Site icon Vistara News

ಸಹಕಾರ ಸಂಘದ ಕೆಲಸ ಎಲ್ಲಕ್ಕಿಂತ ನೆಮ್ಮದಿ, ಸಂತೋಷ ನೀಡಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಸಹಕಾರ

ಶಿರಸಿ: ಉತ್ತರ ಕನ್ನಡ ಜಿಲ್ಲೆ ಹಾಗೂ ಸಹಕಾರ ಸಂಘಗಳಿಗೆ ಬಹಳ ಅವಿನಾಭಾವ ಸಂಬಂಧವಿದೆ. ಇಲ್ಲಿ ಸ್ಥಾಪನೆಯಾಗಿರುವ ಒಂದೊಂದು ಸಂಘವೂ ಅದ್ಭುತವಾಗಿ ಬೆಳೆದು ಜನರಿಗೆ ನೆರವು ನೀಡುತ್ತಿದೆ. ವ್ಯಕ್ತಿಗಿಂತ ಸಮುದಾಯದ ಜತೆ ಬೆಳೆಯಬೇಕೆನ್ನುವ ಭಾವನೆಯಿಂದ ಈ ಜಿಲ್ಲೆಯಲ್ಲಿ ಹಲವು ಸಹಕಾರ ಸಂಘಗಳು ಹುಟ್ಟಿವೆ. ನಾನು ಕೂಡ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ನಾಲ್ಕನೇ ಬಾರಿಗೆ ಶಾಸಕನಾಗಿದ್ದರೂ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವುದೇ ನನಗೆ ಎಲ್ಲಕ್ಕಿಂತ ನೆಮ್ಮದಿ, ಸಂತೋಷ ನೀಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪರಿವಾರ ಸಹಕಾರಿ ಸಂಘ ನಿಯಮಿತ ಉದ್ಘಾಟನೆ ಹಾಗೂ ಹಿರಿಯ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಪ್ರಾಥಮಿಕ ಸಹಕಾರ ಸಂಘ, ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಅಡಕೆ ಮಾರಾಟ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ | ಸಹಕಾರ ವ್ಯವಸ್ಥೆಗೆ ಸದಾಕಾಲ ಅವಕಾಶ, ಉಜ್ವಲ ಭವಿಷ್ಯ: ಹರಿಪ್ರಕಾಶ್ ಕೋಣೆಮನೆ ಅಭಿಮತ

ಜಿಲ್ಲೆಯಲ್ಲಿ ಬಹಳ ಸಶಕ್ತವಾಗಿ ಸಹಕಾರ ಕ್ಷೇತ್ರ ಬೆಳೆದು ಜನರಿಗೆ ನೆರವು ನೀಡುತ್ತಿದೆ. ವ್ಯಕ್ತಿಗಿಂತ ಸಮುದಾಯದ ಜತೆ ಬೆಳೆಯಬೇಕೆನ್ನುವ ಭಾವನೆಯಿಂದ ಈ ಜಿಲ್ಲೆಯಲ್ಲಿ ಇಷ್ಟೊಂದು ಸಹಕಾರ ಸಂಘಗಳು ಹುಟ್ಟಿವೆ. ಈಗ ಹೊಸದಾಗಿ ಪರಿವಾರ ಸಹಕಾರಿ ಸಂಘ ಆರಂಭವಾಗಿದೆ. ಒಬ್ಬ ಮನುಷ್ಯ ಎಷ್ಟು ದುಡಿಯುತ್ತಾನೆ ಎನ್ನುವುದು ಮುಖ್ಯವಲ್ಲ, ಸಮಾಜದ ಜತೆಗೆ ಹೇಗೆ ದುಡಿಮೆಯನ್ನು ಜೋಡಿಸಿಕೊಳ್ಳುತ್ತಾನೆ ಎಂಬುವುದು ಮುಖ್ಯ. ಈ ರೀತಿ ಸಮಾಜಮುಖಿಯಾಗಿ ಕೆಲಸ ಮಾಡುವುದರಲ್ಲಿ ಸಂತೋಷ ಪಡಲು ಒಂದು ಸಂಸ್ಕಾರ ಬೇಕು. ಆ ರೀತಿಯ ಸಂಸ್ಕಾರ ಶ್ರೀನಿವಾಸ ಹೆಬ್ಬಾರ್‌ ಅವರಿಗಿದೆ. ಇದರಿಂದ ಕೆರೆ ಹೆಬ್ಬಾರ್‌ ಎಂದೇ ಹೆಸರಾದ ಶ್ರೀನಿವಾಸ ಹೆಬ್ಬಾರ್‌ ಅವರು ಸಹಕಾರ ಹೆಬ್ಬಾರ್‌ ಆಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿವಾರ ಸಹಕಾರಿ ಸಂಘದ ನಿರ್ದೇಶಕರು ಹಾಗೂ ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ನನಗೆ ಬಹಳ ಆತ್ಮೀಯರು. ಅವರು ರಾಜ್ಯದ ಮಾಧ್ಯಮ ಜಗತ್ತಿನಲ್ಲಿ ಮಿಂಚುತ್ತಿರುವ ನಕ್ಷತ್ರವಾಗಿದ್ದಾರೆ. ಅತ್ಯಂತ ಪ್ರತಿಭಾವಂತರಾಗಿರುವ ಅವರು ಕೈಹಾಕಿರುವ ಎಲ್ಲಾ ಮಾಧ್ಯಮಗಳು ಬಹು ಎತ್ತರಕ್ಕೆ ಬೆಳೆದಿವೆ. ಈಗ ವಿಸ್ತಾರ ನ್ಯೂಸ್‌ ಎಂಬ ಹೊಸ ಚಾನೆಲ್‌ನ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ವಿಸ್ತಾರ ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತದೆ ಎಂದರು.

