Site icon Vistara News

Holi tragedy : ಹೋಳಿ ಹಬ್ಬದ ದಿನ ಕೆರೆಯಲ್ಲಿ ಈಜಲು ಹೋಗಿ ಯುವಕ ನೀರುಪಾಲು

Holi death dharwad

#image_title

ಧಾರವಾಡ: ರಾಜ್ಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗಿದೆ. ಆದರೆ, ಇಲ್ಲೊಬ್ಬ ಯುವಕನಿಗೆ ಹೋಳಿ ಸಂಭ್ರಮ ದುರಂತವಾಗಿ (Holi tragedy) ಬದಲಾಗಿದೆ. ಹೋಳಿ ಹಬ್ಬದ ದಿನವೇ ಕೆರೆಯಲ್ಲಿ ಈಜಲು ಹೋದ ಯುವಕನೊಬ್ಬ ನೀರುಪಾಲಾಗಿದ್ದಾನೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಅಣ್ಣಪ್ಪ ದಾಸನಕೊಪ್ಪ (27) ಮೃತಪಟ್ಟ ಯುವಕ.

ಹೋಳಿ ಹಬ್ಬದ ನಿಮಿತ್ತ ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದ. ಬಳಿಕ ಅದನ್ನು ತೊಳೆದುಕೊಳ್ಳಲೆಂದು ನಿಗದಿ ಹಿರಿಯ ಕೆರೆಗೆ ಹೋಗಿದ್ದ. ಅಲ್ಲಿ ಆತ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ.

ಹಬ್ಬ ಆಚರಣೆ ಮಾಡಿದ ಸಂಭ್ರಮದಲ್ಲಿದ್ದ ಸಂಜೆಯೇ ಯುವಕನ ಸಾವು ಸಂಭವಿಸಿದ್ದು, ಆತನ ಮನೆಯವರು ಮತ್ತು ಗೆಳೆಯರು ಕಂಗಾಲಾಗಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

ಹೋಳಿ ಹಬ್ಬದ ಹಿನ್ನೆಲೆ: ಅಕ್ರಮ ಮದ್ಯ ದಾಸ್ತಾನು

ವಿಜಯಪುರ: ಹೋಳಿ ಹಬ್ಬದ ಸಂದರ್ಭದಲ್ಲಿ ಮದ್ಯಕ್ಕೆ ಒಳ್ಳೆಯ ಡಿಮ್ಯಾಂಡ್‌ ಇರುತ್ತದೆ ಎಂಬ ಕಾರಣಕ್ಕಾಗಿ ಅದನ್ನು ಅಕ್ರಮವಾಗಿ ಡಾಬಾದಲ್ಲಿ ಸಂಗ್ರಹಿಸಿಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ವಿಜಯಪುರ ನಗರ, ಆಲಮಟ್ಟಿಯ ಡಾಬಾಗಳಲ್ಲಿ ಅಕ್ರಮ ಮದ್ಯ ದಾಸ್ತಾನು ಇಡಲಾಗಿದೆ ಎಂಬ ಮಾಹಿತಿಯ ಆಧಾರದಲ್ಲಿ ಸೈಬರ್‌ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ವಿವಿಧ ಬ್ರ್ಯಾಂಡಿನ 203 ಬಿಯರ್ ಬಾಟಲ್ ಹಾಗೂ ವಿವಿಧ ಬ್ರ್ಯಾಂಡಿನ 740 ಮದ್ಯದ ಬಾಟಲ್ ಜಪ್ತಿ ಮಾಡಲಾಗಿದೆ.

ಸಿಇಎನ್ ಕ್ರೈಂ ಪಿಎಸ್ಐ ಸಂಜೀವ ಕಾಂಬ್ಳೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Holi 2023: ಬಣ್ಣಗಳ ಹಬ್ಬವೆಂದರೆ ತಿನಿಸುಗಳ ಸಂಭ್ರಮವೂ ಹೌದು!

Exit mobile version