಿಗೆ 80 ವರ್ಷ ಆಗಿರುವ ಮತ್ತು ದುರ್ಬಳಕೆ ಮಾಡಿಕೊಂಡಿದ್ದ ಹಣವನ್ನು 36 ವರ್ಷಗಳ ಹಿಂದೆಯೇ ಸರ್ಕಾರ ವಸೂಲಿ ಮಾಡಿರುವ ಅಂಶ ಪರಿಗಣಿಸಿ ಒಂದು ವರ್ಷದ ಜೈಲು ಶಿಕ್ಷೆಯನ್ನು ಒಂದು ದಿನಕ್ಕೆ (ನ್ಯಾಯಾಲಯದ ಕಲಾಪ ಆರಂಭವಾಗಿ ಮುಕ್ತಾಯಗೊಳ್ಳುವ ಅವಧಿಯವರೆಗೆ) ಕಡಿತಗೊಳಿಸಲಾಗಿದೆ” ಎಂದು ಹೈಕೋರ್ಟ್ ಹೇಳಿದೆ.
-ಅರ್ಜಿದಾರರಿಗೆ 80 ವರ್ಷವಾಗಿದೆ. ಅವರು ಎಸಗಿದ್ದಾರೆ ಎನ್ನಲಾದ ಅಪರಾಧ ಕೃತ್ಯ 36 ವರ್ಷಗಳ ಹಿಂದೆ ನಡೆದಿದೆ.
-ಇದು ಅವರು ಎಸಗಿದ ಮೊದಲ ಅಪರಾಧ. ಇತರೆ ಅಪರಾಧಿಕ ಹಿನ್ನೆಲೆ ಇಲ್ಲ.
ದಂಡ ಪಾವತಿ ಕಡ್ಡಾಯ, ಇಲ್ಲವಾದರೆ ಶಿಕ್ಷೆ
ಆದರೆ, ಹನುಮಂತ ರಾವ್ ಅವರು ಎರಡೂ ಅಪರಾಧಗಳಿಗೆ ಸಂಬಂಧಿಸಿ ತಲಾ 10 ಸಾವಿರ ರೂಪಾಯಿ ದಂಡ ಪಾವತಿಸಬೇಕು. ತಪ್ಪಿದರೆ 3 ತಿಂಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೂಡಾ ಕೋರ್ಟ್ ಹೇಳಿದೆ.
ಇದನ್ನೂ ಓದಿ : Bombay High Court: ಮದುವೆ ಆಗದ ಮಾತ್ರಕ್ಕೆ ಸಂಬಂಧದಲ್ಲಿದ್ದ ಮಹಿಳೆ ರೇಪ್ ದೂರು ನೀಡಲಾಗದು: ಬಾಂಬೆ ಹೈಕೋರ್ಟ್