Site icon Vistara News

Karnataka Election: ಪುತ್ತೂರಿನಲ್ಲಿ ಆರ್‌ಎಸ್ಎಸ್ ಮುಖಂಡರ ವಿರುದ್ಧ ತಿರುಗಿ ಬಿದ್ದ ಹಿಂದು ಕಾರ್ಯಕರ್ತರು

Hindu activists turn against RSS leader in Puttur

Hindu activists turn against RSS leader in Puttur

ಮಂಗಳೂರು: ಪುತ್ತೂರಿನಲ್ಲಿ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಬಿಜೆಪಿಯ ಬೂತ್‌ಗೆ ಭೇಟಿ ನೀಡಿದ್ದನ್ನು ಪ್ರಶ್ನಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ಕಾಸರಗೋಡಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಹುಬ್ಬಳ್ಳಿ ರಮೇಶ್ ಅವರು, ಬಿಜೆಪಿ ಪಕ್ಷದ ಬೂತ್‌ಗೆ ಆಗಮಿಸಿದ್ದರು. ಆಗ ಇಲ್ಲಿ ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿಂದು ಕಾರ್ಯಕರ್ತ ಅರುಣ್‌ ಕುಮಾರ್‌ ಪುತ್ತಿಲ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.

ಪುತ್ತೂರು ಸಮುದಾಯ ಭವನ ಮತಗಟ್ಟೆಯ ಬಳಿಯ ಬಿಜೆಪಿ ಪಕ್ಷದ ಟೆಂಟ್‌ಗೆ ಆರ್‌ಎಸ್‌ಎಸ್‌ ಮುಖಂಡ ಹುಬ್ಬಳ್ಳಿ ರಮೇಶ್ ಆಗಮಿಸಿದ್ದರು. ಹೀಗಾಗಿ ಅವರ ಭೇಟಿಗೆ ಅರುಣ್ ಪುತ್ತಿಲ ಪರ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿಗರು ಮತ್ತು ಹಿಂದು ಕಾರ್ಯಕರ್ತರ ಮಧ್ಯೆ ಬುಧವಾರ ಮಾತಿನ ಚಕಮಕಿ ನಡೆಯಿತು. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಗುಂಪನ್ನು ಚದುರಿಸಿದರು.

ಪುತ್ತೂರಿನಲ್ಲಿ ಬಿಜೆಪಿ ಮತ್ತು ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳ ನಡುವೆ ದೊಡ್ಡ ಜಿದ್ದಾಜಿದ್ದಿಯೇ ನಡೆದಿದೆ. ಸಂಘ ಪರಿವಾರದ ಹಿರಿಯ ನಾಯಕರು ಬಿಜೆಪಿ ಪರ ನಿಂತಿದ್ದರೆ, ಸಂಘಟನೆಗಳಲ್ಲಿ ಕಾರ್ಯನಿರ್ವಹಿಸುವ ಯುವಕರು ಅರುಣ್‌ ಪುತ್ತಿಲ ಪರವಾಗಿದ್ದಾರೆ.

ಇದನ್ನೂ ಓದಿ : ಬಿ.ಎಲ್. ಸಂತೋಷ್‌ ವಿರುದ್ಧ ಪೋಸ್ಟ್‌: ದಿನೇಶ್ ಅಮಿನ್ ಮಟ್ಟು ವಿರುದ್ಧ ಕೇಸ್‌, ಒಬ್ಬನ ಬಂಧನ

ಶ್ರೀನಿವಾಸಪುರದಲ್ಲಿ ಫಲಿತಾಂಶಕ್ಕೂ ಮುನ್ನ ಸ್ವಾಮಿ- ರೆಡ್ಡಿ ಪರ ಜಯಘೋಷ, ಸಂಭ್ರಮಾಚರಣೆ; ಪೊಲೀಸರಿಂದ ಲಾಠಿ ಚಾರ್ಜ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರದಲ್ಲಿ ಬುಧವಾರ ಮತದಾನ ಅವಧಿ ಮುಗಿಯುತ್ತಿದ್ದಂತೆ ಜೆಡಿಎಸ್‌ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಕೆ.ಆರ್‌.ರಮೇಶ್‌ ಕುಮಾರ್‌ ಬೆಂಬಲಿಗರು, ತಮ್ಮ ನಾಯಕ ಗೆದ್ದಿದ್ದಾರೆ ಎಂದು ಪಟಾಕಿ ಸಿಡಿಸಿ, ಪೈಪೋಟಿಯಿಂದ ಸಂಭ್ರಮಾಚರಣೆ ನಡೆಸಿದ್ದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ.

ಇಬ್ಬರು ಅಭ್ಯರ್ಥಿಗಳ ಪರ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿದ್ದರಿಂದ ಎರಡು ಬಣಗಳ ನಡುವಿನ ತೀವ್ರ ಪೈಪೋಟಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಂತರ ಗುಂಪು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ರಾಜ್ಯದಲ್ಲಿ ಅತಿ ಸೂಕ್ಷ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಶ್ರೀನಿವಾಸಪುರ ಕೂಡ ಒಂದಾಗಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯುವುದಕ್ಕೂ ಮುನ್ನಾ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

ಇದನ್ನೂ ಓದಿ | Vistara News Poll of Polls: ಅತಂತ್ರ ವಿಧಾನಸಭೆ ಪಕ್ಕಾ; ಕಾಂಗ್ರೆಸ್ ದೊಡ್ಡ ಪಕ್ಷ, ಜೆಡಿಎಸ್‌‌ಗೆ ಶುಕ್ರದೆಸೆ

ಕಾಂಗ್ರೆಸ್‌ ಕಾರ್ಯಕರ್ತನಿಗೆ ಪೊಲೀಸರಿಂದ ಥಳಿತ

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಗುಂಪು ಚದುರಿಸುವಾಗ ಲಾಠಿಚಾರ್ಜ್ ಮಾಡಿದ್ದನ್ನು ಪ್ರಶ್ನಿಸಿದ ವ್ಯಕ್ತಿಗೆ ಪೊಲೀಸರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಹೀಗಾಗಿ ಪೊಲೀಸರ ಗುಂಡಾವರ್ತನೆಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಸಂಜೀವ್ ರೆಡ್ಡಿ ಗೋವನ್ನರ್ ಎಂಬುವವರಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯ ಮಾತಿನ‌ ಚಕಮಕಿ ನಡೆಯುತ್ತಿದ್ದಾಗ ಗಲಾಟೆ ನಿಯಂತ್ರಿಸಲು ಪೊಲೀರು ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ಸಮಯದಲ್ಲೇ ಪೊಲೀಸ್ ಕಾಲರ್ ಹಿಡಿದು ಶರ್ಟ್ ಹರಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣ ಮಾಡಿದರು.

Exit mobile version