ಬೆಂಗಳೂರು: ಶಾಲೆಗಳಲ್ಲಿ ಹಿಜಾಬ್ ಧಾರಣೆ (Hijab Verdict) ವಿಚಾರದಲ್ಲಿ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರಿ ಶಾಲಾ-ಕಾಲೇಜಿಗೆ ಬರುವವರು ಸಮವಸ್ತ್ರ ನೀತಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲೇಬೇಕು. ಖಾಸಗಿ ಶಾಲೆಗಳಲ್ಲಿನ ನಿಯಮಗಳನ್ನು ಪಾಲಿಸಬೇಕು ಎಂದು ಕಂದಾಯ ಸಚಿವ ಆರ್. ಅಶೋಕ್ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಹಿಜಾಬ್ ಬಗ್ಗೆ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಸರ್ಕಾರಿ ಶಾಲೆಗೆ ಬರುವವರು ಸಮವಸ್ತ್ರ ನೀತಿಯನ್ನು ಪಾಲನೆ ಮಾಡಬೇಕು. ಇದು ನಿಯಮವಾಗಿದೆ. ಇದರ ವಿರುದ್ಧವಾಗಿ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಸರ್ಕಾರದ ಪರವಾಗಿ ತೀರ್ಪು ಬಂದಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಭಿನ್ನ ತೀರ್ಪು ಬಂದಿದೆ. ಈಗ ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿಗಳ ಬೆಂಚ್‌ಗೆ ವರ್ಗಾವಣೆ ಆಗಿದ್ದು, ಅಲ್ಲಿ ಕೂಡಾ ಸರ್ಕಾರದ ನಿಲುವು ಇದೇ ಆಗಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮನೆಯಲ್ಲಿ, ಹೊರಗಡೆ ಏನು ಬೇಕಾದರೂ ವಸ್ತ್ರ ಹಾಕಲಿ. ಶಾಲೆಗೆ ಬರುವಾಗ ಸಮವಸ್ತ್ರ ಕಡ್ಡಾಯವಾಗಿದೆ. ಖಾಸಗಿ ಶಾಲೆಗಳಲ್ಲಿ ಸಮವಸ್ತ್ರ ಕೋಡ್ ಇದ್ದು, ಅದರ ಪಾಲನೆ ನಡೆಯುತ್ತಿದೆ. ಇರಾನ್‌ನಲ್ಲಿ ಈಗಾಗಲೇ ಹಿಜಾಬ್ ಅನ್ನು ಬಳಸುತ್ತಿಲ್ಲ ಎಂದು ಸಚಿವ ಅಶೋಕ್ ತಿಳಿಸಿದರು.
ಇದನ್ನೂ ಓದಿ | Hijab Row | ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರಿಕೆ: ಶಿಕ್ಷಣ ಸಚಿವ ನಾಗೇಶ್
ಸರ್ಕಾರ ಹಿಂದೆ ಸರಿಯೋ ಪ್ರಶ್ನೆ ಇಲ್ಲ- ಸಚಿವ ಸುನಿಲ್
ಫೆ.5 ರಂದು ರಾಜ್ಯ ಸರ್ಕಾರ ಹಿಜಾಬ್ ನಿಷೇಧ ಕುರಿತು ಸುತ್ತೋಲೆ ಹೊರಡಿಸಿದೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ವಿಚಾರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿಯವರೆಗೂ ಸರ್ಕಾರದ ಆದೇಶದಲ್ಲಿ ಬದಲಾವಣೆ ಇಲ್ಲ. ಹೀಗಾಗಿ ಹಿಜಾಬ್ ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಸಮಾಜಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್, ಪಿಎಫ್ಐ ಅರ್ಥ ಮಾಡಿಕೊಳ್ಳಬೇಕು. ಹೈಕೋರ್ಟ್ ಹಿಜಾಬ್ ಧರಿಸಿ ಬರಬಾರದು ಎಂದು ತೀರ್ಪು ನೀಡಿದಾಗ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತಾರೆ. ಮತೀಯ ಶಕ್ತಿ ಎಷ್ಟಿದೆ ಎಂಬುದು ಇದರಿಂದಲೇ ಅರ್ಥವಾಗುತ್ತದೆ. ಮುಸ್ಲಿಂ ರಾಷ್ಟ್ರವಾದ ಇರಾನ್, ಇರಾಕ್‌ನಲ್ಲಿಯೇ ಹಿಜಾಬ್ ಬೇಡ ಎಂದು ತೀರ್ಮಾನಕ್ಕೆ ಬರಲಾಗಿದೆ. ಆದರೆ, ಇಲ್ಲಿ ಶಾಲೆಯಲ್ಲಿ ಹಿಜಾಬ್ ಬೇಕು ಎಂದು ಪ್ರತಿಭಟನೆ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭದ್ರತೆ ಕೈಗೊಳ್ಳಲಾಗಿದೆ- ಆರಗ
ಈಗಾಗಲೇ ತೀರ್ಪು ಪ್ರಕಟವಾಗಿ ಸಿಜೆಐ ಪೀಠಕ್ಕೆ ವರ್ಗಾವಣೆ ಆಗಿದೆ. ಮುಖ್ಯ ನ್ಯಾಯಮೂರ್ತಿಗಳು ತೆಗೆದುಕೊಳ್ಳುವ ತೀರ್ಮಾನದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಕರ್ನಾಟಕ ಸರ್ಕಾರವು ಸುಪ್ರೀಂ ತೀರ್ಪನ್ನು ಎದುರು ನೋಡುತ್ತಿದೆ. ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲ ರೀತಿಯಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ | Hijab Verdict | ಇದು ದೇಶದ ವಿಚಾರ, ತೀರ್ಪಿನ ಲಿಖಿತ ಪ್ರತಿ ನೋಡಿ ಉತ್ತರಿಸುವೆ: ಸಿಎಂ ಬೊಮ್ಮಾಯಿ