ಹರಿಪ್ರಕಾಶ್‌ ಕೋಣೆಮನೆ ಅವರ ಅನುಭವ ಮತ್ತು ಚಿಂತನೆ ಕೇವಲ ತಮಗೇ ಏನೋ ಸಿಗುತ್ತದೆ ಎಂಬುವುದಕ್ಕಿಂತ ರಾಷ್ಟ್ರಕ್ಕೆ ಮಾಧ್ಯಮದಿಂದ ಅನುಕೂಲವಾಗುವ ಜತೆಗೆ ಸಮಾಜ ಪರಿವರ್ತನೆಗೆ ಮಾಧ್ಯಮ ನೆರವಾಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಹೀಗಾಗಿ ಇಂತಹವರೆಲ್ಲ ಸೇರಿ ಕಟ್ಟಿರುವ ಪರಿವಾರ ಸಹಕಾರಿ ಸಂಘ ಉತ್ತಮವಾಗಿ ಬೆಳೆಯುತ್ತದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.

ಅಮೆರಿಕದ ಒಂದು ಬ್ಯಾಂಕ್‌ಗೆ ನಷ್ಟವಾದರೆ ಇಡೀ ಪ್ರಪಂಚದ ಹಲವು ದೇಶಗಳ ಮೇಲೆ ಅದರ ಋಣಾತ್ಮಕ ಪರಿಣಾಮ ಬೀರುತ್ತದೆ. ಆದರೆ ಸಹಕಾರ ವ್ಯವಸ್ಥೆ ಬಲವಾಗಿರುವುದರಿಂದ ಭಾರತದ ಮೇಲೆ ಅಂತಹ ಪರಿಣಾಮ ಬೀರಿಲ್ಲ. ಏಕೆಂದರೆ ಸಹಕಾರ ಸಂಘಗಳು ಇಲ್ಲಿನ ಅರ್ಥ ವ್ಯವಸ್ಥೆಯ ಬುನಾದಿಯಾಗಿರುವುದರಿಂದ ದೇಶದ ಆರ್ಥಿಕತೆ ಸಶಕ್ತವಾಗಿದೆ. ಹಾಗಾಗಿ ಸಹಕಾರ ಸಂಘಗಳು ಹೆಚ್ಚಾಗಿ ಬೆಳೆಯಬೇಕು ಎಂದರು.

