ಬೆಂಗಳೂರು: ಕೊನೆಗೂ ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಸಮಯ ಕೂಡಿಬಂದಿದ್ದು, ದೊಡ್ಡಬಳ್ಳಾಪುರದಲ್ಲಿ ಇಂದು ನಡೆಯಲಿದೆ. ಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರೆಲ್ಲ ಒಗ್ಗಟ್ಟು ಪ್ರದರ್ಶಿಸುವ ನಿರೀಕ್ಷೆಯಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಎಂ.ಡಿ ಲಕ್ಷ್ಮೀನಾರಾಯಣ ಸೇರಿದಂತೆ ಕೆಲವು ನಾಯಕರು ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ವೇದಿಕೆ ಮೇಲೆ ಎಲ್ಲ ನಾಯಕರು ಒಗ್ಗಟ್ಟು ಪ್ರದರ್ಶಿಸಿ 2023ರಲ್ಲಿ 150 ಸೀಟುಗಳ ಮಿಷನ್ ಗುರಿ ಮುಟ್ಟುವ ಜಪ ಮಾಡಲಿದ್ದಾರೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಫಲಾನುಭವಿಗಳನ್ನು ಉದ್ದೇಶಿಸಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಲಿರುವ ಭಾಷಣ ಗಮನ ಸೆಳೆಯಲಿದ್ದು, ಹೊಸ ಯೋಜನೆ ಘೋಷಣೆ ಮಾಡುತ್ತಾರೆಯೇ ಎಂಬ ಕುತೂಹಲ ಇದೆ. ವಸತಿ, ಲೋಕೋಪಯೋಗಿ, ಆರೋಗ್ಯ, ಕಂದಾಯ ಇಲಾಖೆಯ ಅಡಿಯಲ್ಲಿ ಪ್ರಯೋಜನ ಪಡೆದ ಫಲಾನುಭವಿಗಳಿಗೆ ವೇದಿಕೆಗೆ ಕರೆಸಿ ಪತ್ರ ವಿತರಿಸಲಾಗುತ್ತದೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೂ ಭಾಷಣ ಮಾಡಲಿದ್ದು, ಭಾಷಣದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ಸಮಾವೇಶದಿಂದಲೇ ಕಾರ್ಯಕರ್ತರಿಗೆ ಉತ್ಸಾಹ ಮೂಡಿಸುವ, ಕಾಂಗ್ರೆಸ್‌ಗೆ ಸಂದೇಶ ರವಾನೆ ಮಾಡಲಿದ್ದಾರೆ. ಕಾಂಗ್ರೆಸ್‌ನ ಸಿದ್ದರಾಮೋತ್ಸವಕ್ಕೆ ದೊರೆತ ಪ್ರತಿಕ್ರಿಯೆಯನ್ನು ನೋಡಿ ಬೆಚ್ಚಿರುವ ಬಿಜೆಪಿ, ಅದಕ್ಕೆ ಪ್ರತಿಕ್ರಿಯೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಲಿದೆ.
ಇದೆಲ್ಲದಕ್ಕೂ ಮೊದಲು ಗುರುನಾರಾಯಣ ಗುರೂಜಿ, ಸಚಿವ ದಿವಂಗತ ಉಮೇಶ್ ಕತ್ತಿ, ಇತ್ತೀಚೆಗಷ್ಟೇ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಪ್ರಾರಂಭವಾಗಲಿದೆ.
ಇದನ್ನೂ ಓದಿ | ಮೂರು ಸಲ ಮುಂದೂಡಿದ ಜನಸ್ಪಂದನ ಇಂದು ದೊಡ್ಡಬಳ್ಳಾಪುರದಲ್ಲಿ | 3 ಲಕ್ಷ ಜನ ನಿರೀಕ್ಷೆ