ಮಂಗಳೂರು: ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆಯೇ ಇರಲಿಲ್ಲ. ಹೈಕೋರ್ಟ್ ಆದೇಶದ ನಂತರವೂ ನಾವು ಹಿಜಾಬ್ (Hijab) ಧರಿಸಿಯೇ ತೆರಳುತ್ತಿದ್ದೆವು. ಆದರೆ ಎಬಿವಿಪಿ ಒತ್ತಾಯಕ್ಕೆ ಮಣಿದು ಪ್ರಾಂಶುಪಾಲರು ಈಗ ಹಿಜಾಬ್ ಧರಿಸಲು ನಿರಾಕರಿಸುತ್ತಿದ್ದಾರೆ ಎಂದು ಮಂಗಳೂರು ವಿವಿ ಕಾಲೇಜಿನ ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಈ ಕುರಿತು ಮಂಗಳೂರು ಕಾರ್ಯನಿರ್ತರ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಂಗಳೂರು ವಿವಿ ಸಮನ್ವಯ ಸಮಿತಿ ಹೆಸರಿನಲ್ಲಿ ಈ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಗೌಸಿಯಾ, ಈ ಹಿಂದೆ ವಿವಿ ಕಾಲೇಜಿನಲ್ಲಿ ಯಾವುದೇ ಹಿಜಾಬ್ ಸಮಸ್ಯೆ ಇರಲಿಲ್ಲ. ಹೈ ಕೋರ್ಟ್ ಆದೇಶದ ಬಳಿಕವೂ ನಾವು ಹಿಜಾಬ್ ಹಾಕಿಕೊಂಡು ಹೋಗಿದ್ದೇವೆ. ಆದರೆ ಕೆಲ ದಿನಗಳ ಬಳಿಕ ರಾತ್ರೋರಾತ್ರಿ ಈ ಸಮಸ್ಯೆ ಆರಂಭವಾಗಿದೆ.
ಇದನ್ನೂ ಓದಿ | ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರ ಅಮಾನತು
ಈ ವಿಚಾರದಲ್ಲಿ ನಾವು ಹಲವು ಬಾರಿ ವಿವಿ ಕುಲಪತಿ ಬಳಿಗೆ ಹೋಗಿದ್ದೆವು. ಆಗ ವಿಸಿಯವರು, ಡಿಸಿ ಬಳಿ ಕೋರ್ಟ್ ಆದೇಶದ ಸ್ಪಷ್ಟನೆ ಲೆಟರ್ ತನ್ನಿ ಎಂದು ಹೇಳಿದ್ದರು. ಹೀಗಾಗಿ ನಾವು ಡಿಸಿ ಬಳಿಗೆ ಹೋಗಿದ್ದೆವು. ಆದರೆ ಅವರು ಮೊದಲಿಗೆ ಸಿಗಲಿಲ್ಲ. ಆ ಬಳಿಕ ಮತ್ತೆ ಕಾಲೇಜಿಗೆ ಹೋದಾಗ ನಮ್ಮನ್ನು ಹೊರಗೆ ಹಾಕಿದ್ದಾರೆ.
ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕುವ ಬೆದರಿಕೆ ಹಾಕಿದ್ದರು. ಆಗ ಪ್ರಾಂಶುಪಾಲರು ನಮ್ಮ ಪ್ರವೇಶ ನಿರ್ಬಂಧ ಮಾಡಿ ಆದೇಶ ಮಾಡಿದರು. ಹೀಗಾಗಿ ನಾವು ಲೈಬ್ರೆರಿಗೆ ಹೋಗಿ ಹೊರಗೆ ಕೂತೆವು. ಆ ಬಳಿಕ ಹಿಜಾಬ್ ಧರಿಸಿದ ನಮಗೆ ಕ್ಯಾಂಪಸ್ ಪ್ರವೇಶಕ್ಕೂ ಅನುಮತಿ ನಿರಾಕರಿಸಲಾಯಿತು ಎಂದು ವಿದ್ಯಾರ್ಥಿನಿ ತಿಳಿಸಿದರು.
ಪ್ರಾರಂಭದಲ್ಲಿ ಸಮಸ್ಯೆ ಇರಲಿಲ್ಲ, ಆದರೆ ಎಬಿವಿಪಿ ಪ್ರತಿಭಟನೆ ಬಳಿಕ ನಮ್ಮನ್ನ ಕ್ಯಾಂಪಸ್‌ನಿಂದಲೂ ಹೊರಗೆ ಹಾಕಲಾಯಿತು. ಆ ಬಳಿಕ ಸೋಮವಾರ ನಾವು ಮತ್ತೊಮ್ಮೆ ಜಿಲ್ಲಾಧಿಕಾರಿಯವರನ್ನು ಭೇಟಿಯಾದೆವು. ನಮ್ಮ ಜತೆಗೆ ಪೋಷಕರೂ ಆಗಮಿಸಿ ಮನವಿ ಮಾಡಿದರು. ಆದರೂ ನಮ್ಮ ಬೇಡಿಕೆ ಆಲಿಸಿಲ್ಲ.
ನಮ್ಮ ಮನವಿ ಇಷ್ಟೇ. ಕಾಲೇಜಿನ ಹಳೆಯ ವಸ್ತ್ರ ಸಂಹಿತೆ ಮುಂದುವರೆಸಿ. ಈ ಶೈಕ್ಷಣಿಕ ವರ್ಷ ಹಳೆಯ ವಸ್ತ್ರ ಸಂಹಿತೆಯನ್ನೇ ಮುಂದುವರಿಸಬೇಕು. ನಾವು ಹಿಂದಿನಿಂದಲೂ ಸಮವಸ್ತ್ರದ ಶಾಲನ್ನು ಹಿಜಾಬ್ ಆಗಿ ಧರಿಸಿ ಬರುತ್ತಾ ಇದ್ದೇವೆ. ಕಾಲೇಜಿನ ಈ ಆದೇಶಕ್ಕೂ ಹೈಕೋರ್ಟ್ ಆದೇಶಕ್ಕೂ ಸಂಬಂಧ ಇಲ್ಲ. ಹಿಜಾಬ್ ನಿಷೇಧಿಸುವ ಉದ್ದೇಶ ತಮಗೂ ಇಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಆದರೆ ಎಬಿವಿಪಿ ಒತ್ತಡದಿಂದಲೇ ಈ ಆದೇಶ ಮಾಡಿದ್ದಾರೆ.
ಪ್ರಾಂಶುಪಾಲರು, ಸಿಂಡಿಕೇಟ್ ಸದಸ್ಯರ ವಿರುದ್ದ ಕೇಸು ದಾಖಲಿಸಬೇಕು. ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು.
ಹಿಂದಿನಂತೆ ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡಬೇಕು. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಮಂಗಳೂರು ವಿವಿ ಸಮನ್ವಯ ಸಮಿತಿ ಮೂಲಕ ಹೋರಾಟ ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | KCET 2022 | ಪರೀಕ್ಷೆಯಲ್ಲಿ ಹಿಜಾಬ್‌ಗಿಲ್ಲ ಅವಕಾಶ