ನವ ದೆಹಲಿ: ತರಗತಿಗಳಲ್ಲಿ ಮಾತ್ರವೇ ಹಿಜಾಬ್ ನಿಷೇಧಿಸಲಾಗಿದೆ ಹೊರತು ಕ್ಯಾಂಪಸ್, ಶಾಲಾ ವಾಹನಗಳಲ್ಲಾಗಲೀ ಅಲ್ಲ ಎಂದು ಕರ್ನಾಟಕದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರದ ಪರವಾಗಿ ತಮ್ಮ ವಾದವನ್ನು ಮಂಡಿಸಿದರು. ಹಿಜಾಬ್ ನಿಷೇಧಕ್ಕೆ (Hijab Row) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ಕೆಲವು ದಿನಗಳಿಂದ ನಿರಂತರ ವಿಚಾರಣೆ ನಡೆಸುತ್ತಿದೆ. ಅದರಂತೆ ಬುಧವಾರವೂ ವಿಚಾರಣೆಯು ಮುಂದವರಿಯಿತು.
ಅಭಿವ್ಯಕ್ತಿಯ ಹಕ್ಕಿನ ಭಾಗವಾಗಿ ವೇಷ ತೊಡುಗೆಯ ಹಕ್ಕು ಸುಲಭವಾಗಿ ದೊರೆಯುವುದಿಲ್ಲ. ನಾವೇನೂ ಶಾಲೆಯ ಆವರಣದಲ್ಲಾಗಲೀ, ಶಾಲೆಯ ಹೊರಗಡೆಯಾಗಲೀ, ಶಾಲಾ ವಾಹನಗಳಲ್ಲಾಗಲೀ ಹಿಜಾಬ್ ನಿಷೇಧವನ್ನು ಮಾಡಿಲ್ಲ. ಈ ನಿಷೇಧ ತರಗತಿಗಳಿಗೆ ಮಾತ್ರವೇ ಸೀಮಿತವಾಗಿದೆ ಎಂದು ನಾವದಗಿ ಅವರು ಜಸ್ಟೀಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದರು.
ಕುರಾನ್‌ನಲ್ಲಿ ಏನೇನು ಹೇಳಲಾಗಿದೆಯೋ ಅದು ದೇವರ ಬೋಧೆ ಮತ್ತು ಅದು ಕಡ್ಡಾಯವಾಗಿದೆ ಎಂಬ ಅರ್ಜಿದಾರರ ವಾದ ಬಗೆಗಗೂ ಅಡ್ವೋಕೇಟ್ ಜನರ್ ಅವರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಕೇಳಿತು. ಇದಕ್ಕೆ ಉತ್ತರಿಸಿದ ನಾವದಗಿ ಅವರು, ಕುರಾನ್‌ನಲ್ಲಿರುವ ಪ್ರತಿಯೊಂದು ಪದವೂ ಧಾರ್ಮಿಕವಾಗಿರಬಹುದು. ಆದರೆ, ಅದು ಕಡ್ಡಾಯ ಎಂದು ಹೇಳುವುದು ಅಗತ್ಯವಿಲ್ಲ ಎಂದು ಕೋರ್ಟ್ ಅನೇಕ ತೀರ್ಪುಗಳಲ್ಲಿ ಹೇಳಿದೆ ಎಂದರು. ಅಲ್ಲದೇ, ಎಲ್ಲಿಯೂ ಅನಿರ್ಬಂಧಿತ ಸ್ವಾತಂತ್ರ್ಯವಿಲ್ಲ. ಪ್ರತಿ ಸ್ವಾತಂತ್ರ್ಯವೂ ನಿರ್ಬಂಧದಿಂದ ಕೂಡಿರುತ್ತದೆ ಎಂದೂ ಅವರು ತಿಳಿಸಿದರು.
ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಆದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಬಲವಾಗಿ ಸಮರ್ಥಿಸಿಕೊಂಡ ಕರ್ನಾಟಕ ಸರ್ಕಾರವು, ಹಿಜಾಬ್ ಎಂಬುದು ಅತ್ಯಗತ್ಯ ಆಚರಣೆಯ ಪದ್ಧತಿಯಲ್ಲ. ಸಾಂವಿಧಾನಿಕವಾಗಿ ಇಸ್ಲಾಮಿಕ್ ರಾಷ್ಟ್ರಗಳೆಂದು ಗುರುತಿಸಿಕೊಂಡಿರುವ ದೇಶಗಳಲ್ಲೇ ಮಹಿಳೆಯರು ಹಿಜಾಬ್ ಅನ್ನು ವಿರೋಧಿಸುತ್ತಿದ್ದಾರೆಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತು.
ಇದನ್ನೂ ಓದಿ | Hijab Row | ಪಿಎಫ್‌ಐ ಕುಮ್ಮಕ್ಕಿನಿಂದಾಗಿ ಹಿಜಾಬ್‌ಗೆ ಒತ್ತಾಯ, ಸುಪ್ರೀಂಗೆ ಕರ್ನಾಟಕ ಸರ್ಕಾರ ಮಾಹಿತಿ