ಬೆಂಗಳೂರು: ವೇಗವಾಗಿ ನುಗ್ಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದು ೫೦ ಮೀಟರ್ ದೂರಕ್ಕೆ ಎತ್ತಿ ಎಸೆದು ಪರಾರಿಯಾದ (Hit and Run) ಭಯಾನಕ ಘಟನೆಯೊಂದು ಮೈಸೂರು ರಸ್ತೆಯ ಬಿಐಎಂಎಸ್ ಕಾಲೇಜು ಮುಂದೆ ಫೆಬ್ರವರಿ ೨ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜು ವಠಾರದಲ್ಲಿ ಹಾಕಲಾಗಿದ್ದ ಎರಡು ಹಂಪ್‌ಗಳನ್ನು ಎಂಟು ತಿಂಗಳ ಹಿಂದೆ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಸಂದರ್ಭದಲ್ಲಿ ಬಿಬಿಎಂಪಿ ತೆಗೆದು ಹಾಕಿತ್ತು. ಆ ಬಳಿಕ ಮತ್ತೆ ಹಂಪ್ಸ್ ಹಾಕದೆ ವಾಹನಗಳು ವೇಗವಾಗಿ ಸಾಗುತ್ತಿರುವುದರಿಂದ ಈ ಅಪಾಯ ಎದುರಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಐಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ತರಗತಿಯಲ್ಲಿ ಕಲಿಯುತ್ತಿದ್ದ ಶ್ವೇತಾ ಫೆಬ್ರವರಿ ೨ರಂದು ಮಧ್ಯಾಹ್ನ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ವೋಕ್ಸ್‌ವಾಗನ್ ಪೋಲೋ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶ್ವೇತಾ ಅವರು ಸುಮಾರು ೫೦ ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದಾರೆ. ಶ್ವೇತಾ ಅವರ ಬೆನ್ನು ಮೂಳೆ ಹಾಗೂ ಕ್ಕೆಗೆ ತೀವ್ರ ಗಾಯಗಳಾಗಿದ್ದು ಅಪಘಾತವಾದಾಗಿನಿಂದ ಪ್ರಜ್ಞಾಹೀನರಾಗಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶ್ವೇತಾ ಅವರ ತಂದೆ ಹುಬ್ಬಳಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹಂಪ್ಸ್ ತೆಗೆದದ್ದೇ ಕಾರಣ ಎನ್ನುವ ವಿದ್ಯಾರ್ಥಿಗಳು
ಅಪಘಾತಕ್ಕೆ ಬಿಬಿಎಂಪಿಯೇ ನೇರ ಕಾರಣ ಎಂದು ಸ್ಥಳೀಯರು ಮತ್ತು ವಿದ್ಯಾರ್ಥಿಗಳು ನೇರ ಆರೋಪ ಮಾಡುತ್ತಿದ್ದಾರೆ. ಈ ಕಾಲೇಜಿನ ಮುಂಭಾಗ ರಸ್ತೆಯ ಎರಡು ಕಡೆ ಹಂಪ್‌ಗಳನ್ನು ಹಾಕಲಾಗಿತ್ತು. ಹಂಪ್‌ಗಳು ಇದ್ದಾಗ ವಾಹನಗಳು ನಿಧಾನವಾಗಿ ಸಾಗಿ ವಿದ್ಯಾರ್ಥಿಗಳು ರಸ್ತೆ ದಾಟಲು ಅನುಕೂಲವಾಗುತಿತ್ತು. ಆದರೆ, ಎಂಟು ತಿಂಗಳ ಹಿಂದೆ ಮೋದಿ ಕಾರ್ಯಕ್ರಮ ನಿಮಿತ್ತ ಬಿಬಿಎಂಪಿ ಅಧಿಕಾರಿಗಳು ಹಂಪ್‌ಗನ್ನು ತೆಗೆದು ಹಾಕಿದ್ದರು.
ಬಿಬಿಎಂಪಿ ಮತ್ತು ಟ್ರಾಫಿಕ್ ವಿಭಾಗದ ಅಧಿಕಾರಿಗಳು ಇಲ್ಲಿ ಮತ್ತೆ ಹಂಪ್ ಪುನರ್‌ನಿರ್ಮಿಸಿಲ್ಲ. ಈ ಭಾಗದಲ್ಲಿ ಆರ್.ವಿ. ಕಾಲೇಜು, ಆರ್ಕಿಡ್ ಸ್ಕೂಲ್, ಬಿಐಎಂಎಸ್ ಕಾಲೇಜುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ರಸ್ತೆ ದಾಟುತ್ತಾರೆ.
ಸ್ಕೈ ವಾಕ್ ವ್ಯವಸ್ಥೆ ಮಾಡಿ ಎಂದು ಆಗ್ರಹ
ಈ ಭಾಗದಲ್ಲಿ ಒಂದೋ ಹಂಪ್ಸ್‌ಗಳನ್ನು ನಿರ್ಮಿಸಿ ವೇಗಕ್ಕೆ ತಡೆ ಹಾಕಬೇಕು, ಇಲ್ಲವಾದರೆ ಸ್ಕೈವಾಕ್ ವ್ಯವಸ್ಥೆ ಮಾಡಬೇಕು. ಪಾಲಿಕೆ ಜನರಿಗೆ ಉಪಯೋಗವಿಲ್ಲದ ಕಡೆ, ಕೇವಲ ಕಮರ್ಷಿಯಲ್ ದೃಷ್ಟಿಯಿಂದ ಸ್ಕೈವಾಕ್ ನಿರ್ಮಾಣ ಮಾಡುತ್ತಿದೆ. ಇಲ್ಲಿ ನಿರ್ಮಿಸಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : Road accident : ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಆಟೋ ರಿಕ್ಷಾ: ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