Site icon Vistara News

ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಿದ್ರೆ ತಕ್ಕ ಶಾಸ್ತಿ: ಕಾಂಗ್ರೆಸ್‌ ಸರ್ಕಾರಕ್ಕೆ ಹಿಂದು ಸಂಘಟನೆಗಳ ಎಚ್ಚರಿಕೆ

Hindu outfits protest in bangalore

#image_title

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದನಂತರ ಈ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಗಳನ್ನು ರದ್ದು ಮಾಡಲು ಮುಂದಾಗಿದೆ. ಅದರಲ್ಲಿ ಮತಾಂತರ ನಿಷೇಧ ಕಾಯ್ದೆಯೂ ಒಂದು. ಹೀಗಾಗಿ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಹಿಂದುಪರ ಸಂಘಟನೆಗಳು ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿವೆ.

ರಾಜ್ಯದಲ್ಲಿ ಲವ್ ಜಿಹಾದ್, ಬಲವಂತದ, ಆಮಿಷದ ಮತಾಂತರಗಳು ಹೆಚ್ಚಾಗಿವೆ ಎಂದು ಬಿಜೆಪಿ‌ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಆದರೆ ಈಗ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಮತಾಂತರ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ನಿರ್ಧರಿಸಿರುವುದಕ್ಕೆ ಬಜರಂಗದಳ, ಶ್ರೀರಾಮಸೇನೆ, ಹಿಂದು ಜನಜಾಗೃತಿ ಸಮಿತಿ, ಹಿಂದು ಸಿಂಹಪಡೆ, ವಿಶ್ವ ಹಿಂದು ಪರಿಷತ್ ಸೇರಿ ಹಲವು ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಿಂದುಪರ ಸಂಘಟನೆಗಳು ಸರ್ಕಾರದ ವಿರುದ್ಧ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ಮಾಡಿದವು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಯಕರ್ತರು, ಸಿದ್ರಾಮುಲ್ಲಾ ಖಾನ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದೇ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ಧಿಕ್ಕಾರ ಕೂಗಿದರು.

ಬಜರಂಗದಳ ಬೆಂಗಳೂರು ವಿಭಾಗ ಸಂಯೋಜಕ ಗೋವರ್ಧನ್ ಮಾತನಾಡಿ, ರಾಜ್ಯ ಪಶುಸಂಗೋಪನಾ ಸಚಿವರು ಕೆ.ವೆಂಕಟೇಶ್) ಎಮ್ಮೆ, ಕೋಣವನ್ನು ಕಡಿಯುವಾಗ ಹಸುವನ್ನು ಯಾಕೆ ಕಡಿಯಬಾರದು ಎನ್ನುತ್ತಾರೆ. ಈ ರೀತಿ ಹೇಳುವ ಇವರಿಗೂ, ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ದೇಶ ವಿರೋಧಿ ಕೆಲಸ ಮಾಡಿದರೆ ಹಿಂದುಗಳೆಲ್ಲ‌ ಒಂದಾಗಿ ಪ್ರತಿಭಟನೆ ಮಾಡಬೇಕಗುತ್ತದೆ. ಈ ವಿಚಾರ ಇಲ್ಲಿಗೆ ಕೈ ಬಿಟ್ಟರೆ ಸರಿ, ಇಲ್ಲದಿದ್ದರೆ ಮುಸ್ಲಿಂರನ್ನು ಒಲೈಸುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಹಿಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದನ್ನೂ ಓದಿ | Karnataka Politics : ಕರ್ನಾಟಕ ಮಿನಿ ಪಾಕಿಸ್ತಾನ ಆದೀತು, ರಾಜ್ಯ ಒಂದೇ ವರ್ಷದಲ್ಲಿ ದಿವಾಳಿ; ಬಿಜೆಪಿ ಎಚ್ಚರಿಕೆ

ಚಿಕ್ಕಮಗಳೂರಿನಲ್ಲಿ ಸಿದ್ರಾಮುಲ್ಲಾ ಖಾನ್ ಘೋಷಣೆಗಳು

ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದಲ್ಲಿ ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂವಿಧಾನ ವಿರೋಧಿ ಸಿದ್ರಾಮುಲ್ಲಾ ಖಾನ್ ಎಂದು ಘೋಷಣೆ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು.

ಕಾಂಗ್ರೆಸ್ ವಿರುದ್ಧ ಮತಾಂತರಕ್ಕೆ ಕುಮ್ಮಕ್ಕು ಆರೋಪ

ಹುಬ್ಬಳ್ಳಿ: ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರ ಖಂಡಿಸಿ ನಗರದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಸರ್ಕಾರ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಸಂಗೋಳಿ ರಾಯಣ್ಣ ವೃತ್ತದಿಂದ ತಹಶೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಬಾರದು ಎಂದು ಒತ್ತಾಯಿಸಿ, ನಂತರ ತಹಸೀಲ್ದಾರ್‌ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ

ಕೊಪ್ಪಳ: ವಿದ್ಯುತ್ ದರ ಏರಿಕೆ, ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಮತಾಂತರ ಕಾಯ್ದೆ ಹಿಂಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಗಿರಣಿ, ಕಟ್ಟಿಗೆ ಅಡ್ಡೆ ಮಾಲೀಕರು ಸಾಥ್ ನೀಡಿದರು.

ಕೊಪ್ಪಳದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಅಕ್ಕಿ ತರಲು ಕೇಂದ್ರ ಸಚಿವರನ್ನು ಭೇಟಿ ಮಾಡುತ್ತಿದ್ದರು. ಇವರು ಉಡಾಫೆಯಾಗಿ ಮಾತನಾಡುತ್ತಾರೆ. ಕೇಂದ್ರ ಸರ್ಕಾರದ ಟೆಂಡರ್‌ನಲ್ಲಿ ಭಾಗಿಯಾಗಬೇಕು, ಅದು ಬಿಟ್ಟು ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮೆಜಾರಿಟಿ ಇದೆ ಎಂದು ಏನು ಮಾಡಿದರೂ ನಡೆಯುತ್ತೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Karnataka politics : ಹೊರ ರಾಜ್ಯದಿಂದ ಅಕ್ಕಿ ಖರೀದಿ ಕಮಿಷನ್‌ ಹೊಡೆಯೋ ಹುನ್ನಾರ ಎಂದ ವಿಜಯೇಂದ್ರ

ಫ್ರೀ ಬಸ್ ಪ್ರಯಾಣದ ಹಿನ್ನೆಲೆ ಪುರುಷರಿಗೆ ಸೀಟು ಸಿಗುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದರೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ ಎನ್ನುತ್ತಾರೆ. ಈ ಮೂಲಕ ಇಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಬೊಮ್ಮಾಯಿ ಸರ್ಕಾರ ಒಪ್ಪಿಕೊಂಡಿರಲಿಲ್ಲ. ಆದರೆ ಇವರು ಒಪ್ಪಿಕೊಂಡಿದ್ದಾರೆ. ಇದರಿಂದ ವಿದ್ಯುತ್‌ ದರ ಭಾರಿ ಹೆಚ್ಚಳ ಆಗಿರುವದರಿಂದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

Exit mobile version