Site icon Vistara News

Araga Jnanendra | ಆರಂಭದಲ್ಲಿ ಸ್ವಲ್ಪ ಮುಜುಗರ ಆಗಿದ್ದು ನಿಜ, ಈಗ Expert ಆಗಿದ್ದೇನೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಶಿವಮೊಗ್ಗ: ರಾಜ್ಯದಲ್ಲಿ ಗೃಹ ಸಚಿವರನ್ನು ಕಾಡುವಷ್ಟು ವಿಷಯಗಳು ಬೇರೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ಹೆಚ್ಚಿನ ಅನುಭಗಳಿಲ್ಲದೆ ಇದ್ದ ನನಗೆ ಆರಂಭದಲ್ಲಿ ಸಂಕೋಚವಾಗುತ್ತಿತ್ತು. ಆಯನೂರು ಮಂಜುನಾಥರಂಥವರು ನಿನಗ್ಯಾಕೆ ಗೃಹ ಖಾತೆ ಅಂತಲೂ ಕೇಳಿದ್ದಾರೆ. ಆದರೆ, ಈಗ ನಾನು ಎಕ್ಸ್‌ಪರ್ಟ್‌ ಆಗಿದ್ದೇನೆ- ಹೀಗೆಂದು ಆತ್ಮವಿಶ್ವಾಸದಿಂದ ಹೇಳಿದರು ಗೃಹ ಸಚಿವ ಆರಗ ಜ್ಞಾನೇಂದ್ರ.

ಶಿವಮೊಗ್ಗದಲ್ಲಿ ಪೂರ್ವ ಸಂಚಾರ ಠಾಣೆ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರೊಂದಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಎಮ್ಮೆಲ್ಸಿ ಆಯನೂರು ಮಂಜುನಾಥ್, ಐಜಿಪಿ ಕೆ.ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕೂಡಾ ಇದ್ದರು.

ಆರಂಭದಲ್ಲಿ ಮಾತನಾಡಿದ ಬಿಜೆಪಿ ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ ಅವರು ಸ್ವಲ್ಪ ಮಟ್ಟಿಗೆ ಗೃಹ ಸಚಿವರನ್ನು ತಿವಿದರು. ತಮ್ಮನ್ನು ಕೊನೆ ಗಳಿಗೆಯಲ್ಲಿ ಆಹ್ವಾನಿಸಿದ ವಿಚಾರದಲ್ಲಿ ಅವರಿಗೆ ಸ್ವಲ್ಪ ಸಿಟ್ಟು ಇದ್ದಂತಿತ್ತು.

ʻʻಶಿವಮೊಗ್ಗದಲ್ಲಿ ಪೊಕ್ಸೊ ಪ್ರಕರಣ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಪೊಲೀಸ್ ಬಲ ಹೆಚ್ಚಿಸಬೇಕು. ಠಾಣೆಗಳಿಗೆ ಅಗತ್ಯ ಸೌಕರ್ಯ, ಸಿಬ್ಬಂದಿ ಹೆಚ್ಚಿಸಬೇಕುʼʼ ಎಂದು ಹೇಳಿದ ಅವರು ನಂತರ, ʻʻನನ್ನನ್ನು ಈ ಕಾರ್ಯಕ್ರಮಕ್ಕೆ ಕೊನೇ ಗಳಿಗೆಯಲ್ಲಿ ಆಹ್ವಾನಿಸಿದ್ದೀರಿ. ನಗರದಲ್ಲಿ ನಾಲ್ಕೈದು ಶಾಸಕರಿದ್ದಾರೆ. ಮುಂಚಿತವಾಗಿ ಕರೆದಿದ್ದರೆ ಎಲ್ಲರೂ ಬರುತ್ತಿದ್ದರು. ಗೃಹಸಚಿವರಿಗೆ ಸುತ್ತಮುತ್ತ ಪೊಲೀಸರಿದ್ದರೆ ಸಾಕೇನೊ?ʼʼ ಎಂದು ಚುಚ್ಚಿದರು.

ಆರಗ ಜ್ಞಾನೇಂದ್ರ ಪ್ರತ್ಯುತ್ತರ
ಆಯನೂರು ಮಂಜುನಾಥ ಅವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಅವರು, ʻʻನಾನೇನೂ ಐದು ವರ್ಷದಿಂದ ಮಂತ್ರಿಯಾಗಿದ್ದವನಲ್ಲ. ಕೇವಲ ಒಂದೂವರೆ ವರ್ಷದಲ್ಲಿ ಗೃಹಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಇರುವ ಅವಧಿಯಲ್ಲಿ ಜಿಲ್ಲೆಗೆ ಗರಿಷ್ಠ ಅನುದಾನ ಕೊಟ್ಟಿದ್ದೇನೆʼʼ ಎಂದರು.

