Site icon Vistara News

ಹಿಜಾಬ್ ವಿವಾದ: ಮಂಗಳೂರು ವಿವಿ ಉಪಕುಲಪತಿ ನೇತೃತ್ವದಲ್ಲಿ ಸಭೆ

hijab

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಹಿನ್ನೆಲೆ ಶುಕ್ರವಾರ ಸಂಜೆ ವಿವಿ ಉಪಕುಲಪತಿ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

ನಾನು ಈ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಾತ್ರ. ಯೂನಿವರ್ಸಿಟಿ ಕಾಲೇಜಿನ ಮೇಲ್ವಿಚಾರಕರು ಉಪಕುಲಪತಿ. ಈ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದ ಅವರು, ವಿವಾದದ ಬಗ್ಗೆ ಕಾಲೇಜಿನ ಉಪಕುಲಪತಿಗಳಿಂದ ಹಿಡಿದು ಯಾರೂ ನನ್ನ ಗಮನಕ್ಕೆ ತಂದಿಲ್ಲ. ಉಪಕುಲಪತಿಗಳು, ಜಿಲ್ಲಾಧಿಕಾರಿಗಳು ಅವರ ಮನಸ್ಸಿಗೆ ಬಂದ ಹಾಗೆ ಮಾಡಲು ಆಗಲ್ಲ. ನ್ಯಾಯಾಲಯದ ಆದೇಶ ಪಾಲಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ದೇಶ ಎತ್ತ ಸಾಗುತ್ತಿದೆ?: ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ ಹಿಜಾಬ್‌ ಯುವತಿ ಆಲಿಯಾ

ರಾಜಕೀಯ ಮಾಡಿ ಎಸ್‌ಡಿಪಿಐ, ಪಿಎಫ್ಐ ಮತ್ತು ಕಾಂಗ್ರೆಸ್ ಬೆಂಬಲಿತರು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿದ್ದಾರೆ. ಕಾಲೇಜನ್ನು ಜೆಎಎನ್‌ಯು ಮಾಡಲು ನಾವು ಬಿಡುವುದಿಲ್ಲ. ಸರ್ಕಾರ ಮತ್ತು ಕೋರ್ಟ್ ನಿಯಮಗಳನ್ನು ಪಾಲಿಸದೇ ಇದ್ದರೆ ಅಧ್ಯಾಪಕರೇ ಕೋರ್ಟ್ ಮೆಟ್ಟಿಲು ಹತ್ತಬೇಕಾಗುತ್ತದೆ. ಕಾಲೇಜಿನಲ್ಲಿ ಕೋರ್ಟ್ ನಿಯಮ ಅನುಷ್ಠಾನವಾಗದ ವಿಚಾರ ಗೊತ್ತಾಗಿದೆ. ಇದರಲ್ಲಿ ಯಾರ ನಿರ್ಲಕ್ಷ್ಯ ಇದೆ ಎಂಬುವುದರ ಬಗ್ಗೆ ಸಭೆ ಮಾಡುತ್ತೇವೆ ಎಂದರು.

ವಿದ್ಯಾರ್ಥಿಗಳು ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು. ಕೆಲ ಅಧ್ಯಾಪಕರು ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಬೆಂಬಲ ನೀಡಿರುವ ಆರೋಪ ಇದೆ. ಜವಾಬ್ದಾರಿಯುತ ಅಧ್ಯಾಪಕರು ಈ ರೀತಿ ಮಾಡುವುದು ಸರಿಯಲ್ಲ, ವೈಯಕ್ತಿಕ ಹಿತಾಸಕ್ತಿಗಳನ್ನು ವಿದ್ಯಾರ್ಥಿಗಳ ಮೇಲೆ ಹೇರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಮವಸ್ತ್ರ ಮಾತ್ರ ಧರಿಸಬೇಕು

ವಿವಿ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ಗುರುವಾರ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಕಾಲೇಜಿನಲ್ಲಿ ಸಮವಸ್ತ್ರ ಮಾತ್ರ ಧರಿಸಬೇಕು, ಇಲ್ಲದಿದ್ದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಂಶುಪಾಲೆ ಅನುಸೂಯ ರೈ ಸೂಚಿಸಿದ್ದಾರೆ. ಇಡೀ ಕಾಲೇಜಿನಲ್ಲಿ 44 ಮುಸ್ಲಿಂ ಮಕ್ಕಳಿದ್ದು, ವಿವಾದ ಒಂದು ತಂಡದಿಂದಷ್ಟೇ ಆಗಿದೆ. 15 ಮಂದಿ ವಿದ್ಯಾರ್ಥಿಗಳಷ್ಟೇ ಹಿಜಾಬ್ ಕುರಿತು ಮಾತನಾಡುತ್ತಿದ್ದಾರೆ. ಗುರುವಾರ ಅವರು ಬಂದಾಗ, ಹಿಜಾಬ್ ತೆಗೆದು ಬನ್ನಿ ಎಂದು ಕಳುಹಿಸಿದ್ದೇವೆ. ಹಾಗಾಗಿ ಅವರು ನಿನ್ನೆ ಡಿಸಿ ಕಚೇರಿಗೆ ಹೋಗಿದ್ದರು, ಆ 15 ಮಂದಿ ಇವತ್ತು ತರಗತಿಗೆ ಬಂದಿಲ್ಲ. ಅವರನ್ನ ಬಿಟ್ಟು ಉಳಿದ ಕೆಲ ಮಕ್ಕಳು ಹಿಜಾಬ್ ತೆಗೆದು ಕಾಲೇಜಿಗೆ ಬಂದಿದ್ದಾರೆ ಎಂದು ಅನುಸೂಯ ರೈ ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ಹೈಕೋರ್ಟ್ ತೀರ್ಪಿನ ಬಳಿಕ ಕಾಲೇಜಿಗೆ ಬರುತ್ತಿಲ್ಲ. ಮೂರ್ನಾಲ್ಕು ವಿದ್ಯಾರ್ಥಿಗಳು ಟಿಸಿ ತೆಗೆದುಕೊಂಡು ಹೋಗಿದ್ದಾರೆ. ಇದು 15 ವಿದ್ಯಾರ್ಥಿಗಳ ಸಮಸ್ಯೆಯಾಗಿದೆ.‌ ಹಿಜಾಬ್‌ ನಿಷೇಧಕ್ಕೆ ಶಾಸಕರಿಂದ ಯಾವುದೇ ಒತ್ತಡ ಬಂದಿಲ್ಲ, ಕೋರ್ಟ್ ತೀರ್ಪಿನ ಮೊದಲು ಕಾಲೇಜಿನಲ್ಲಿ ಶಿರವಸ್ತ್ರ ಹಾಕಲು ಅವಕಾಶ ಇತ್ತು. ಆದರೆ ತೀರ್ಪು ಬಂದ ಬಳಿಕ ಆನ್ ಲೈನ್ ತರಗತಿ ಇತ್ತು. ಹೀಗಾಗಿ ವಿವಿ ಸಿಂಡಿಕೇಟ್ ಸಭೆ ನಡೆಸಿ ಶಿರವಸ್ತ್ರವನ್ನ ಕಾಲೇಜು ನಿಯಮದಿಂದ ತೆಗೆಯಲಾಗಿದೆ ಎಂದಿದ್ದಾರೆ.

