Site icon Vistara News

Hindu Activists : ಹಿಂದು ಸಂಘಟನೆಗಳ ಕಾರ್ಯಕರ್ತರ ಗಡಿಪಾರು ನೋಟಿಸ್‌; ಬಿಜೆಪಿ ಆಕ್ರೋಶ

Bajaranga dal activists extradiction

ಬೆಂಗಳೂರು: ಮಂಗಳೂರಿನ ಮೂವರು ಹಿಂದು ಸಂಘಟನೆಗಳ ಕಾರ್ಯಕರ್ತರ (Hindu activists) ಗಡಿಪಾರಿಗೆ ನೋಟಿಸ್‌ (Extradiction Notice) ನೀಡಲಾಗಿರುವುದರ ವಿರುದ್ಧ ಬಿಜೆಪಿ ಆಕ್ರೋಶ (BJP Up in arms against Government) ವ್ಯಕ್ತಪಡಿಸಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕೋಮು ಗಲಭೆ (Communal riots) ನಿಯಂತ್ರಣದ ಹೆಸರಿನಲ್ಲಿ ಹಿಂದುಗಳು ಹಾಗೂ ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ದ್ವೇಷದ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ (V Sunil Kumar) ಆರೋಪಿಸಿದ್ದಾರೆ. ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ, ಎನ್‌. ರವಿಕುಮಾರ್‌ ಸೇರಿದಂತೆ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಇವರಿಗೆ ಮಂಗಳೂರು ಪೊಲೀಸರು ಗಡಿಪಾರು ನೋಟಿಸ್ ನೀಡಿದ್ದಾರೆಂಬ ಮಾಹಿತಿ ಲಭಿಸಿದ್ದು, ಇದು ದ್ವೇಷ ರಾಜಕಾರಣದ ಪರಮಾವಧಿಯಾಗಿದೆ ಎಂದು ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟು ದಿನಗಳ ಶಾಂತಿ ನೆಲೆಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಧರ್ಮ- ಧರ್ಮಗಳ ಮಧ್ಯೆ ದ್ವೇಷ ಹಚ್ಚಲು ಮುಂದಾಗಿದೆ. ಮಂಗಳೂರಿನಲ್ಲಿ ಕೋಮು ದ್ವೇಷ ನಿಯಂತ್ರಣ ಘಟಕ ಸ್ಥಾಪನೆ ಮಾಡಿರುವುದೇ ಹಿಂದು ಸಂಘಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಕೂಡಿದ್ದು, ಇದರ ವಿರುದ್ಧ ನಾವು ಕಾನೂನು ರೀತ್ಯ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಿದ್ದರಾಮಯ್ಯ ಕಣ್ಸನ್ನೆಗೆ ಕುಣಿಯುವ ಪೊಲೀಸ್‌ ಇಲಾಖೆ

ಈ ಮೂವರಿಗೆ ಯಾವ ಕಾರಣಕ್ಕೆ ಗಡಿಪಾರು ನೋಟಿಸ್ ನೀಡಲಾಗಿದೆ ಎಂಬ ಬಗ್ಗೆ ಪೊಲೀಸ್ ಆಯುಕ್ತರು ಇದುವರೆಗೆ ಉತ್ತರ ನೀಡಿಲ್ಲ. ಸಿಎಂ ಸಿದ್ದರಾಮಯ್ಯನವರ ಕಣ್ಸನ್ನೆಗೆ ತಕ್ಕಂತೆ ಸ್ಪೀಕರ್ ಖಾದರ್ ಮಾತ್ರ ಕುಣಿಯುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ಇಡಿ ಪೊಲೀಸ್ ಇಲಾಖೆಯನ್ನು ತಮ್ಮ ಮತ ಬ್ಯಾಂಕ್ ಕ್ರೋಡೀಕರಣಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯನವರ ಬೆಂಬಲದಿಂದ ಈ ಹಿಂದೆ ಪಿಎಫ್ಐ ಉಗ್ರರು ಹಿಂದು ಕಾರ್ಯಕರ್ತರ ಬರ್ಭರ ಹತ್ಯೆ ಮಾಡಿರುವುದು ನಮ್ಮ ಕಣ್ಣ ಮುಂದೆ ಇದೆ. ಹಿಂದಿನ ಘಟನೆಯನ್ನು ಸಿದ್ದರಾಮಯ್ಯ ಸರ್ಕಾರ ಮತ್ತೆ ಪುನರಾವರ್ತನೆ ಮಾಡಲು ಹೊರಟಿದೆ. ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಮತ್ತು ಹೋರಾಟ ರೂಪಿಸುತ್ತೇವೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

ಈಗಾಗಲೇ 60 ಜನರನ್ನು ಗಡಿಪಾರು ಮಾಡಿದ್ದೇವೆ: ಪೊಲೀಸ್‌ ಕಮೀಷನರ್‌

ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರಿಗೆ ಗಡೀಪಾರು ಸಂಬಂಧ ನೋಟೀಸ್ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕುಲದೀಪ್ ಜೈನ್ ಅವರು, ʻʻನಮ್ಮ ನಗರದಲ್ಲಿ ಪದೇಪದೆ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಅವರು ನಮಗೆ ಆರೋಪಿಗಳಷ್ಟೇ, ಅವರು ಯಾವ ಸಂಘಟನೆ ಅನ್ನೋದು ನಮಗೆ ಬೇಡʼʼ ಎಂದರು. ಇದೇ ವರ್ಷದಲ್ಲಿ ಈಗಾಗಲೇ 60 ಮಂದಿಯನ್ನು ಗಡಿಪಾರು ಮಾಡಿದ್ದೇವೆ. ಇದು ಹೊಸದಲ್ಲ ಎಂದರು.

ʻʻಮೂವರು ಮಾತ್ರ ಅಲ್ಲ, ಅದಕ್ಕೂ ಹೆಚ್ಚು ಜನರಿಗೆ ನೋಟೀಸ್ ಮಾಡಲಾಗಿದೆ. ನೈತಿಕ ಪೊಲೀಸ್ ಗಿರಿ ಸಂಬಂಧಿಸಿ ಮೂವರ ಮೇಲೆ ಠಾಣೆಯಿಂದ ಪ್ರಸ್ತಾವನೆ ಬಂದಿದೆ. ಅವರನ್ನು ಗಡೀಪಾರು ಮಾಡಲು ಠಾಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಾಗಿ ಅವರಿಗೆ ನೋಟೀಸ್ ಮಾಡಿದ್ದೇವೆ, ಗಡಿಪಾರು ಪ್ರಕ್ರಿಯೆ ಆಗಲಿದೆ. ರೌಡಿ ಶೀಟ್ ತೆರೆಯೋದು ಅಥವಾ ಗೂಂಡಾ ಕಾಯ್ದೆ ಹಾಕುವ ಕೆಲಸವೂ ಆಗ್ತಿದೆ. ನಿರಂತರ ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುವವರನ್ನು ಗುರುತಿಸಿದ್ದೇವೆʼʼ ಎಂದು ಕಮಿಷನರ್‌ ಕುಲದೀಪ್‌ ಜೈನ್‌ ಹೇಳಿದರು.

ಇದನ್ನೂ ಓದಿ : Fraud Case : 800 ಕೋಟಿ ರೂ. ವಂಚನೆಯ ʼಆಯುರ್ವೇದʼ ಚೈನ್‌ಲಿಂಕ್ ದೋಖಾ‌ ನಡೆದಿದ್ದು ಹೀಗೆ!

Exit mobile version