ಕೊಪ್ಪಳ/ಮಂಡ್ಯ: ಕೊಪ್ಪಳ ತಾಲೂಕಿನ ಮಂಗಳಾಪುರ ಕ್ರಾಸ್ ಬಳಿ ರಸ್ತೆ ವಿಭಜಕಕ್ಕೆ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಾಯಿ, ಮಗ ಮೃತಪಟ್ಟಿದ್ದರೆ, 9 ಮಂದಿಗೆ ಗಂಭೀರ ಗಾಯಗಳಾಗಿವೆ. ಇನ್ನು ಮಂಡ್ಯದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕೊಪ್ಪಳ ತಾಲೂಕಿನ ಮಂಗಳಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 63ರ ಡಿವೈಡರ್‌ಗೆ ಮಿನಿ ಲಾರಿಯೊಂದು ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ವೇಳೆ ಲಾರಿಯಲ್ಲಿದ್ದ ರೇಣುಕಮ್ಮ (50), ಪ್ರಭು (25) ಮೃತಪಟ್ಟಿದ್ದಾರೆ. ಮೃತರು ಕೊಪ್ಪಳ ನಗರದ ತೆಗ್ಗಿನಕೇರಿ ನಿವಾಸಿಗಳಾಗಿದ್ದಾರೆ. ಇನ್ನೂ 9 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳು ವಿವಿಧ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕುಕನೂರಿನಿಂದ ಕೊಪ್ಪಳಕ್ಕೆ ಈ ಮಿನಿ ಲಾರಿ ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು-ಮೈಸೂರು ಹೈವೇಯಲ್ಲೂ ಅಪಘಾತ
ಮಂಡ್ಯದ ತೂಬಿನಕೆರೆ ಸಮೀಪದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಂಪ್ ಗಮನಿಸದೇ ಇದ್ದ ಪರಿಣಾಪ ಬೊಲೇರೋ ವಾಹನ ಪಲ್ಟಿ ಹೊಡೆದಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದರೆ, ಮತ್ತಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ವೇಳೆ ಅಪಘಾತಕ್ಕೊಳಗಾಗಿ ಗಾಯಗೊಂಡವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಕಾಪಾಡಿ ಕಾಪಾಡಿ ಎಂದು ಗಾಯಾಳುಗಳು ನರಳಾಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು, ಪ್ರಯಾಣಿಕರು, ಗಾಯಳುಗಳನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸಾರ್ವಜನಿಕರ ಜತೆಗೆ ವಿಸ್ತಾರ ನ್ಯೂಸ್ ಸಿಬ್ಬಂದಿಯೂ ನೆರವಿಗೆ ಧಾವಿಸಿದ್ದಾರೆ. ಮೈಸೂರು ಮೂಲದ ಹೇಮಂತ್ ಹಾಗೂ ಲೋಕೇಶ್‌ಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಸರ್ವಿಸ್ ರಸ್ತೆಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಹಂಪ್ಸ್‌ನಿಂದ ಈ ರೀತಿಯಾಗಿದೆ ಎಂದು ಆಪಾದಿಸಲಾಗಿದೆ. ಹಂಪ್ ಇರುವ ಬಗ್ಗೆ ಅಲ್ಲಿ ಯಾವುದೇ ಮಾರ್ಕ್ ಇಲ್ಲ. ಹೀಗಾಗಿ ವೇಗವಾಗಿ ಬರುತ್ತಿದ್ದ ಬೊಲೇರೋ ಚಾಲಕನಿಗೆ ಹಂಪ್ ಕಾಣಿಸಲಿಲ್ಲ. ಹತ್ತಿರಕ್ಕೆ ಬಂದ ತಕ್ಷಣ ಚಾಲಕ ಕೂಡಲೇ ಬ್ರೇಕ್ ಹಾಕಿದ್ದಾನೆ. ಈ ವೇಳೆ ನಿಯಂತ್ರಣಕ್ಕೆ ಸಿಗದೆ ವಾಹನ ಪಲ್ಟಿ ಹೊಡೆದಿದೆ. ಕಾರಿನಲ್ಲಿ ಇದ್ದ ನಾಲ್ವರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು. ಗಾಯಾಳುಗಳು ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: KSRTC Bus Pass: ಶಾಲಾ ಮಕ್ಕಳಿಗೆ ಬಸ್ ಪಾಸ್ ಅವಧಿ ವಿಸ್ತರಣೆ; ಎಷ್ಟು ದಿನಕ್ಕೆ ಅವಕಾಶ, ಏನಿದೆ ಕಂಡೀಷನ್?
ವಿಸ್ತಾರ ನ್ಯೂಸ್ ಸಿಬ್ಬಂದಿ ವರದಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ವಿಸ್ತಾರ ನ್ಯೂಸ್‌ನ ಮಂಡ್ಯದ ವಿಡಿಯೊ ಜರ್ನಲಿಸ್ಟ್ ಮಧುಸೂಧನ್ ತಕ್ಷಣವೇ ಗಾಯಾಳುಗಳಿಗೆ ನೀರು ಕುಡಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