Site icon Vistara News

Hindu Jagarana Vedike : ಹಿಂಜಾವೇ ಪ್ರಾಂತ ಸಹ ಸಂಯೋಜಕ ಸೆರೆ; ಸರ್ಕಾರದ ವಿರುದ್ಧ ಹಿಂದು ಸಂಘಟನೆಗಳ ವ್ಯಾಪಕ ಆಕ್ರೋಶ

Hindu Jagarana Vedike activist satish riding bike

ಬೆಂಗಳೂರು: ಪ್ರಚೋದನಕಾರಿ ಭಾಷಣ (Provocative speech) ಮಾಡಿದ ಆರೋಪದ ಮೇಲೆ ಹಿಂದು ಜಾಗರಣ ವೇದಿಕೆಯ (Hindu Jagarana Vedike) ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಅವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಸರ್ಕಾರದ ಈ ಕ್ರಮಕ್ಕೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಗೌರಿಬಿದನೂರು ಪೊಲೀಸರು ಸುಮೋಟೊ ಪ್ರಕರಣವನ್ನು (Gauribidanur police register suo motu case) ದಾಖಲಿಸಿಕೊಂಡು ಸತೀಶ್‌ ಅವರನ್ನು ಬಂಧಿಸಿದ್ದಾರೆ. ಇದು ಹಿಂದು ಕಾರ್ಯಕರ್ತರ (Hindu activists) ಮೇಲೆ ನಡೆಸುತ್ತಿರುವ ಧಮನಕಾರಿ ನೀತಿ ಎಂದು ಹಿಂದುಪರ ಸಂಘಟನೆಗಳು ವ್ಯಾಪಕ ಆಕ್ರೋಶವನ್ನು ಹೊರಹಾಕಿವೆ.

ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕರಾಗಿರುವ ಸತೀಶ್ ಪೂಜಾರಿ ಅವರು “ಅಖಂಡ ಭಾರತ ಸಂಕಲ್ಪ ದಿವಸ”ದ (Akhand Bharat Sankalp Diwas) ಅಂಗವಾಗಿ ಆಗಸ್ಟ್‌ 14ರಂದು ಗೌರಿಬಿದನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಡಿದ್ದ ಭಾಷಣಕ್ಕೆ ಸಂಬಂಧಪಟ್ಟಂತೆ ಗೌರಿಬಿದನೂರು ಪೊಲೀಸರು ಸುಮೋಟೊ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ.

ಇದನ್ನೂ ಓದಿ: Chitradurga Plane Crash: ಚಿತ್ರದುರ್ಗದಲ್ಲಿ ಡಿಆರ್‌ಡಿಒ ತಪಸ್‌ ವಿಮಾನ ಪತನ; ನೋಡಲು ಮುಗಿಬಿದ್ದ ಜನ

ಶನಿವಾರ (ಆಗಸ್ಟ್‌ 19) ರಾತ್ರಿ 11.55ರ ಸುಮಾರಿಗೆ ದಾವಣಗೆರೆಯಲ್ಲಿನ ಸತೀಶ್‌ ಪೂಜಾರಿ ಅವರ ಮನೆಗೆ ಬಂದ ಗೌರಿಬಿದನೂರು ಪೊಲೀಸರು ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಅವರನ್ನು ಬಂಧಿಸಿ ಗೌರಿಬಿದನೂರಿಗೆ ತಂದಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಪ್ಟೆಂಬರ್‌ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಚಿಕ್ಕಬಳ್ಳಾಪುರ ಜೈಲಿಗೆ ಕರೆತರಲಾಗಿದೆ.

