ಬೆಂಗಳೂರು: ಹಲವು ವರ್ಷಗಳ ಕಾಲ ಪರಸ್ಪರ ಒಪ್ಪಿತ ಲೈಂಗಿಕ ಸಂಪರ್ಕ (Consesual sex) ಇಟ್ಟುಕೊಂಡು ಬಳಿಕ ಸಂಬಂಧ ಸರಿ ಹೋಗಿಲ್ಲ ಎಂದು ಅತ್ಯಾಚಾರ (Physical abuse) ಎಂದು ಬೊಬ್ಬೆ ಹಾಕಿದರೆ ನಾವು ನಂಬಬೇಕಾ?; ಹೀಗೆಂದು ಗರಂ ಆಗಿ ಪ್ರಶ್ನೆ ಕೇಳಿದೆ ರಾಜ್ಯ ಹೈಕೋರ್ಟ್ (Karnataka high court)! ಹೀಗೆ ಮಾಡುವುದು ಕಾನೂನಿನ ದುರುಪಯೋಗ (Misuse of Law) ಕೂಡಾ ಹೌದು ಎಂದು ಹೇಳಿದೆ.
ಅವನು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು 2019ರಲ್ಲಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ ಕ್ರಿಮಿನಲ್ ಮೊಕದ್ದಮೆ ಮತ್ತು ಅದನ್ನು ರದ್ದು ಮಾಡುವಂತೆ ಕೋರಿದ ವ್ಯಕ್ತಿಯ ದಾವೆಗಳ ವಿಚಾರಣೆ ಸಂದರ್ಭದಲ್ಲಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಇಂಥ ಸುಳ್ಳು ಮೊಕದ್ದಮೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಏನಿದು ಪ್ರಕರಣ, ನ್ಯಾಯಾಲಯ ಸಿಟ್ಟಾಗಿದ್ದೇಕೆ?
ಆ ಮಹಿಳೆ ಬೆಂಗಳೂರಿನ ಇಂದಿರಾ ನಗರದವರು. ಗಂಡಸು ಮೂಲತಃ ದಾವಣಗೆರೆಯವರು. ಆದರೆ, ಇದ್ದಿದ್ದು ಬೆಂಗಳೂರಲ್ಲಿ 2013ರಲ್ಲಿ ಅವರಿಬ್ಬರಿಗೆ ಫೇಸ್ ಬುಕ್‌ನಲ್ಲಿ ಪರಿಚಯವಾಗಿದೆ. ಇನ್‌ಬಾಕ್ಸ್‌ನಲ್ಲಿ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಇಬ್ಬರೂ ಒಂದೇ ಪ್ರದೇಶದಲ್ಲಿ ಇದ್ದುದರಿಂದ ಸರಸಕ್ಕೆ ಶುರು ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ಅದು ದೈಹಿಕ ಸಂಬಂಧಕ್ಕೆ ತಿರುಗಿದ್ದಾರೆ. ಮುಂದಿನ ಆರು ವರ್ಷಗಳ ಕಾಲ ಅವರ ಸ್ನೇಹ ಸಂಬಂಧ ಲೈಂಗಿಕ ಸಂಬಂಧವಾಗಿ ಹಲವು ಬಾರಿ ಅವರಿಬ್ಬರು ಭೇಟಿಯಾಗಿದ್ದಾರೆ.
2019ರಲ್ಲಿ ಅವರಿಬ್ಬರ ನಡುವಿನ ಸಂಬಂಧ ಹಳಸಿದೆ. ಅವನು ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ ಎನ್ನುವುದು ಮಹಿಳೆಯ ದೂರು. ಹೀಗಾಗಿ ಆಕೆ ಅವನು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು 2021ರ ಮಾರ್ಚ್ 8ರಂದು ಬೆಂಗಳೂರಿನ ಇಂದಿರಾ ನಗರ ಠಾಣೆಯಲ್ಲಿ ದೂರು ನೀಡಿದರು.
