ಬೆಂಗಳೂರು: ಯಾವುದೇ ಸೇವೆಗೆ ನಿಗದಿಗಿಂತ ಹೆಚ್ಚು ಹಣವನ್ನು ಪಡೆದಾಗ ಅದನ್ನು ಪ್ರಶ್ನೆ ಮಾಡಬಹುದು, ಮಾಡಿ ಗೆಲ್ಲಬಹುದು ಎನ್ನುವುದಕ್ಕೆ ಇದು ಉದಾಹರಣೆ. ಟೋಲ್ ಪ್ಲಾಜಾದಲ್ಲಿ 10 ರೂ. ಹೆಚ್ಚುವರಿ ಸಂಗ್ರಹ ಮಾಡಿದ್ದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಏರಿದ್ದ ಗ್ರಾಹಕರೊಬ್ಬರಿಗೆ ಈಗ 8000 ರೂ. ಪರಿಹಾರ ಸಿಕ್ಕಿದೆ. ಹೆಚ್ಚುವರಿಯಾಗಿ ಕಟ್ಟಿಸಿಕೊಂಡ 10 ರೂ. ಜತೆಗೆ ಪರಿಹಾರ ಮತ್ತು ದಾವೆ ವೆಚ್ಚ ಸೇರಿಸಿ 8,000 ರೂ. ಪಾವತಿಸುವಂತೆ ಬೆಂಗಳೂರಿನ ವ್ಯಾಜ್ಯ ಪರಿಹಾರ ಆಯೋಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜೆಎಎಸ್ ಟೋಲ್ ರೋಡ್ ಕಂಪೆನಿ ಲಿಮಿಟೆಡ್‌ಗೆ ಆದೇಶಿಸಿದೆ.
ಏನಿದು ಪ್ರಕರಣ?
ಬೆಂಗಳೂರಿನ ಎಂ.ಬಿ. ಸಂತೋಷ್ ಕುಮಾರ್ ಅವರು ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿರುವ ಜೆಎಎಸ್ ಟೋಲ್ ಪ್ಲಾಜಾದ ಮೂಲಕ 2020ರ ಫೆಬ್ರವರಿ 20ರಿಂದ ಮೇ 16ರವರೆಗೆ ಎರಡು ಬಾರಿ ಓಡಾಡಿದ್ದರು. ನಿಗದಿತ ಶುಲ್ಕದಂತೆ ಒಂದು ಬಾರಿಗೆ 35 ರೂ.ಯನ್ನು ಅವರ ಖಾತೆಯಿಂದ ಕಡಿತ ಮಾಡಬೇಕಿತ್ತು. ಆದರೆ, ಎರಡೂ ಸಂದರ್ಭದಲ್ಲೂ ಅವರಿಂದ 40 ರೂ. ಕಡಿತ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ ಸಂತೋಷ್ ಅವರು 2020ರ ಮಾರ್ಚ್ 10ರಂದು ಹೆಚ್ಚುವರಿ ಟೋಲ್ ಕಡಿತ ಮಾಡಿರುವುದನ್ನು ಸರಿಪಡಿಸುವಂತೆ ಕೋರಿದ್ದರು. ನೋಟಿಸ್ ನೀಡಿದ ಬಳಿಕವೂ ಪ್ರತಿವಾದಿಗಳು ತಪ್ಪು ಸರಿಪಡಿಸಿರಲಿಲ್ಲ. ಅಲ್ಲದೇ, ಹೆಚ್ಚುವರಿಯಾಗಿ ಪಡೆದಿರುವ ಟೋಲ್ ಹಣವನ್ನು ಮರಳಿಸಿರಲಿಲ್ಲ. ಆದರೆ, ಹೆಚ್ಚುವರಿಯಾಗಿ ಹಣ ಸ್ವೀಕರಿಸುವುದನ್ನು ಮುಂದುವರಿಸಿದ್ದರು.
ಹೆಚ್ಚುವರಿಯಾಗಿ ಟೋಲ್‌ನಲ್ಲಿ ಹಣ ಸಂಗ್ರಹಿಸುವ ಮೂಲಕ ಸೇವಾ ನ್ಯೂನತೆ ಎಸಗಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕರಿಂದ ಸಣ್ಣ ಪ್ರಮಾಣದ ಹಣವೇ ಆದರೂ ಅದು ಒಟ್ಟುಗೂಡಿಸಿದರೆ ಭಾರಿ ಮೊತ್ತವಾಗಲಿದೆ. ಚಿಲ್ಲರೆ ಹಣಕ್ಕೆ ದಾವೆ ಹೂಡಿದರೆ ವೆಚ್ಚ ಹೆಚ್ಚಾಗಲಿದೆ ಎಂದು ಯಾರೂ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಆದರೆ, ಸಂತೋಷ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಸಂತೋಷ್ ಕುಮಾರ್ ಅವರು ತಮ್ಮಿಂದ ಹೆಚ್ಚುವರಿಯಾಗಿ ಪಡೆದಿರುವ ಹತ್ತು ರೂಪಾಯಿ ಮರಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಆದೇಶಿಸಬೇಕು. ಇದರ ಜೊತೆಗೆ ₹25,000 ಪರಿಹಾರ ಮತ್ತು ₹15,000 ದಾವೆ ವೆಚ್ಚ ಪಾವತಿಸಲು ಆದೇಶ ಮಾಡಬೇಕು ಎಂದು ಕೋರಿ ದಾವೆ ಹೂಡಿದ್ದರು.
