ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಸಿಯೇಷನ್ ಜ.17ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ (Lorry Drivers Protest) ಕರೆ ಕೊಟ್ಟಿದೆ. ಕೇಂದ್ರದ ಹಿಟ್ ಆ್ಯಂಡ್ ರನ್ ಕಾನೂನು (Hit And Run Law) ವಿರೋಧಿಸಿ ಲಾರಿ ಚಾಲಕರು ಪ್ರತಿಭಟನೆಗೆ (Lorry strike) ನಡೆಸಲಿದ್ದಾರೆ.
ಉದ್ದೇಶಿತ ಕಾನೂನನ್ನು ಸಾರಿಗೆ ವಲಯದ ಪ್ರತಿನಿಧಿಗಳೊಂದಿಗೆ ಯಾವುದೇ ಸಮಲೋಚನೆಯಿಲ್ಲದೆ ಪರಿಚಯಿಸಲಾಗಿದೆ. ಪ್ರಸ್ತಾವಿತ ಕಾನೂನಿನಲ್ಲಿ ಕೆಲ ಲೋಪಗಳಿವೆ. ದೇಶದಲ್ಲಿ ಸಾರಿಗೆ ಉದ್ಯಮವು ಶೇ.27ರಷ್ಟು ಚಾಲಕರ ಕೊರತೆಯನ್ನು ಎದುರಿಸುತ್ತಿದೆ. ಹೀಗಿರುವಾಗ ಕಠಿಣ ಕಾನೂನಿನ ಭೀತಿಗೆ ಚಾಲಕ ವೃತ್ತಿಗೆ ಪ್ರವೇಶಿಸಲು ಹಿಂದೆಟ್ಟು ಹಾಕುತ್ತಿದ್ದಾರೆ. ಇದು ದೇಶದ ಪೂರೈಕೆ ಸರಪಳಿಯಲ್ಲಿ ಅಡಚಣೆಗಳಿಂದ ಕಾರಣವಾಗಬಹುದು.
10 ವರ್ಷ ಜೈಲು ಶಿಕ್ಷೆ!
ಅಪಘಾತವಾದರೆ 10 ವರ್ಷಗಳ ಜೈಲು ಶಿಕ್ಷೆ ಸೇರಿದಂತೆ ಕಟ್ಟುನಿಟ್ಟಾದ ನಿಬಂಧನೆಗಳು ಚಾಲಕರಲ್ಲಿ ಆತಂಕವನ್ನು ಹೆಚ್ಚಿಸಿದೆ. ದೇಶದಲ್ಲಿ ಅಪಘಾತ ತನಿಖಾ ಪ್ರೋಟೋಕಾಲ್‌ನ ಸಂಪೂರ್ಣ ಕೊರತೆ ಇದೆ. ಅಪಘಾತದ ಸಮಯದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪರಿಗಣಿಸದೇ ಭಾರಿ ವಾಹನಗಳು ಎಂಬ ಕಾರಣಕ್ಕೆ ಸುಖಾಸುಮ್ಮನೆ ದೂಷಿಸಲಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.
ಅನೇಕ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಚಾಲಕರು ಪರಾರಿ ಆಗಿಬಿಡುತ್ತಾರೆ ಎಂಬ ಅಪವಾದವಿದೆ. ಆದರೆ ಬಹುತೇಕ ಸಂದರ್ಭದಲ್ಲಿ ಸ್ಥಳೀಯರ ಬೆದರಿಕೆ ಕಾರಣಕ್ಕೆ, ಜೀವ ಭಯಕ್ಕೆ ಚಾಲಕರು ಅಪಘಾತ ಸ್ಥಳದಿಂದ ಕಾಲ್ಕಿತ್ತಿರುತ್ತಾರೆ. ಬಳಿಕ ಸ್ವಇಚ್ಛೆಯಿಂದ ಪೊಲೀಸರಿಗೆ ಶರಣಾಗಿದ್ದಾರೆ. ಹೀಗಿರುವ ಕಾನೂನೂ ತೊಡಕುಗಳನ್ನು ಪರಿಹರಿಸದೇ ಕಠಿಣ ಕಾನೂನು ಮೊರೆ ಹೋಗುವುದು ಸಮಂಜಸವಲ್ಲ ಎಂದಿದ್ದಾರೆ.
ಸದ್ಯದ ಹೊಸ ಕಾನೂನು ಭಾರತ ಸಾರಿಗೆ ಕ್ಷೇತ್ರಕ್ಕೆ ವಿರುದ್ಧವಾಗಿದೆ. ದೇಶದಾದ್ಯಂತ ಟ್ರಕ್ ಚಾಲಕರ ಸಮುದಾಯದಲ್ಲಿ ಅಶಾಂತಿ ಮೂಡಿ ಉದ್ಯೋಗವನ್ನು ತ್ಯಜಿಸಬಹುದು. ಸಾರಿಗೆ ಉದ್ಯಮದ ದೃಷ್ಟಿಕೋನದಿಂದ ಗಣನೆಗೆ ತೆಗೆದುಕೊಂಡು ಹೊಸ ಕಾನೂನನ್ನು ಮರುಪರಿಶೀಲಿಸುವಂತೆ ಲಾರಿ ಮಾಲೀಕರು ಮನವಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: BBK SEASON 10: ನಾನ್ ಸರಿಯಿಲ್ಲ, ನನ್ನ ಹತ್ರ ಇದೆಲ್ಲ ಬೇಡ; ಮೈಕಲ್‌ಗೆ ಬಿಸಿ ಮುಟ್ಟಿಸಿದ ಕಿಚ್ಚ!
