Site icon Vistara News

Hijab Verdict | ಕೋರ್ಟ್‌ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಬೈದು ಬುದ್ಧಿ ಹೇಳಬೇಕಿತ್ತು: ಕೆ.ಎಸ್‌. ಈಶ್ವರಪ್ಪ

ವಿಜಯಪುರ: ಇಸ್ಲಾಂ ಧರ್ಮದಲ್ಲಿ ಹಿಜಾಬ್ (Hijab Verdict) ಕಡ್ಡಾಯ ಇಲ್ಲ, ಕುರಾನ್‌ನಲ್ಲೂ ಕಡ್ಡಾಯ ಮಾಡಲಾಗಿಲ್ಲ. ಹೀಗಾಗಿ ಹೈಕೋರ್ಟ್ ತೀರ್ಪು ನೀಡಿದಾಗಲೇ ಮುಸ್ಲಿಂ ಮುಖಂಡರು ಆ ಆರು ಹೆಣ್ಣು ಮಕ್ಕಳಿಗೆ ಬೈದು ಬುದ್ಧಿ ಹೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದರು.

ಶೈಕ್ಷಣಿಕ ಸಂಸ್ಥೆಗಳನ್ನು ಹಿಜಾಬ್ ನಿಷೇಧ ಸಂಬಂಧ ಹೈಕೋರ್ಟ್‌ ನೀಡಿದ್ದ ತೀರ್ಪಿನನ್ವಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಭಿನ್ನ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಂವಿಧಾನ ಪೀಠದ ತೀರ್ಮಾನಕ್ಕೆ ಬದ್ಧ. ಹಿಜಾಬ್ ಪ್ರಕರಣವನ್ನು ಇಡೀ ಪ್ರಪಂಚವೇ ಗಮನಿಸುತ್ತಿದೆ. ಇಡೀ ದೇಶದ ಜನ ಯಾವುದು ಸರಿ? ಯಾವುದು ತಪ್ಪು? ಎನ್ನುವ ಚರ್ಚೆಯಲ್ಲಿ ತೊಡಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಕಡ್ಡಾಯ ಇಲ್ಲ. ಕುರಾನ್‌ನಲ್ಲೂ ಕಡ್ಡಾಯ ಎಂದು ಉಲ್ಲೇಖಿಸಲಾಗಿಲ್ಲ ಎಂದು ಹೇಳಿದರು.

ಸದ್ಯ ದ್ವಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ತೀರ್ಪನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ಸಮಾನತೆಗೆ, ಸಂವಿಧಾನಕ್ಕೆ ಆದ್ಯತೆ ಕೊಡಬೇಕು. ಐದು ಅಥವಾ ಏಳು ಜನರ ನ್ಯಾಯಾಧೀಶರ ತೀರ್ಪು ಏನಾಗಲಿದೆ ಎಂಬುದನ್ನು ನೋಡಬೇಕು. ಆರು ಜನ ಹೆಣ್ಣು ಮಕ್ಕಳನ್ನು ಪ್ರಚೋದಿಸಿದ ರಾಷ್ಟ್ರ ದ್ರೋಹಿಗಳು ಯಾರು? ಮುಸ್ಲಿಂ ದಂಗೆಗೆ ಕಾರಣ ಯಾರು? ಎಂಬ ಚರ್ಚೆ ಶುರುವಾಗಿ ಹಿಂದು ಮಕ್ಕಳು ಸಹ ಹೋರಾಟಕ್ಕೆ ಮುಂದಾದರು. ಆಗ ವಿವಾದವೇ ಆಗಿತ್ತು. ಆಗಲೇ ಈ ವಿಚಾರವನ್ನು ಕೋರ್ಟ್‌ವರೆಗೆ ತೆಗೆದುಕೊಂಡು ಹೋಗಿದ್ದ ಮಕ್ಕಳಿಗೆ ಬುದ್ಧಿ ಹೇಳಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಬೆಂಕಿ ಹಚ್ಚುವ ಕೆಲಸ ಆಗಿದ್ದರಿಂದ ಪರಿಸ್ಥಿತಿ ಇಲ್ಲಿವರೆಗೆ ಬಂದಿದೆ…ಎಂದು ಈಶ್ವರಪ್ಪ ಹೇಳಿದರು.

Exit mobile version