Site icon Vistara News

High tension danger : ಹೈ ಟೆನ್ಶನ್‌ ವಯರ್‌ಗೆ ವರ್ಷದಲ್ಲಿ 6 ಬಲಿ, ಅಬೂಬಕರ್‌ ಸಾವಿನ ಪ್ರಕರಣದಲ್ಲಿ ಎಫ್‌ಐಆರ್‌

Kite death

ಬೆಂಗಳೂರು: ಬೆಂಗಳೂರಿನಲ್ಲಿ ಹೈಟೆನ್ಶನ್ ವಯರ್‌ಗಳು (High tension danger) ಮೃತ್ಯುಪಾಶಗಳಾಗುತ್ತಿರುವುದಕ್ಕೆ ಇನ್ನೊಂದು ಉದಾಹರಣೆ ಸಿಕ್ಕಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆರ್ ಟಿ ನಗರ ನಿವಾಸದ ಕೂಗಳತೆಯ ದೂರದಲ್ಲೇ ಇರುವ ವಿವಿ ನಗರದಲ್ಲಿ ಎರಡು ದಿನಗಳ ಹಿಂದೆ ಅಬೂಬಕರ್‌ ಎಂಬ ೧೧ ವರ್ಷದ ಬಾಲಕ ಗಾಳಿಪಟ ಹಾರಿಸುತ್ತಿದ್ದಾಗ ಹೈಟೆನ್ಶನ್‌ ವಿದ್ಯುತ್‌ ಲೈನ್‌ ತಗುಲಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಇದಕ್ಕೆ ಬೆಸ್ಕಾಂ, ಬಿಬಿಎಂಪಿ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.

ಪ್ರಾಣ ಕಳೆದುಕೊಂಡ ಆರು ಮಂದಿ
ಇದರ ಜತೆಗೆ ಬೆಂಗಳೂರಿನಲ್ಲಿ ಹೈಟೆನ್ಶನ್‌ ವಯರ್‌ಗಳ ಅವಘಡದಿಂದ ಬೆಂಗಳೂರಿನಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು ಕೂಡಾ ಚರ್ಚೆಯಲ್ಲಿದೆ.
ಕಳೆದ ವರ್ಷ ಡಿಸೆಂಬರ್​ 1 ರಂದು ಮಹಾಲಕ್ಷ್ಮಿ ಲೇಔಟ್​ನಲ್ಲಿ ಹೈಟೆನ್ಷನ್​ ವಿದ್ಯುತ್​ ತಂತಿ ತಗುಲಿ ಸುಪ್ರೀತ್​ ಹಾಗೂ ಚಂದ್ರು ಎಂಬ ಹುಡುಗರು ಪ್ರಾಣ ಕಳೆದುಕೊಂಡಿದ್ದರು. ಅದರ ಬೆನ್ನಿಗೇ ಈಗ ಆರ್‌ಟಿ ನಗರದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ 11 ವರ್ಷದ ಬಾಲಕ ಅಬೂಬಕರ್‌ ಮೃತಪಟ್ಟಿದ್ದಾನೆ.ಕಳೆದ ವರ್ಷ ಸೆಪ್ಟಂಬರ್ 6ರಂದು ಮಳೆಯ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ 23 ವರ್ಷದ ಯುವತಿ ಅಖಿಲ ಮೃತಪಟ್ಟರೆ, ಜುಲೈ 17ರಂದು ಯಶವಂತಪುರ ಠಾಣೆ ವ್ಯಾಪ್ತಿಯ ಷರೀಫ್‌ ನಗರದಲ್ಲಿ ಗಾಳಿಯಿಂದಾಗಿ ತುಂಡಾದ ವಿದ್ಯುತ್ ತಂತಿ ಮೈ ಮೇಲೆ ಬಿದ್ದು 12 ವರ್ಷದ ಬಾಲಕ ಲೂಕ್ಮನ್ ಮೃತಪಟ್ಟಿದ್ದ. ಆನೇಕಲ್ ಬಳಿ ಬೆಸ್ಕಾಂ ಟ್ರಾನ್ಸ್ಫಾರ್ಮರ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿದ ಹಿನ್ನೆಲೆ ಪವನ್‌ ಎಂಬ ಯುವಕನ ಸಾವು ಸಂಭವಿಸಿತ್ತು. ಇದೆಲ್ಲವೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಗಿರುವ ದುರ್ಘಟನೆಗಳು ಎನ್ನುವುದು ಜನರ ನೇರ ಆರೋಪ.

