ಬೆಂಗಳೂರು: ಮಾದಕ ದ್ರವ್ಯಗಳ ವಿರುದ್ಧದ ಹೋರಾಟದಲ್ಲಿ ಸುಧಾರಿತ ತಂತ್ರಜ್ಞಾನ ಬಳಸುವುದು ಮುಂದಿನ ದಾರಿಯಾಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah visit) ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮಾದಕ ದ್ರವ್ಯ ಕಳ್ಳಸಾಗಣೆ, ರಾಷ್ಟ್ರೀಯ ಭದ್ರತೆ ಕುರಿತ ದಕ್ಷಿಣದ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗಾಂಜಾ, ಅಫೀಮು ಬೆಳೆಯುವ ಪ್ರದೇಶಗಳ ಗುರುತಿಸುವಿಕೆ ಮತ್ತು ನಿಯಂತ್ರಣಕ್ಕಾಗಿ ಡ್ರೋನ್, ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಮ್ಯಾಪಿಂಗ್ ಬಳಸಬೇಕು. ಮಾದಕ ದ್ರವ್ಯಗಳ ಪ್ರಕರಣಗಳನ್ನು ಅದರ ಮೂಲದಿಂದ ಗಮ್ಯಸ್ಥಾನದವರೆಗೆ ಅದರ ಸಂಪೂರ್ಣ ಜಾಲವನ್ನು ದಮನ ಮಾಡಲು ಸಂಪೂರ್ಣ ತನಿಖೆ ಮಾಡಬೇಕು ಎಂದು ಹೇಳಿದ ಅಮಿತ್ ಶಾ ಅವರು, ಮಾದಕ ದ್ರವ್ಯ ಜಾಲ ದಮನಕ್ಕೆ ತ್ರಿಸೂತ್ರವನ್ನು ಮಂಡಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಗೃಹ ಸಚಿವಾಲಯವು ಸಾಂಸ್ಥಿಕ ರಚನೆ, ಸಬಲೀಕರಣ ಮತ್ತು ಎಲ್ಲಾ ಮಾದಕ ದ್ರವ್ಯ ಏಜೆನ್ಸಿಗಳ ಸಮನ್ವಯ ಬಲಪಡಿಸುವ 3 ಅಂಶಗಳ ಸೂತ್ರ ಅಳವಡಿಸಿಕೊಂಡಿದೆ, ಮಾದಕ ದ್ರವ್ಯಗಳನ್ನು ಹತ್ತಿಕ್ಕಲು ಸಮಗ್ರ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.
ʻʻಸಾಗರ ಮಾರ್ಗಗಳ ಮೂಲಕ ಮಾದಕವಸ್ತು ಕಳ್ಳಸಾಗಣೆಗೆ ಕಡಿವಾಣ ಹಾಕುವ ಮಾರ್ಗೋಪಾಯಗಳು, ಮಾದಕವಸ್ತು ಕಳ್ಳಸಾಗಣೆದಾರರ ಮೇಲೆ ಕಠಿಣ ದಂಡನಾತ್ಮಕ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ರಾಜ್ಯ ಮತ್ತು ಕೇಂದ್ರ ಮಾದಕವಸ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ತಡೆರಹಿತ ಸಮನ್ವಯ, ಸಹಕಾರ ಮತ್ತು ಮಾದಕ ವಸ್ತುಗಳ ಹರಡುವಿಕೆ ತಡೆಯುವ ಅಂಶಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಮಿತ್ ಶಾ ಹೇಳಿದರು.
ಮಾದಕ ದ್ರವ್ಯ ನಾಶದಲ್ಲಿ ಗುರಿಮೀರಿದ ಸಾಧನೆ
ʻʻಆಜಾದಿ ಕಾ ಅಮೃತ್ ಮಹೋತ್ಸವದ ಅಡಿ, 2022 ಜೂನ್ 01ರಿಂದ ಆರಂಭವಾದ 75 ದಿನಗಳ ಅಭಿಯಾನದಲ್ಲಿ 75,000 ಕೆಜಿ ಮಾದಕ ದ್ರವ್ಯಗಳನ್ನು ನಾಶಪಡಿಸುವ ಗುರಿ ನಿಗದಿಪಡಿಸಲಾಗಿತ್ತು, ಆದರೆ 8,409 ಕೋಟಿ ರೂಪಾಯಿ ಮೌಲ್ಯದ, ವಶಪಡಿಸಿಕೊಂಡ ಒಟ್ಟು 5,94,620 ಕಿಲೋಗ್ರಾಂ ಮಾದಕವಸ್ತುಗಳನ್ನು ಇದುವರೆಗೆ ನಾಶಪಡಿಸಿ, ನಿಗದಿತ ಗುರಿ ದಾಟಿ ಸಾಧನೆ ಮಾಡಲಾಗಿದೆ. ನಾಶಪಡಿಸಿದ ಒಟ್ಟು ಮಾದಕವಸ್ತುಗಳ ಪೈಕಿ 3,138 ಕೋಟಿ ರೂಪಾಯಿ ಮೌಲ್ಯದ 1,29,363 ಕಿಲೋಗ್ರಾಂ ಡ್ರಗ್ಸ್ ಅನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ) ಒಂದೇ ನಾಶಪಡಿಸಿದೆʼʼ ಎಂದು ವಿವರ ನೀಡಿದರು.
ʻʻಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯು ಕೇಂದ್ರ ಅಥವಾ ರಾಜ್ಯದ ಸಮಸ್ಯೆಯಲ್ಲ, ಆದರೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಅದನ್ನು ಎದುರಿಸುವ ಪ್ರಯತ್ನಗಳು ರಾಷ್ಟ್ರೀವಾಗಿರಬೇಕು ಮತ್ತು ಏಕೀಕೃತವಾಗಿರಬೇಕುʼʼ ಎಂದು ಹೇಳಿದರು. ಮಾದಕ ದ್ರವ್ಯಗಳ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸಲು, ಎಲ್ಲಾ ರಾಜ್ಯಗಳು ನಿಯಮಿತವಾಗಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ರಾಷ್ಟ್ರೀಯ ನಾರ್ಕೊಟಿಕ್ಸ್ ಸಮನ್ವಯ ಪೋರ್ಟಲ್(ಎನ್‌ಸಿಒಆರ್‌ಡಿ)ನ ಸಭೆ ಕರೆಯಬೇಕು ಎಂದು ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಹಾಗೂ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ : Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್ ಶಾ