ಉಪಕುಲಪತಿ ಎಡವಟ್ಟು
ಹಿಜಾಬ್‌ ಧರಿಸಲು ಅನುಮತಿ ನೀಡುವಂತೆ ಹಲವು ಬಾರಿ ಮಂಗಳೂರು ವಿವಿ ಉಪಕುಲಪತಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರನ್ನು ಮುಸ್ಲಿಂ ವಿದ್ಯಾರ್ಥಿನಿಯರು ಭೇಟಿಯಾಗಿದ್ದರು ಎನ್ನಲಾಗಿದೆ. ಹೈಕೋರ್ಟ್ ಆದೇಶ ಪದವಿ ಕಾಲೇಜಿಗೆ ಅನ್ವಯ ಆಗಲ್ಲ ಅಂತ ವಾದಿಸಿದ ವಿದ್ಯಾರ್ಥಿನಿಯರು ಆದೇಶ ಪ್ರತಿ ಹಿಡಿದು ವಿಸಿಯನ್ನು ಮತ್ತೆ ಭೇಟಿಯಾಗಿದ್ದಾರೆ. ಈ ವೇಳೆ ಉಪಕುಲಪತಿ ಸಮಸ್ಯೆ ಪರಿಹರಿಸುವ ಬದಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯತ್ತ ಬೆರಳು ತೋರಿಸಿ, ಜಿಲ್ಲಾಧಿಕಾರಿಯಿಂದ ಪತ್ರ ತಂದರೆ ಹಿಜಾಬ್‌ಗೆ ಅವಕಾಶ ಅಂತ ವಿದ್ಯಾರ್ಥಿನಿಯರಿಗೆ ಹೇಳಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿವಾದವನ್ನು ತಾವೇ ಬಗೆಹರಿಸುವ ಬದಲು ಜಿಲ್ಲಾಧಿಕಾರಿ ಕಡೆ ಬೊಟ್ಟು ಮಾಡಿದ್ದರಿಂದ ವಿವಾದ ಭುಗಿಲೆದ್ದಿದೆ ಎಂಬ ಆರೋಪ ಕೇಳಿಬಂದಿದೆ.

ರಾಷ್ಟ್ರ ದ್ರೋಹಿಗಳನ್ನು ಹೆಕ್ಕಿ ತೆಗೆಯುತ್ತೇವೆ
ರಾಜ್ಯದಲ್ಲಿ ಹಿಜಬ್ ಸಮಸ್ಯೆ ಪದೇ ಪದೇ ಹುಟ್ಟುಹಾಕಲಾಗುತ್ತಿದೆ. ಭಾರತೀಯ ಸಂಸ್ಕೃತಿಗೆ ತಕ್ಕಂತೆ ಕೆಲ ಮುಸ್ಲಿಮರು ಬದಲಾಗಬೇಕಿದೆ. ಮುಸ್ಲಿಂ ಹಿರಿಯರೇ ಕಾನೂನು ವಿರೋಧಿಸುವರಿಗೆ ಬುದ್ಧಿ ಹೇಳಬೇಕು. ಕಾನೂನಿಗೆ ಬೆಲೆ ಕೊಡದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದು ಹೆಚ್ಚು ಸಮಯದ ಕೆಲಸವಲ್ಲ. ಹಾಗೆಂದು ಎಲ್ಲರನ್ನೂ ಜೈಲಿಗೆ ಕಳುಹಿಸಲಾಗದು. ಇಲ್ಲಿ ಕಾನೂನು ವಿರೋಧಿಸುವವರು ರಾಷ್ಟ್ರ ದ್ರೋಹಿಗಳು, ಅಂತಹವರನ್ನು ಹೆಕ್ಕಿ ತೆಗೆಯುತ್ತೇವೆ ಎಂದು ಮಾಜ ಸಚಿವ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ | Hijab Controversy | ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದದ ಕಿಡಿ

Exit mobile version