ಹೈಟೆನ್ಶನ್‌ ವಯರ್‌ಗಿಂತ ಎತ್ತರದಲ್ಲಿ ಮನೆಗಳು!
ಆರ್‌ ಟಿ ನಗರದಲ್ಲಿ ಬಾಲಕ ಅಬೂಬಕರ್‌ ತಾನು ಹಾರಿಸಿದ ಗಾಳಿಪಟ್ಟ ವಯರ್‌ನಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಬಿಡಿಸಲು ಹೋಗಿದ್ದ. ಮನೆಯ ಪಕ್ಕದಲ್ಲೇ ಹಾದು ಹೋದ ಈ ತಂತಿ ವಿದ್ಯುತ್‌ ಪ್ರವಹಿಸುವ ವಯರ್‌ ಎನ್ನುವುದು ಅವನಿಗೆ ಗೊತ್ತಿರಲಿಲ್ಲ. ಹೀಗಾಗಿ ಅದನ್ನು ಸ್ಪರ್ಶಿಸಿದ್ದರಿಂದ ಇಡೀ ದೇಹವೇ ಸುಟ್ಟುಹೋಗಿ ಎರಡು ದಿನಗಳ ಚಿಕಿತ್ಸೆಯ ಬಳಿಕ ಪ್ರಾಣ ಕಳೆದುಕೊಂಡಿದ್ದಾನೆ.

ನಿಯಮ ಮೀರಿ ಹೈಟೆನ್ಶನ್ ಲೈನ್ ಗಿಂತ ಎತ್ತರದಲ್ಲಿ ಮನೆಗಳನ್ನ ಕಟ್ಟಲಾಗಿದೆ. ಇದಕ್ಕೆ ಅನುಮತಿ ಕೊಟ್ಟ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಮೃತ ಬಾಲಕನ ತಾಯಿ, ಆರ್ ಟಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಹೈಟೆನ್ಶನ್ ಲೈನ್ ತೂಗುವ ಸ್ಥಿತಿಯಲ್ಲಿದ್ದು ಮನೆಯ ಮಹಡಿಯಿಂದ ಕೈಗೆ ತಾಕುವಂತಿದೆ. ಹೈ ಟೆನ್ಶನ್ ಲೈನ್ ಗೆ ಈ ಹಿಂದೆ ನಾಲ್ವರು ಬಾಲಕರು ಮೃತಪಟ್ಟಿದ್ದರಂತೆ.

ಘಟನೆ ನಡೆದು ಎರಡು ದಿನವಾದರೂ ಬೆಸ್ಕಾಂ, ಪಾಲಿಕೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದರು. ಇನ್ನು ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ರು. ನಂತರ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಬಳಿಕ ದೂರು ಕೂಡ ದಾಖಲಾಯಿತು.

ಬಿಬಿಎಂಪಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ವಿರುದ್ಧ ಬಾಲಕನ ತಂದೆ ದೂರು ದಾಖಲಿಸಿದ್ದು, ಅದರ ಆಧಾರದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ | Kite tragedy | ಗಾಳಿಪಟ ಹಾರಿಸುವಾಗ ಹೈಟೆನ್ಶನ್‌ ವಯರ್‌ ತಗುಲಿ 11 ವರ್ಷದ ಬಾಲಕ ದಾರುಣ ಬಲಿ

Exit mobile version