ಕಾರವಾರ: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣದಲ್ಲಿ ಮುಖಂಡನ ಹೇಳಿಕೆ ವಿಡಿಯೊ ಮಾಡಿದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾರವಾರದ ಶಿರವಾಡದ ಬಂಗಾರಪ್ಪ ನಗರದಲ್ಲಿ ನಡೆದಿದೆ. ಮಾರುತಿ ವಾಲ್ಮೀಕಿ ಹಲ್ಲೆಗೊಳಗಾದ ಯುವಕ. ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿಂದು ದೇವರುಗಳ ಕುರಿತು ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ವೇಳೆ ವಿಡಿಯೊ ತೆಗೆದ ಕಾರಣಕ್ಕೆ ಯುವಕ ಮಾರುತಿ ವಾಲ್ಮೀಕಿ ಮೇಲೆ ಎಲಕಪಾಟಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮುಖಂಡನ ಪತ್ನಿಯ ಸಹೋದರನ ಮಗ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಗಾಯಾಳು ಮಾರುತಿ ವಾಲ್ಮೀಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Ganesh Chaturthi: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಪಾಲಿಕೆ ಅನುಮತಿ; ಪ್ರತಿಭಟನೆ ಕೈಬಿಟ್ಟ ಬಿಜೆಪಿ
ಇತ್ತೀಚೆಗೆ ದಲಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಎಲಿಷಾ ಎಲಕಪಾಟಿ ಕ್ರೈಸ್ತರ ದೇವರು ಏಸುಕ್ರಿಸ್ತನನ್ನು ಹೊಗಳಿ, ಶಿವ-ಪಾರ್ವತಿ, ಶ್ರೀರಾಮ- ಸೀತೆ, ಹನುಮಂತ, ಲವ-ಕುಶ ಹಾಗೂ ವಾಲ್ಮೀಕಿಯ ಬಗ್ಗೆ ಕೀಳುಮಟ್ಟದ ಭಾಷಾ ಪ್ರಯೋಗ ನಡೆಸಿದ್ದ ಅವಹೇಳನ ಮಾಡಿದ್ದರು ಎಂದು ಆರೋಪ ಕೇಳಿಬಂದಿತ್ತು. ಅವರು ಮಾತನಾಡಿದ್ದ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೋಂಡಿದ್ದ ಪೊಲೀಸರು, ಎಲಿಷಾ ಎಲಕ ಪಾಟಿ ಅವರನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮುಖಂಡನ ವಿಡಿಯೊ ಚಿತ್ರೀಕರಿಸಿದ್ದ ಎಂದು ಯುವಕ ಮಾರುತಿ ವಾಲ್ಮೀಕಿ ಮೇಲೆ ಹಲ್ಲೆ ನಡೆದಿದೆ.
ಹೇಮಾವತಿ ಹಿನ್ನೀರಿನಲ್ಲಿ ಮುಳಗಿ ವೈದ್ಯ ಸಾವು
ಹಾಸನ: ಹೇಮಾವತಿ ಹಿನ್ನೀರಿಗೆ ಸ್ನಾನ ಮಾಡಲು ಹೋಗಿದ್ದ ವೈದ್ಯರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗೊರೂರು ಸಮೀಪ ನಡೆದಿದೆ. ಚಂದ್ರಶೇಖರ್ (31) ಮೃತ ವೈದ್ಯ.
ಅರಕಲಗೂಡು ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ವಾಸವಿದ್ದ ಚಂದ್ರಶೇಖರ್, ಹೊಳೆನರಸೀಪುರ ತಾಲೂಕಿನ ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೆಪ್ಟೆಂಬರ್ 14 ರಂದು ಗೊರೂರು ಸಮೀಪದಲ್ಲಿರೋ ಹೇಮಾವತಿ ಹಿನ್ನೀರಿನಲ್ಲಿರೋ ಕೋನಾಪುರದಲ್ಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ಹೋಗಿಬರುವುದಾಗಿ ವೈದ್ಯ ಚಂದ್ರಶೇಖರ್ ಹೇಳಿದ್ದರು. ಸಂಜೆ 5 ಗಂಟೆಯಾದರೂ ಬಾರದೇ ಇದ್ದಾಗ ಕುಟುಂಬಸ್ಥರು, ಗೊರೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ ಕಾರು ಹಾಗೂ ಬಟ್ಟೆ ಪತ್ತೆಯಾಗಿದ್ದು, ಶುಕ್ರವಾರ ನೀರಿನಲ್ಲಿ ಮೃತದೇಹ ತೇಲಿ ಬಂದಿದೆ. ಬಳಿಕ ಅರಕಲಗೂಡು ತಾಲೂಕು ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.