ಮೈಸೂರು: ನಮ್ಮದೇ ಹುಡುಗನ ಸಾವಿಗೆ ಶ್ರದ್ಧಾಂಜಲಿ ಸಭೆ ಮಾಡಲು ಅನುಮತಿ ಸಿಗಲ್ಲ. ಅಂದರೆ ಎಂತಹ ಸಮಾಜದಲ್ಲಿ ನಾವಿದ್ದೇವೆ. ಇವರು ಕೊಲೆ ಮಾಡಿದವರಿಗಿಂತ ಕಚಡ ಜನ. ಕಂಬನಿ ಸುರಿಸಲು ಜಾಗ ಕೊಡಲ್ಲ ಎಂದರೆ ಏನು ಹೇಳಬೇಕು? ವೇಣುಗೋಪಾಲ್ ಮನೆ ಹತ್ತಿರ 20 ಜನ ಸೇರಿ ಸಭೆ ಮಾಡಿಕೊಳ್ಳಿ ಅಂದಿದ್ದರು. ಆದರೆ, ಹೈಕೋರ್ಟ್‌ಗೆ ಹೋಗಿ ಹೋರಾಡಿ ಪರ್ಮಿಷನ್ ತರಬೇಕಾಯಿತು. ಹಿಂದು ಸಮಾಜವನ್ನು ಹೆದರಿಸುವ, ಬೆದರಿಸುವ ಕೆಲಸ ಆಗುತ್ತಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಹೇಳಿದರು.
ತಿ.ನರಸೀಪುರದ ಗುಂಜಾ ನರಸಿಂಹಸ್ವಾಮಿ ದೇವಾಲಯದ ಮಂಗಳವಾರ ಆಯೋಜಿಸಿದ್ದ ಯುವಾ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ನಾವು ವೀರ ಕೇಸರಿ ಎಂಬ ಅಭಿಯಾನ ಮಾಡಿದ್ದೆವು. ವಿವೇಕಾನಂದರ ಸ್ಟಿಕ್ಕರ್ ಹಾಕಿ 2 ರೂ. ಪಡೆಯಬೇಕು ಎಂದು ಹೇಳಿದ್ದೆವು. ಆದರೆ, ವೇಣುಗೋಪಾಲ್ ನಾಯಕ್ ‘ಸಾವು ಖಾತ್ರಿ, ಹೀಗಿರುವಾಗ ಮರ, ಕಲ್ಲುಗಳಂತೆ ನಾಶವಾಗುವುದಕ್ಕಿಂತ ವೀರರಂತೆ ಇತರರಿಗೆ ಒಳಿತು ಮಾಡುತ್ತಾ ಸಾಯುವುದೇ ಲೇಸು ‘ ಎಂದು ತನ್ನ ಮನೆ ವಿವೇಕಾನಂದರ ವಾಕ್ಯದ ಸ್ಟಿಕ್ಕರ್ ಹಾಕಿಕೊಂಡಿದ್ದ. ಕೇವಲ ಸ್ಟಿಕ್ಕರ್ ಹಾಕಿಕೊಂಡಿರಲಿಲ್ಲ. ಅದೇ ರೀತಿ ಆತ ಬದುಕಿಬಿಟ್ಟ. ಒಂದು ಕಾಲ್‌ಗೆ 40-50 ಜನ ಸೇರಿಸುವಷ್ಟು ಬೆಳೆದರೆ ಸಹಿಸುವುದಿಲ್ಲ ಎಂದರೆ, ಸಮಾಜ ಅತ್ಯಂತ ಕ್ರೂರ ಹಂತಕ್ಕೆ ತಲುಪಿದೆ ಎಂದು ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು.
ಇದನ್ನೂ ಓದಿ | Veer Savarkar Flex: ಜಾತ್ರೆಯಲ್ಲಿ ಹಾಕಿದ್ದ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಪೊಲೀಸರ ಸೂಚನೆ
ಮುಂದಿನ ವರ್ಷ ತಿ.ನರಸೀಪುರದಲ್ಲಿ ಹನುಮ ಜಯಂತಿ ಇನ್ನೂ ಅದ್ಧೂರಿಯಾಗಿ ನಡೆಯಬೇಕು. ಹನುಮ ಜಯಂತಿ ಮಾಡುವುದಕ್ಕೆಂದೇ ಅನೇಕ ಸಂಘಟನೆಗಳು ಇವೆ. ನಾವು ಬೇರೆ ಕೆಲಸ ಮಾಡೋಣ ಅಂತ ಹೇಳುತ್ತಿದ್ದೆ. ಆದರೆ ತಿ.ನರಸೀಪುರದಲ್ಲಿ ವೇಣುಗೋಪಾಲ್‌ನಂತಹ ಹುಡುಗರು ಹನುಮ ಜಯಂತಿಗೋಸ್ಕರವೇ ಹುಟ್ಟುಕೊಂಡಿದ್ದರು. ವೇಣುಗೋಪಾಲ್ ಸಾವು ಸ್ವಲ್ಪ ದಿನಕ್ಕೆ ಮರೆತು ಹೋಗಬಹುದು. ಹೀಗೆ ಮರೆತು ಹೋಗುವ ಪ್ರವೃತ್ತಿ ಬೆಳೆದರೆ ಅಪಾಯಕಾರಿ. ಮರೆತು ಹೋಗಲು ಬಿಡಬಾರದು ಎಂದು ಹೇಳಿದರು.