ಭಾರತದಲ್ಲಿ ಸಹಕಾರ ಕ್ಷೇತ್ರವನ್ನು ಬಲಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಕೃಷಿ ಇಲಾಖೆಯಲ್ಲಿದ್ದ ಸಹಕಾರ ಕ್ಷೇತ್ರವನ್ನು ಈ ಬಾರಿ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ಮಾಡಲಾಗಿದೆ. ಸಹಕಾರ ರಂಗವನ್ನು ಬಲಪಡಿಸಬೇಕು ಎಂಬುವುದು ಪ್ರಧಾನಿ ಮೋದಿ ಅವರ ಚಿಂತನೆಯಾಗಿದೆ. ಹಾಗಾಗಿ ಸಹಕಾರ ಸಂಘಗಳಲ್ಲಿ ಜನರು ಹೆಚ್ಚಾಗಿ ವ್ಯವಹಾರ ಮಾಡಿ ಲಾಭ ಪಡೆಯಬೇಕು ಎಂದು ಸಲಹೆ ನೀಡಿದರು.

ಶಿರಸಿ ಕೆನರಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌ ಅವರು ಮಾತನಾಡಿ, ಶ್ರೀನಿವಾಸ್‌ ಹೆಬ್ಬಾರ್‌ ಅವರ ತಂಡ ಪರಿವಾರದ ಹೆಸರಿನಲ್ಲಿ ಸಹಕಾರ ಸಂಘ ಹುಟ್ಟುಹಾಕಿದೆ. ನಾನು 25 ವರ್ಷಗಳ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ಸಹಕಾರ ಕ್ಷೇತ್ರದ ಹೆಚ್ಚು ಸಂತೃಪ್ತಿ ನೀಡಿದೆ. ಈಗ ಶ್ರೀನಿವಾಸ್‌ ಹೆಬ್ಬಾರ್‌ ಅವರು ಸಹಕಾರ ಕ್ಷೇತ್ರದಲ್ಲಿ ಈಗ ಪುಟ್ಟ ಹೆಜ್ಜೆ ಇಟ್ಟಿದ್ದು, ಅವರ ಸಂಘ ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿ ಗುರುತಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.

ಸಹಕಾರ ಕ್ಷೇತ್ರದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಬಹಳ ದೊಡ್ಡ ಇತಿಹಾಸ ಇದೆ. ರಾಜ್ಯದ ಜಿಲ್ಲೆಗಳಲ್ಲಿ ಕೇವಲ 9 ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಗಟ್ಟಿಯಾದ ಬುನಾದಿಯಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಗದಗ, ಬೀದರ್‌, ಕಲಬುರಗಿ, ವಿಜಯಪುರ ಹಾಗೂ ಮೈಸೂರು ಜಿಲ್ಲೆಗಳು ಹೊರತುಪಡಿಸಿದರೆ ಬೇರೆ ಜಿಲ್ಲೆಗಳಲ್ಲಿ ಸಹಕಾರ ಕ್ಷೇತ್ರ ಜೀವಂತಿಕೆಯಾಗಿರದ ಕಾರಣ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಹಕಾರಿ ಸಂಘಗಳಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡಲಾಗಿದೆ. ಕೃಷಿ ಕ್ಷೇತ್ರದ ಅಭ್ಯುದಯವೇ ನಮ್ಮ ಮೊದಲ ಆದ್ಯತೆಯಾಗಿದೆ. ಕೃಷಿ ಕ್ಷೇತ್ರಕ್ಕೆ ಸಾಲ ನೀಡುವುದರಿಂದ ಲಾಭ ನಿರೀಕ್ಷೆ ಮಾಡದೆ ಸಾಲ ನೀಡಲಾಗುತ್ತಿದೆ. ಜಿಲ್ಲೆಯ ಶೇ.99.89 ಕೃಷಿಕರು ಸಕಾಲದಲ್ಲಿ ಜಿಲ್ಲೆಯ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಸಹಕಾರ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ ಎಂದು ಹೇಳಿದರು.

ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್‌ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್‌ ಅವರು ಮಾತನಾಡಿ, ಯಾವುದೇ ಸಂಸ್ಥೆ ಬೆಳೆಯಬೇಕೆಂದರೆ ಪ್ರಾಮಾಣಿಕತೆ, ಶಿಸ್ತು ಬೇಕು. ಜಿಲ್ಲೆಯಲ್ಲಿ ಈಗಾಗಲೇ 9 ಕೆರೆಗಳು ಹಾಳಾಗಿದ್ದವು. ಜೀವಜಲ ಕಾರ್ಯಪಡೆ ಹಾಗೂ ಹಲವು ಸಂಘಗಳ ಸಹಕಾರದಿಂದ ಕೆರೆಗಳ ಒತ್ತುವರಿ ತೆರವು ಮಾಡಿಸಿ ಪುನಶ್ಚೇತನ ಮಾಡಲು ಕ್ರಮ ಕೈಗೊಂಡಿದ್ದೇವೆ. ಹೀಗೆ ಮನಸ್ಸು ಮಾಡಿದರೆ ಏನಾದರೂ ಮಾಡಬಹುದು ಎಂದರು.