ʻʻಸೆಂಟ್ರಲ್ ಜೈಲ್ ಅಭಿವೃದ್ಧಿಗೆ 108 ಕೋಟಿ ರೂ ಮಂಜೂರು ಮಾಡಿದ್ದೇನೆ. 10 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗಕ್ಕೆ ಎಫ್ ಎಸ್ ಎಲ್ ಕೇಂದ್ರ ಸ್ಥಾಪನೆ ಆಗುತ್ತಿದೆ. ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಪ್ರತಿ ಠಾಣೆಗೆ ಸೈಬರ್ ಕ್ರೈಮ್ ತಜ್ಞರ ನೇಮಕ ಮಾಡಲಾಗಿದೆ. ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇವೆʼʼ ಎಂದು ಲೆಕ್ಕ ನೀಡಿದರು.

ಮಂತ್ರಿಯಾದ ಬಳಿಕ ಎದುರಾದ ಸವಾಲುಗಳನ್ನು ವಿವರಿಸಿದ ಅವರು, ʻʻಹಿಜಾಬ್ ಸೇರಿದಂತೆ ಎಲ್ಲ ಸವಾಲು ನನ್ನ ಅವಧಿಯಲ್ಲಿ ನಡೆಯಿತು. ಪಿಎಸ್ ಐ ನೇಮಕಾತಿ ಹಗರಣ ಕೂಡಾ ಸವಾಲಾಗಿತ್ತು. ಬೇಲಿಯೇ ಎದ್ದು ಮೇಯ್ದ ಪರಿಸ್ಥಿತಿ ಅದು. ಆದರೂ ನಮ್ಮ ಇಲಾಖೆ ಪಾರದರ್ಶಕವಾಗಿ ತನಿಖೆ ಮಾಡಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯನ್ನು ಜೈಲಿಗೆ ಕಳಿಸಿದ್ದೇವೆ. ಗೃಹ ಇಲಾಖೆ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಇದರ ಕ್ರೆಡಿಟ್ ಸಾಮಾನ್ಯ ಪೇದೆಯಿಂದ ಅಧಿಕಾರಿಗಳವರೆಗೆ ಸಲ್ಲುತ್ತದೆʼʼ ಎಂದರು.

ʻʻಪ್ರತಿಪಕ್ಷಗಳು ವಿತಂಡವಾದ ಮಾಡುತ್ತಿವೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿವೆ. ಶಿವಮೊಗ್ಗದಲ್ಲಿ ನಡೆದ ಹಿಂದು ಹರ್ಷ ಕೊಲೆ ಖಂಡಿಸುವುದನ್ನು ಬಿಟ್ಟು ಈಶ್ವರಪ್ಪ ವಿರುದ್ಧ ಮಾತನಾಡಲಾಯಿತು. ಮೈಸೂರಿನಲ್ಲಿ ನಡೆದ ಅತ್ಯಾಚಾರ ಖಂಡಿಸುವುದು ಬಿಟ್ಟು ನನ್ನ ಮೇಲೆ ಹರಿಹಾಯ್ದರುʼʼ ಎಂದ ಅವರು, ʻʻಶಿವಮೊಗ್ಗ ರೌಡಿಗಳ ರಾಜ್ಯವಾಗಿತ್ತು. ಈಗ ಯಾರೂ ಬಾಲ ಬಿಚ್ಚುತ್ತಿಲ್ಲ. ಶಿವಮೊಗ್ಗ, ಭದ್ರಾವತಿಯಲ್ಲಿ ಇನ್ನು ರೌಡಿಗಳ ಆಟ ನಡೆಯದುʼʼ ಎಂದು ಎಚ್ಚರಿಸಿದರು.

ಆರಂಭದಲ್ಲಿ ಗೃಹ ಸಚಿವನಾಗಿ ಕೆಲವೊಂದು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು ಎಂದು ಒಪ್ಪಿಕೊಂಡ ಆರಗ ಜ್ಞಾನೇಂದ್ರ ಅವರು, ಈಗ ತಾನು ಎಲ್ಲವನ್ನೂ ತಿಳಿದುಕೊಂಡಿದ್ದಾಗಿ ಹೇಳಿದರು.

ಇದನ್ನೂ ಓದಿ | ಅಡಕೆ ಬೆಳೆ ಪ್ರದೇಶ ಹೀಗೇ ವಿಸ್ತರಣೆ ಆಗುತ್ತಿದ್ದರೆ ಒಂದಲ್ಲ ಒಂದು ದಿನ ಬೆಲೆ ಕುಸಿದು ಬೀಳಲಿದೆ ಎಂದ ಆರಗ ಜ್ಞಾನೇಂದ್ರ

Exit mobile version