ಸಂತೋಷ್ ಕುಮಾರ್ ಅವರು ಗ್ರಾಹಕ ರಕ್ಷಣಾ ಕಾಯಿದೆ ಸೆಕ್ಷನ್ 35ರ ಅಡಿ ಹೂಡಿದ್ದ ದಾವೆಯನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷ ಬಿ ನಾರಾಯಣಪ್ಪ, ಸದಸ್ಯರಾದ ಜ್ಯೋತಿ ಹಾಗೂ ಎಸ್ ಎಂ ಶರಾವತಿ ಅವರು ಭಾಗಶಃ ಮಾನ್ಯ ಮಾಡಿದ್ದು ಈಗ ಎಂಟು ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
“ಹೆಚ್ಚುವರಿಯಾಗಿ ಟೋಲ್ ಪಡೆದಿರುವುದನ್ನು ಸರಿಪಡಿಸಲು ದೂರುದಾರರು ಅಲ್ಲಿಂದ ಇಲ್ಲಿಗೆ ಎಡತಾಕುವಂತಾಗಿದೆ. ದೂರನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿವಾದಿಗಳು ಯಾವುದೇ ಕ್ರಮಕೈಗೊಂಡಿಲ್ಲ. ವಾಹನ ಸವಾರರು ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದು, ದೂರುದಾರರು ಅಸಮರ್ಪಕ ಶುಲ್ಕ ಕಡಿತದ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಪ್ರತಿವಾದಿಗಳು ಪರಿಹಾರ ಕ್ರಮದ ಬಗ್ಗೆ ಯಾವುದೇ ಜಾಗೃತಿ ವಹಿಸಿಲ್ಲ. ಅಲ್ಲದೇ, ದೂರು ಪರಿಹರಿಸಲು ಯಾವುದೇ ಜವಾಬ್ದಾರಿ ತೆಗೆದುಕೊಂಡಿಲ್ಲ” ಎಂದು ಗ್ರಾಹಕರ ಆಯೋಗ ಆದೇಶದಲ್ಲಿ ಹೇಳಿದೆ.
8000 ರೂ. ಪರಿಹಾರದಲ್ಲಿ ಯಾವುದಕ್ಕೆ ಎಷ್ಟು?
“ದೂರುದಾರರ ಖಾತೆಗೆ ಕಡಿತ ಮಾಡಲಾದ 10 ರೂ. ವಾಪಸ್ ಮಾಡಬೇಕು. ಸೇವಾ ನ್ಯೂನತೆ ಮತ್ತು ಮಾನಸಿಕ ವೇದನೆ ಸೃಷ್ಟಿಸಿದ್ದಕ್ಕಾಗಿ ಪ್ರತಿವಾದಿಗಳಾದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅದರ ಯೋಜನಾ ನಿರ್ದೇಶಕ ಹಾಗೂ ಜೆಎಎಸ್ ಟೋಲ್ ರೋಡ್ ಕಂಪೆನಿ ಲಿಮಿಟೆಡ್ 5,000 ರೂ. ಪರಿಹಾರ ಪಾವತಿಸಬೇಕು. ದಾವೆಯ ವೆಚ್ಚಕ್ಕಾಗಿ 3,000 ರೂ. ಪ್ರತ್ಯೇಕವಾಗಿ ಪಾವತಿಸಬೇಕು. ಇದೆಲ್ಲವೂ ಈ ಆದೇಶವಾದ ಎರಡು ತಿಂಗಳ ಒಳಗೆ ಪಾವತಿಯಾಗಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
ಫಾಸ್ಟ್ ಟ್ಯಾಗ್ ಎಂದು ಸುಮ್ಮನೆ ಉಳಿಯುವಂತಿಲ್ಲ
“ಸ್ವಯಂಚಾಲಿತವಾಗಿ ಟೋಲ್ ಕಡಿತ ಮಾಡುವುದನ್ನು ಫಾಸ್ಟ್‌ಟ್ಯಾಗ್ ಖಾತರಿಪಡಿಸಿದರೂ ಕೆಲವೊಮ್ಮೆ ಸಿಸ್ಟಂನಲ್ಲಿನ ಸಮಸ್ಯೆ ಮತ್ತು ಪ್ರಕ್ರಿಯೆಯಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚು ಟೋಲ್ ಹಣ ಕಡಿತವಾಗುತ್ತದೆ. ತಪ್ಪಾಗಿ ಹಣ ಕಡಿತವಾಗಿರುವುದರ ಮಾಹಿತಿ ಸ್ವೀಕರಿಸುವುದು ತಡವಾಗಿರುವುದರಿಂದ ವಿವಾದ ಆರಂಭವಾಗಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡಾಗ ಆರಂಭದಲ್ಲಿ ಸಮಸ್ಯೆ ಎದುರಾಗುತ್ತದೆ. ಜವಾಬ್ದಾರಿಯುತ ಪ್ರಾಧಿಕಾರವು ಅಹವಾಲು ಆಲಿಸಿ, ಆ ದೋಷವನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ಸರಿಪಡಿಸಬೇಕು. ಜವಾಬ್ದಾರಿಯುತ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಯಾವ ರೀತಿಯಲ್ಲಿ ಮತ್ತು ಹೇಗೆ ದೋಷ ಸರಿಪಡಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು” ಎಂದು ಹೇಳಿದೆ.
ಇದನ್ನೂ ಓದಿ : Karnataka Election: ಸಿಎಂ ಹುದ್ದೆ ಬೇಡ, ಮೋದಿ ನೇತೃತ್ವದಲ್ಲಿ ಕೆಲಸ ಮಾಡುವೆ: ಪ್ರಲ್ಹಾದ್ ಜೋಶಿ ಸ್ಪಷ್ಟ ನುಡಿ