ಪ್ರಾಮಾಣಿಕತೆ, ಶಿಸ್ತು ಮೈಗೂಡಿಸಿಕೊಂಡಿದ್ದರಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ಹೀಗಾಗಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಎಂಬ ದೃಷ್ಟಿಯಿಂದ ಸಹಕಾರ ಸಂಘ ಆರಂಭಿಸಲಾಗಿದೆ. ಶಿವರಾಮ ಹೆಬ್ಬಾರ್‌ ಅವರು ಹೇಳಿದಂತೆ ಎಲ್ಲ ಜಿಲ್ಲೆಗಳಿಗೂ ಸಹಕಾರ ಸಂಘವನ್ನು ವಿಸ್ತರಿಸಿ ಜನರಿಗೆ ನೆರವಾಗುವ ಕೆಲಸ ಮಾಡುತ್ತೇವೆ ಎಂದರು.

ಪರಿವಾರ ಸಹಕಾರಿ ಷೇರು ಸರ್ಟಿಫಿಕೇಟ್‌ ಹಾಗೂ ʻಪರಿವಾರ ವಿಶೇಷ ಠೇವಣಿ ಸರ್ಟಿಫಿಕೇಟ್‌ʼ ಅನ್ನು ಕಾರ್ಮಿಕ ಸಚಿವ ಹಾಗೂ ಶಿರಸಿ ಕೆನರಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅರಬೈಲ್ ಶಿವರಾಮ್ ಹೆಬ್ಬಾರ್ ಬಿಡುಗಡೆ ಮಾಡಿದರು. ನಂತರ ಹಿರಿಯ ಸಹಕಾರಿಗಳಾದ ಶಿರಸಿ ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ, ಸಿದ್ದಾಪುರ ಟಿಎಪಿಸಿಎಂಎಸ್‌ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಯಲ್ಲಾಪುರ ಟಿಎಪಿಸಿಎಂಸಿಸಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅವರನ್ನು ಸನ್ಮಾಸಲಾಯಿತು.

ಶಿರಸಿ ಕೆನರಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಕಾರವಾರ ಸಹಕಾರಿ ಸಂಘಗಳ ಉಪನಿಬಂಧಕ ಮಂಜುನಾಥ.ಆರ್, ಬೆಂಗಳೂರಿನ ಮೆಗಾಲೈಟ್‌ ಇಂಡಸ್ಟ್ರೀಸ್ ಹಾಗೂ ವಿಸ್ತಾರ ಮೀಡಿಯ ಪ್ರೈವೇಟ್‌ ಲಿಮಿಟೆಡ್ ಚೇರ್ಮನ್ ಹಾಗೂ ಸಂಘದ ಉಪಾಧ್ಯಕ್ಷ ಎಚ್.ವಿ.ಧರ್ಮೇಶ್, ವಿಸ್ತಾರ ಮೀಡಿಯಾದ ಪ್ರಧಾನ ಸಂಪಾದಕ ಮತ್ತು ಸಿಇಒ ಹಾಗೂ ಸಂಘದ ನಿರ್ದೇಶಕ ಹರಿಪ್ರಕಾಶ್ ಕೋಣೆಮನೆ, ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ್ ಕೆ.ಎಸ್ ಉಪಸ್ಥಿತರಿದ್ದರು.

ಇದನ್ನೂ ಓದಿ | ಕೋಟಿ ಕಂಠ ಗಾಯನ | 29 ರಾಜ್ಯ, 25 ದೇಶಗಳಿಂದ 60 ಲಕ್ಷ ಜನರ ನೋಂದಣಿ: ಸಿನಿ ರಂಗದ ನೀರಸ ಸ್ಪಂದನೆ

Exit mobile version