ಹೊಸ ಕಾನೂನಿನಲ್ಲಿ ಏನಿದೆ?
ಅಪಘಾತ ನಡೆಸಿ ಪರಾರಿಯಾದ (ಹಿಟ್ ಆ್ಯಂಡ್ ರನ್) ಪ್ರಕರಣ, ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ವ್ಯಕ್ತಿಯ ಸಾವಿಗೆ ಕಾರಣವಾದರೆ, ಯಾವುದೇ ಚಾಲಕ ಅಪಘಾತದ ಬಗ್ಗೆ ಅಧಿಕಾರಿಗಳಿಗೆ ವರದಿ ಮಾಡದೆ. ಸ್ಥಳದಿಂದ ಪಲಾಯನ ಮಾಡುವವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.
ಹಿಂದೆ ಕಾನೂನು ಏನಿತ್ತು?
ಹಳೆಯ, ಬ್ರಿಟಿಷರ ಕಾಲದ ಭಾರತೀಯ ದಂಡ ಸಂಹಿತೆ (IPC)ಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ನಿರ್ದಿಷ್ಟ ನಿಬಂಧನೆಯನ್ನು ಹೊಂದಿರಲಿಲ್ಲ. ಐಪಿಸಿಯ ಸೆಕ್ಷನ್ 304 ಎ ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆ ಪ್ರಕಾರ ಉದ್ದೇಶಪೂರ್ವಕವಲ್ಲದ ಮತ್ತು ನಿರ್ಲಕ್ಷ್ಯದ ಕೃತ್ಯದಿಂದ ಸಾವಿಗೆ ಕಾರಣ ಎಂದು IPC ಯ ಸೆಕ್ಷನ್ 304 A ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಅದರಡಿ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ / ದಂಡ ವಿಧಿಸಬಹುದಿತ್ತು.
ಇದನ್ನೂ ಓದಿ: Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ ಇಲ್ಲಿದೆ
ಈಗ ವಿರೋಧ ಯಾಕೆ?
ದೊಡ್ಡ ವಾಹನ ಮತ್ತು ಚಿಕ್ಕ ವಾಹನಗಳ ನಡುವೆ ಅಪಘಾತ ನಡೆದಾಗ ತನಿಖೇ ನಡೆಸದೆ ಭಾರಿ ಗಾತ್ರದ ವಾಹನಗಳದ್ದೇ ತಪ್ಪೆಂದು ಕೇಸ್ ಹಾಕಬಹುದು. ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಆಗಬಹುದು. ಜತೆಗೆ ದೊಡ್ಡ ಮೊತ್ತದ ದಂಡವನ್ನು ಕೂಡ ಕೋರ್ಟ್ ವಿಧಿಸಬಹುದು. ಹೀಗಾಗಿ ಲಾರಿ ಹಾಗೂ ಟ್ರಕ್ ಚಾಲಕರು ಆತಂಕಕ್ಕೆ ಒಳಗಾಗಿದ್ದಾರೆ.
ಅಪಘಾತ ನಡೆದಾಗ ಲಾರಿಯನ್ನು ವಶಕ್ಕೆ ಪಡೆಯಲಾಗುತ್ತದೆ. ನಂತರ ಇಂತಹ ಲಾರಿಗಳನ್ನು ಹಿಂದಿರುಗಿಸಲು ಸತಾಯಿಸುತ್ತಾರೆ. ಸಂಚಾರ ದಟ್ಟಣೆ ನೆಪವೊಡ್ಡಿ ಲಾರಿಗಳಿಗೆ ಹೆಚ್ಚು ದಂಡ ವಿಧಿಸಲಾಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದ ಈ ಕಾನೂನಿಗೆ ಹೆದರಿ ಹೊಸಬರು ಈ ವೃತ್ತಿಗೆ ಬರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿಯಮವನ್ನು ಸಡಿಲಗೊಳಿಸಬೇಕೆಂದು ಜ.17ವರೆಗೆ ಲಾರಿ ಸಂಘವು ಗಡುವು ನೀಡಿದೆ.
ಲಾರಿ ಚಾಲಕರ ಬೇಡಿಕೆಗಳೇನು?
-ಗಡಿ ಭಾಗದ ಸಾರಿಗೆ ಇಲಾಖೆ ಚೆಕ್‌ಪೋಸ್ಟ್ ತೆರವು.
-ಹೆಚ್ಚುವರಿ ಪ್ರೊಜೆಕ್ಷನ್ ದಂಡ ಇಳಿಕೆ.
-ಕಪ್ಪುಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್ಸಿ ಮತ್ತು ಪರ್ಮಿಟ್ ನವೀಕರಣಕ್ಕೆ ಅನುಮತಿ.
-ಅಪಘಾತದ ವೇಳೆ ಪೊಲೀಸರು ಚಾಲನಾ ಪತ್ರ ವಶಪಡಿಸಿಕೊಳ್ಳಬಾರದು.
-ಹೊರರಾಜ್ಯ ವಾಹನಗಳ ಅಪಘಾತವಾದಾಗ ಬಿಡುಗಡೆಗೆ ಸ್ಥಳೀಯ ವ್ಯಕ್ತಿಗಳ ಭದ್ರತೆ ಹಾಗೂ ಜಾಮೀನು ಕೇಳಬಾರದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.