Site icon Vistara News

Cow slaughter : ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್‌ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ಸಾವು

Cow slaughter

#image_title

ರಾಮನಗರ: ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್‌ ಒಂದರ ಮೇಲೆ ಶುಕ್ರವಾರ ರಾತ್ರಿ ದಾಳಿ (Attack on canter) ನಡೆದಿದೆ. ಈ ವೇಳೆ 16 ಜಾನುವಾರುಗಳನ್ನು ರಕ್ಷಿಸಲಾಗಿದೆ. ಆದರೆ, ಕ್ಯಾಂಟರ್‌ನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕನಕಪುರ ತಾಲೂಕಿನ ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡ ಕ್ಯಾಂಟರ್‌ ಮೇಲೆ ದಾಳಿ ಮಾಡಿದೆ. ಈ ವಾಹನದಲ್ಲಿ ಜಾನುವಾರು ಸಾಗಾಟ ನಡೆಯುತ್ತಿರುವುದರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ತಂಡ ತಡರಾತ್ರಿ ಕಾದು ಕುಳಿತು ಆಕ್ರಮಣ ನಡೆಸಿದೆ ಎನ್ನಲಾಗಿದೆ.

ತಂಡವು ಕ್ಯಾಂಟರ್‌ನಲ್ಲಿ ಸಾಗಿಸುತ್ತಿದ್ದ 16 ಜಾನುವಾರುಗಳನ್ನು ವಶಕ್ಕೆ ಪಡೆದಿದೆ. ಈ ನಡುವೆ, ದಾಳಿ ವೇಳೆ ವಾಹನದಲ್ಲಿದ್ದ ಎನ್ನಲಾದ ಇರ್ಗೀಷ್‌ ಪಾಷಾ ಎಂಬಾತನ ಶವ ಘಟನೆ ನಡೆದ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.

ದಾಳಿ ಮಾಡಿದ ತಂಡದ ಪ್ರಕಾರ, ವಾಹವನ್ನು ಅಡ್ಡಗಟ್ಟುವ ಕೆಲಸ ನಡೆಯುತ್ತಿದ್ದಂತೆಯೇ ಒಬ್ಬ ವ್ಯಕ್ತಿ ವಾಹನ ಬಿಟ್ಟು ಇಳಿದು ಪರಾರಿಯಾಗಿದ್ದಾನೆ. ಆದರೆ, ಮನೆಯವರು ಹೇಳುವ ಪ್ರಕಾರ, ಇರ್ಗಿಷ್‌ ಪಾಷಾನನ್ನು ದಾಳಿಕೋರರೇ ಹೊಡೆದು ಕೊಂದಿದ್ದಾರೆ.

ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ತಂಡವೇ ಕೊಲೆ ಮಾಡಿ ದೂರಕ್ಕೆ ಕೊಂಡುಹೋಗಿ ಎಸೆದಿದೆ ಎನ್ನುವುದು ಕುಟುಂಬಸ್ಥರು ಮಾಡುವ ಆರೋಪ. ಸಾತನೂರು ಪೊಲೀಸ್ ಠಾಣೆ ಬಳಿ ಇರ್ಗೀಷ್‌ ಪಾಷಾ ಕುಟುಂಬಸ್ಥರಿಂದ ಪ್ರತಿಭಟನೆ ನಡೆಯುತ್ತಿದೆ.

ಮೊಬೈಲ್‌ನಲ್ಲಿ ಸ್ಟೇಟಸ್‌ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ

ನೆಲ್ಯಾಡಿ: ಯುವಕನೊಬ್ಬ ಮೊಬೈಲ್‌ನಲ್ಲಿ ಸ್ಟೇಟಸ್ (Whatsapp status)ಹಾಕಿ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಚ್ಲಂಪಾಡಿ ಗ್ರಾಮದಲ್ಲಿ ಮಾರ್ಚ್‌ 30ರ ಮಧ್ಯರಾತ್ರಿ ನಡೆದಿದೆ.

ಇಚ್ಲಂಪಾಡಿ ಗ್ರಾಮದ ಮೊಂಟೆತ್ತಡ್ಕ ನಿವಾಸಿ ರೆನೀಶ್ (27) ಮೃತ ಯುವಕ. ಈತನ ತಂದೆ ಕೆಲವು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈತನ ಸಹೋದರ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ಕೆಲಸಕ್ಕೆ ಹೋಗುತ್ತಿದ್ದ. ಮಾ.30ರಂದು ರಾತ್ರಿ ಪಕ್ಕದ ಉಣ್ಣಿಕೃಷ್ಣನ್ ನಾಯರ್ ಎಂಬವರ ಮನೆಯಲ್ಲಿ ಊಟ ಮಾಡಿ, ಕೇರಂ ಆಡಿ ಮನೆಗೆ ಹೋಗಿದ್ದ.

ಮಧ್ಯರಾತ್ರಿ 12 ಗಂಟೆ ವೇಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಮೊಬೈಲ್‌ನಲ್ಲಿ ಸ್ಟೇಟಸ್ ಬರೆದುಕೊಂಡು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ್ದ. ಈತನ ಸ್ಟೇಟಸ್ ನೋಡಿದ್ದ ಬೆಂಗಳೂರಿನಲ್ಲಿರುವ ಗೆಳೆಯರು ಉಣ್ಣಿಕೃಷ್ಣನ್‌ರವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು.

ಅವರೂ ರೆನೀಶ್ ಮನೆಗೆ ತಲುಪುವುದರೊಳಗೆ ಆತ ಮರಕ್ಕೆ ನೇಣುಬಿಗಿದುಕೊಂಡಿದ್ದ. ತಕ್ಷಣ ಹಗ್ಗ ಬಿಚ್ಚಿ ಪುತ್ತೂರಿನ ಆಸ್ಪತ್ರೆಗೆ ಕರೆ ತರಲಾಯಿತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

ಇದನ್ನೂ ಓದಿ ; Ram Navami Violence: ಗುಜರಾತ್‌, ಬಂಗಾಳದಲ್ಲಿ ರಾಮನವಮಿ ಹಿಂಸಾಚಾರ; 60 ಜನರ ಬಂಧನ, ರಾಜಕೀಯ ಮೇಲಾಟ

Exit mobile version