ಯುವತಿಯ ದೂರಿನ ಆಧಾರದಲ್ಲಿ ಪೊಲೀಸರು ಆತನನ್ನು ಬಂಧಿಸಿದರು. ಈ ನಡುವೆ ಕೋರ್ಟ್‌ನಿಂದ ಜಾಮೀನು ಪಡೆದ ವ್ಯಕ್ತಿ ಬಳಿಕ ದಾವಣಗೆರೆಗೆ ಹೋಗಿ ನೆಲೆಸಿದರು. ಆತ ದಾವಣಗೆರೆಯಲ್ಲಿ ಇರುವುದನ್ನು ತಿಳಿದ ಯುವತಿ ಅಲ್ಲಿನ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ತಮ್ಮ ಗೋಳು ತೋಡಿಕೊಂಡರು. ಈ ನಿಟ್ಟಿನಲ್ಲಿ ಪೊಲೀಸರು ಆ ವ್ಯಕ್ತಿ ಮತ್ತು ಇನ್ನೊಬ್ಬ ಮಹಿಳೆಯ ಮೇಲೆ ಕೇಸು ದಾಖಲಿಸಿಕೊಂಡರು ಮತ್ತು ಎರಡೂ ಪ್ರಕರಣಗಳಲ್ಲಿ ಜಾರ್ಜ್ ಶೀಟ್ ಸಲ್ಲಿಕೆಯಾಯಿತು.
ಈ ಎರಡೂ ಚಾರ್ಜ್‌ಶೀಟ್‌ಗಳನ್ನು ರದ್ದು ಮಾಡಿ ಎಂದು ಕೋರಿ ಆರೋಪಿತ ವ್ಯಕ್ತಿ ಹೈಕೋರ್ಟ್ ಮೊರೆಹೊಕ್ಕಿದ್ದರು. ಅರ್ಜಿಯನ್ನು ಪರಿಗಣಿಸಿದ ಕೋರ್ಟ್ ಇದೀಗ ಬೆಂಗಳೂರಿನ ಇಂದಿರಾ ನಗರ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೂಡಲಾದ ಎರಡೂ ಪ್ರಕರಣಗಳನ್ನು ರದ್ದು ಮಾಡಿದೆ.
ಇದನ್ನೂ ಓದಿ : High Court : ಹೌದು, 1ನೇ ತರಗತಿ ಪ್ರವೇಶಿಸಲು ಮಗುವಿಗೆ 6 ವರ್ಷ ಆಗಿರಲೇಬೇಕು; ಸರ್ಕಾರದ ನಿರ್ಧಾರಕ್ಕೆ ಹೈ ಜೈ!
ಕೋರ್ಟ್ ಪ್ರಕರಣ ರದ್ದು ಮಾಡಲು ಕಾರಣವಾದ ಅಂಶ ಯಾವುದು?
- ಫೇಸ್‌ಬುಕ್ ಮೂಲಕ ಪರಿಚಿತರಾದ ಅರ್ಜಿದಾರರು ಮತ್ತು ದೂರುದಾರರು ಒಂದಲ್ಲ, ಎರಡಲ್ಲ, ಆರು ವರ್ಷ ದೈಹಿಕ ಹಾಗೂ ಲೈಂಗಿಕ ಸಂಬಂಧ ಹೊಂದಿದ್ದಾರೆ.
- ಸಂಬಂಧ ಹಳಸಿದ ನಂತರ 2019ರಲ್ಲಿ ಅತ್ಯಾಚಾರ ಆರೋಪ ಮಾಡಲಾಗಿದೆ.
- ಯಾವುದೇ ಸಾಕ್ಷ್ಯಗಳಿಲ್ಲದೆ ಈ ರೀತಿ ಸುಮ್ಮನೆ ಅತ್ಯಾಚಾರ ಆರೋಪ ಮಾಡುವುದು ಸರಿಯಲ್ಲ.
- ಆರು ವರ್ಷಗಳ ಕಾಲ ದೈಹಿಕ ಸಂಬಂಧವಿಟ್ಟುಕೊಂಡು ನಂತರ ಅತ್ಯಾಚಾರ ಎಸಗಿದ್ದಾರೆ ಎಂದರೆ ಅದು ಅತ್ಯಾಚಾರವಾಗುವುದಿಲ್ಲ ಮತ್ತು ಅದಕ್ಕೆ ಸೆಕ್ಷನ್ 376ರ ಅಡಿ ಶಿಕ್ಷೆಯನ್ನೂ ನೀಡಲಾಗದು.
- ಕ್ರಿಮಿನಲ್ ಪ್ರಕರಣಗಳನ್ನು ಮುಂದುವರಿಸಲು ಬಿಟ್ಟರೆ, ಇದು ನ್ಯಾಯಾಂಗದ ದುರ್ಬಳಕೆಯಾಗಲಿದೆ.