ವೇಣುಗೋಪಾಲ್ ಹಣತೆ ಹಚ್ಚಿದ್ದಾನೆ. ನಾವು ಆ ಹಣತೆಗೆ ತೈಲ ಆಗಬೇಕು. ಇಲ್ಲಿ ಯಾವುದೇ ಕಾರಣಕ್ಕೂ ಹನುಮ ಜಯಂತಿ ನಿಲ್ಲಬಾರದು. ಮುಂದಿನ ವರ್ಷ ಈ ವರ್ಷಕ್ಕಿಂತಲೂ ಜೋರಾಗಿ ನಡೆಯಬೇಕು. ಇದೇ ವೇಣುಗೋಪಾಲ್ ಸಾವಿಗೆ ನಿಜವಾದ ಶ್ರದ್ಧಾಂಜಲಿ ಎಂದು ತಿಳಿಸಿದರು.
ಮೃತ ವೇಣುಗೋಪಾಲ್ ನಾಯಕ್ ಪತ್ನಿ ಪೂರ್ಣಿಮಾ ಮಾತನಾಡಿ, ನನ್ನ ಗಂಡ ನಾಲ್ಕೈದು ವರ್ಷದಿಂದ ಹಿಂದುಪರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯ ಹನುಮ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಕಾರ್ಯಕ್ರಮ ಮುಗಿದ ನಂತರ ನನ್ನ ಗಂಡನ ಜತೆ ಕೆಲವರು ಜಗಳ ಮಾಡಿದ್ದರು. ರಾಜಿ ಸಂಧಾನಕ್ಕೆ ಎಂದು ಕರೆದು ಗಂಡನನ್ನು ಕೊಲೆ ಮಾಡಿದ್ದಾರೆ. ಒಂದು ಕಾಲ್ ಮಾಡಿದ್ದರೆ 50 ಜನ ಹುಡುಗರು ನನ್ನ ಗಂಡನೊಂದಿಗೆ ಬರುತ್ತಿದ್ದರು. ನನ್ನ ಕೈಯಿಂದ ಊಟ ಮಾಡಿ ಹೋಗಿದ್ದೇ ಕೊನೆ. ಮತ್ತೆ ಬರಲೇ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ | Opposition Meet : ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಅವಕಾಶವಾದಿಗಳ ಸಭೆ, ಮೋದಿ ದ್ವೇಷವೇ ಅಜೆಂಡಾ ಎಂದ ಬಿಜೆಪಿ
ಮದುವೆಯಾಗಿ ಏಳು ವರ್ಷ ಆಯ್ತು. ನಾನು, ನನ್ನ ಮಗಳು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಯಾರೂ ಧರ್ಮ ಕಾರ್ಯ ಮಾಡುವಂತಿಲ್ಲವೇ ? ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಆದರೂ ಹಗಲು- ರಾತ್ರಿ ಕೆಲಸ ಮಾಡುತ್ತಿದ್ದರು. ಅವರಿಗೆ ಜಾತಿ ನಿಂದನೆ ಮಾಡಿದ್ದಾರೆ, ಮನೆಗೆ ನುಗ್ಗುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನನ್ನೊಂದಿಗೆ ಇರುವ ಹುಡುಗರು ಏನು ಮಾಡಬೇಕು? ನನಗೇನೂ ಆಗಲ್ಲ ಎಂದು ಹೇಳಿ ಹೋಗಿದ್ದ. ಮೆರೀತಾ ಇದ್ದೀಯಾ ಎಂದೆಲ್ಲ ಬೈದಿದ್ದರಂತೆ. ಏನ್ ಮೆರೀತಿದ್ದ? ನಮ್ಮ ಹತ್ತಿರ ಹಣ, ಆಸ್ತಿ ಇರಲಿಲ್ಲ. ಬಡವರ ಮಕ್ಕಳು ಬೆಳೆಯಬಾರದಾ ಎಂದು ಪೂರ್ಣಿಮಾ ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಜಿಲ್ಲಾಧ್ಯಕ್ಷ ಲೋಹಿತ್ ಅರಸ್, ಮೈಸೂರು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಮೃತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.