Site icon Vistara News

Hit and Run case : ಆಟೋಗೆ ಗುದ್ದಿ ಇಬ್ಬರ ಸಾವಿಗೆ ಕಾರಣವಾದ ಕಾರು ಚಾಲಕ ಸೆರೆ; ತನ್ನ ತಪ್ಪಿಲ್ಲವೆಂದ ಆರೋಪಿ

riksha

ಬೆಂಗಳೂರು: ಕೆ.ಆರ್. ಪುರಂ ಬೆಂಗಳೂರು ಹೊರವಲಯ ಮೇಡಹಳ್ಳಿ ಪ್ಲೈಓವರ್ ಬಳಿ ಶುಕ್ರವಾರ (ಜ. ೬) ರಾತ್ರಿ ನಡೆದಿದ್ದ ಆಟೋಗೆ ಕಾರೊಂದು ಗುದ್ದಿ ಪರಾರಿಯಾಗಿದ್ದ (Hit and Run case) ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಹೊಸಕೋಟೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭೀಕರ ರಸ್ತೆ ಅಪಘಾತದಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮೂವರು ಗಾಯಗೊಂಡಿದ್ದರು.

ಬಂಧಿತ ಆರೋಪಿ ಸಂತೋಷ್‌

ಆಂಧ್ರ ಪ್ರದೇಶದ ಗುಂಟೂರು ಮೂಲದ ಟೆಕ್ಕಿ ಬೈಯ್ಯವೆಂಕಟ ಸಂತೋಷ್ ಅಭಿರಾಮ್ ಬಂಧಿತ ಆರೋಪಿ. ಇವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದಾನೆ. ಹೊಸಕೋಟೆಯಲ್ಲಿರುವ ಮನೆಯಲ್ಲಿಯೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೆ.ಆರ್. ಪುರಂನಿಂದ ಚೆನ್ನಸಂದ್ರಕ್ಕೆ ಹೋಗುತ್ತಿದ್ದ ವೇಳೆ ಕೆ.ಆರ್. ಪುರಂ ಬಳಿ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದಿತ್ತು. ಘಟನೆ ನಡೆಯುತ್ತಿದ್ದಂತೆ ಗಾಬರಿಗೊಂಡ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಜಖಂ ಆಗಿದ್ದು ಆಟೋ ರಿಕ್ಷಾದಲ್ಲಿದ್ದ ಹಸೀನಾ ಹಾಗೂ ಸುಮಯ್ಯ ಎಂಬಾಕೆ ಸ್ಥಳದಲ್ಲಿ ಮೃತಪಟ್ಟರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ಸುತ್ತಮುತ್ತಲು ವಿಚಾರಣೆ ಮಾಡಿದ್ದಾರೆ. ಆಗ ಪ್ರತ್ಯಕ್ಷದರ್ಶಿಗಳು ಮಾಹಿತಿ‌ ನೀಡಿದ್ದು, ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ್ದಾರೆ.

ಕೆ.ಆರ್. ಪುರಂ ಮಾರ್ಗದಲ್ಲಿ ಪೊಲೀಸರು ಕೆಲವು ಕಡೆ ಸಿಸಿ ಟಿವಿ ದೃಶ್ಯಾವಳಿಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಟೋಲ್‌ನಲ್ಲಿ ಹಣ ಪಾವತಿ ಮಾಡಿರುವುದು ಗೊತ್ತಾಗಿದೆ. ಅಲ್ಲಿ ಮೊಬೈಲ್‌ ನಂಬರ್‌ ಸಿಕ್ಕಿದ್ದು, ಆರೋಪಿಗೆ ಕರೆ ಮಾಡಿದ್ದಾರೆ. ಆಗ ಅಪಘಾತವಾಗಿರುವುದನ್ನು ಒಪ್ಪಿಕೊಂಡ ಆತ, ಸಣ್ಣ ಅಪಘಾತವಷ್ಟೇ, ಇದರಲ್ಲಿ ನನ್ನ ತಪ್ಪಿಲ್ಲ. ನನ್ನ ಮಗುವಿಗೆ ಆರೋಗ್ಯ ಸರಿ ಇರಲಿಲ್ಲ. ಈ ಕಾರಣಕ್ಕಾಗಿ ವೇಗವಾಗಿ ಬರುತ್ತಿದ್ದೆ ಎಂದು ಹೇಳಿದ್ದಾನೆ. ಆದರೆ, ಈ ಅಪಘಾತದಿಂದ ಇಬ್ಬರ ಪ್ರಾಣ ಹೋಗಿದ್ದರಿಂದ ಪೊಲೀಸರು ಸಂತೋಷ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Santro Ravi case | ತಲೆ ಹಿಡುಕನೊಬ್ಬ ಪೊಲೀಸ್‌ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸುವಷ್ಟು ಪ್ರಭಾವಿಯೇ: ಕಾಂಗ್ರೆಸ್‌ ಪ್ರಶ್ನೆ

Exit mobile version