Site icon Vistara News

Hijab row | ನಾಳೆ ಪಿಯುಸಿಎಲ್‌ ವರದಿ ಬಿಡುಗಡೆ: ರಾಜ್ಯದ ಶಾಲೆಗಳಲ್ಲಿ ಮತ್ತೆ ಭುಗಿಲೇಳುತ್ತಾ ಹಿಜಾಬ್ ಸಂಘರ್ಷ?

Hijab row

ಬೆಂಗಳೂರು: ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವ ವಿಚಾರದಲ್ಲಿ (Hijab row) ಹುಟ್ಟಿಕೊಂಡಿರುವ ಚರ್ಚೆ, ವಿವಾದ ತಣಿಯುವಂತೆ ಕಾಣುತ್ತಿಲ್ಲ. ದೇಶದ ಕೆಲವು ರಾಜ್ಯಗಳಲ್ಲಿ ಹಿಜಾಬ್‌ ಧಾರಣೆಗೆ ಯಾವುದೇ ಅಡ್ಡಿ ಇಲ್ಲ, ಕರ್ನಾಟಕದಂಥ ಕೆಲವು ರಾಜ್ಯಗಳಲ್ಲಿ ಶಾಲೆ-ಕಾಲೇಜುಗಳ ಆಡಳಿತ ಮಂಡಳಿಗಳ ತೀರ್ಮಾನವನ್ನು ಆಧರಿಸಿ ಅದನ್ನು ನಿಷೇಧಿಸುವ ಅಧಿಕಾರವನ್ನು ನೀಡಲಾಗಿದೆ. ಇದನ್ನು ಸುಪ್ರೀಂಕೋರ್ಟ್‌ ಅನುಮೋದಿಸಿದೆ. ಅದರ ನಡುವೆಯೂ ಚರ್ಚೆ ಇನ್ನೂ ಜೀವಂತವಾಗಿದೆ.

ಹಿಜಾಬ್‌ ಧಾರಣೆಗೆ ಅವಕಾಶ ನೀಡದಿರುವ ವಿಚಾರದಲ್ಲಿ ಇನ್ನೂ ಒಂದು ವರ್ಗದಲ್ಲಿ ಬೇಸರ ಹಾಗೆಯೇ ಇದೆ. ಹಿಜಾಬ್‌ ನಿಷೇಧ ಮಾಡಿದ್ದರಿಂದ ಮುಸ್ಲಿಂ ವಿದ್ಯಾರ್ಥಿನಿಯರ ಕಲಿಕೆಗೆ ಅಡ್ಡಿಯಾಗಿದೆ ಎಂಬ ಅಭಿಪ್ರಾಯ ಒಂದು ವರ್ಗದಲ್ಲಿದೆ. ಈ ನಡುವೆ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್- ಕರ್ನಾಟಕ ಹಿಜಾಬ್‌ಗೆ ಸಂಬಂಧಿಸಿ ಒಂದು ವರದಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ ಎಂಬ ಶೀರ್ಷಿಕೆಯ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗುತ್ತಿದ್ದು, ಇದರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುವುದಕ್ಕಾಗಿ ಸೋಮವಾರ ಸಂಜೆ ನಾಲ್ಕು ಗಂಟೆಗೆ ಆನ್‌ಲೈನ್‌ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿದೆ.

ವರದಿಯಲ್ಲಿರುವ ಪ್ರಮುಖ ಅಂಶಗಳು
ಹಿಜಾಬ್ ವಿಚಾರವನ್ನು ಇಟ್ಟುಕೊಂಡು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯವಾಗಿದೆ ಎಂಬುದು ವರದಿಯ ಪ್ರಮುಖಾಂಶವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬಿಗೆ ಯಾವ ರೀತಿ ನಿರ್ಬಂಧಗಳನ್ನು ಹೇರಲಾಗಿದೆ, ಇದರಿಂದಾಗಿ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದರ ಬಗ್ಗೆ ವಿವರಗಳಿವೆ ಎನ್ನಲಾಗಿದೆ.

ಇದನ್ನೂ ಓದಿ | Hijab Row | ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆಯಲ್ಲಿ 75ಕ್ಕೂ ಅಧಿಕ ಜನರ ಹತ್ಯೆ!

ಜಿಲ್ಲಾಡಳಿತ, ಕಾಲೇಜು ಆಡಳಿತ, ಪೊಲೀಸರು ಮತ್ತು ಮಾಧ್ಯಮದವರು ಹಿಜಾಬ್ ಗಲಾಟೆ ವೇಳೆ ಕೈಗೊಂಡ ಹಾಗೂ ಕೈಗೊಳ್ಳದ ಕ್ರಮಗಳ ವಿಶ್ಲೇಷಣೆಯೂ ಇದರಲ್ಲಿ ಇರಲಿದೆ. ಜಿಲ್ಲಾಡಳಿತ, ಕಾಲೇಜು ಆಡಳಿತ, ಪೊಲೀಸರು ಮತ್ತು ಮಾಧ್ಯಮದವರು ಹೇಗೆ ಮುಸ್ಲಿಂ ವಿದ್ಯಾರ್ಥಿನಿಯರ ಹಕ್ಕುಗಳ ಉಲ್ಲಂಘನೆಯಲ್ಲಿ ಪಾತ್ರವಹಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆಯಂತೆ. ಹಿಜಾಬ್ ವಿರುದ್ದ ಹಿಂದುತ್ವ ಗುಂಪುಗಳು ನಡೆಸಿದ ದ್ವೇಷದ ಅಭಿಯಾನ ಕುರಿತು ಪಿಯುಸಿಎಲ್‌ ನಾಯಕರು ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.

ಇವೆಲ್ಲ ವಿಚಾರಗಳು ಮತ್ತೊಮ್ಮೆ ಹಿಜಾಬ್‌ ವಿವಾದದ ಚರ್ಚೆಯನ್ನು ಮುನ್ನೆಲೆಗೆ ತರುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ | Saudi Arabia Bans Hijab | ಸೌದಿ ಅರೇಬಿಯಾ ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್‌ ನಿಷೇಧ, ಕ್ರಾಂತಿಕಾರಿ ಹೆಜ್ಜೆ ಇಟ್ಟ ಇಸ್ಲಾಮಿಕ್‌ ರಾಷ್ಟ್ರ

Exit mobile version