ವ್ಯಾಪಕ ಆಕ್ರೋಶ

ಅಖಂಡ ಭಾರತ ಸಂಕಲ್ಪ ದಿನಾಚರಣೆ ಸಲುವಾಗಿ ಗೌರಿಬಿದನೂರಿನಲ್ಲಿ ನೈಜ ಇತಿಹಾಸವನ್ನು ಹೇಳಿದ ಕಾರಣಕ್ಕೆ ರಾಜ್ಯ ಸರ್ಕಾರ ಸಹಿಸುತ್ತಿಲ್ಲ. ಈ ಕಾರಣಕ್ಕೆ ಕುತಂತ್ರದಿಂದ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ. ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್‌ ದಾವಣಗೆರೆ ಅವರನ್ನು ದುರದ್ದೇಶಪೂರ್ವಕವಾಗಿ ಬಂಧಿಸಲಾಗಿದೆ. ಇದು ಹಿಂದು ಕಾರ್ಯಕರ್ತರನ್ನು ಭಯಗೊಳಿಸುವ ತಂತ್ರ ಎಂದು ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಬಂಧನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಬಜರಂಗದಳ ಖಂಡನೆ

ಸರ್ಕಾರ ಏಕಾಏಕಿ ಹಿಂದು ಸಂಘಟನೆಗಳ ಮೇಲೆ ದಾಳಿ ನಡೆಸಿ, ಕೇಸ್‌ಗಳನ್ನು ದಾಖಲು ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಿಂದು ಕಾರ್ಯಕರ್ತರು, ಪ್ರಮುಖರ ಮೇಲೆ ಕೇಸ್‌ಗಳನ್ನು ಹಾಕಿ ಕಾರ್ಯಕರ್ತರನ್ನು ಮಟ್ಟ ಹಾಕುವ ಕೆಲಸವನ್ನು ಮಾಡಲಾಗಿದೆ ಎಂದು ಬಜರಂಗದಳ ಕಾರ್ಯಕರ್ತರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ದೂರು ನೀಡಿದ್ದು ಯಾರು? ದೂರಿನಲ್ಲಿ ಏನಿದೆ?

ಗೌರಿಬಿದನೂರು ನಗರ ಠಾಣೆ ಎಎಸ್ಐ ವೆಂಕಟೇಶಪ್ಪ, ಎಸ್‌.ಎಂ ಅವರು ಆಗಸ್ಟ್‌ 18ರಂದು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.

ಆಗಸ್ಟ್‌ 14ರಂದು ರಾತ್ರಿ ಗೌರಿಬಿದನೂರು ನಗರದಲ್ಲಿ ಸ್ವತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಅಖಂಡ ಭಾರತ ಸಂಕಲ್ಪ, ದಿನಾಚರಣೆಯನ್ನು ಹಿಂದು ಜಾಗರಣ ವೇದಿಕೆಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಹಿಂಜಾವೇಯ ಕರ್ನಾಟಕ ದಕ್ಷಿಣ ಸಹ ಸಂಚಾಲಕ ದಾವಣಗೆರೆಯ ಸತೀಶ್ ಮತ್ತು ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ಮಾಜಿ ಸೈನಿಕ ಹವೀಲ್ದಾರ್ ಸತೀಶ್ ಬಾಬು ಅವರು ಆಗಮಿಸಿದ್ದರು. ಕಾರ್ಯಕ್ರಮದ ಮುಖ್ಯ ಭಾಷಣದ ವೇಳೆ, ಸತೀಶ್‌ ಅವರು ಮಾತನಾಡುತ್ತಾ, “ನಾವು ಎರಡು ಮಕ್ಕಳಿಗೆ ಸಾಕು ಅಂತಿದ್ದೇವೆ. ಅದೇ 20 ಮನೆಗೆ ಗುಜರಿ ಹಾಕುವವನು 4 ಮದುವೆ ಮಾಡಿಕೊಂಡು 40 ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾನೆ. ಆ ಜನಸಂಖ್ಯಾ ಸ್ಫೋಟ ಆಗಬಾರದು ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿದ್ದಾರೆ” ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Weather report : ಕರಾವಳಿಯಲ್ಲಿ Non Stop ಮಳೆ; ಬೆಂಗಳೂರಲ್ಲಿ ಹೇಗೆ?

ಇತರ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವಂತೆ ಧರ್ಮಗಳ ನಡುವೆ ವೈರತ್ವವನ್ನು ಹುಟ್ಟುಹಾಕುವಂತೆ ಪ್ರಚೋದನಕಾರಿ ಭಾಷಣವನ್ನು ಮಾಡಿದಂತಹ ಸತೀಶ್ ಹಾಗೂ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಗೌರಿಬಿದನೂರು ನಗರದ ನವೀನ್ ಕುಮಾರ್ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Exit mobile version