ಬೆಂಗಳೂರು: ರಾಜ್ಯದಲ್ಲಿರುವ ಅನಧಿಕೃತ ಟ್ಯೂಷನ್ ಕ್ಲಾಸ್‌ಗಳ (Home Tuition Class) ನಿಷೇಧಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ. ಟ್ಯೂಷನ್ ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದವು. ಹೀಗಾಗಿ ಟ್ಯೂಷನ್ ಕ್ಲಾಸ್ ಅಥವಾ ಕೋಚಿಂಗ್ ಸೆಂಟರ್‌ಗಳನ್ನು ಆರಂಭ ಮಾಡಬೇಕಾದರೆ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.
ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್ ಶಿಕ್ಷಕನೊಬ್ಬ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ ಕೊಲೆ ಮಾಡಿದ್ದ. ಈ ಹೇಯ ಘಟನೆಯನ್ನು ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಕೃತ್ಯದಿಂದ ಎಚ್ಚೆತ್ತಿರುವ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಅನಧಿಕೃತ ಟ್ಯೂಷನ್ ಕೇಂದ್ರಗಳ ವಿರುದ್ಧ ಸಮರ ಸಾರಲು ಮುಂದಾಗಿದೆ.
ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳು ಒಕ್ಕೂಟವು ರಾಜ್ಯದಲ್ಲಿ ನಡೆಯುತ್ತಿರುವ ಅನಧಿಕೃತ ಟ್ಯೂಷನ್ ತರಬೇತಿ ಹಾಗೂ ವಸತಿ ಮನೆ ಪಾಠಗಳ ಹಾವಳಿಯನ್ನು ತಡೆಯುವಂತೆ ಕೋರಿ ದೂರನ್ನು ಸಲ್ಲಿಸಿದ್ದರು. ಎಲ್ಲವನ್ನು ಪರಿಶೀಲಿಸಿರುವ ಶಿಕ್ಷಣ ಇಲಾಖೆಯು, ಕರ್ನಾಟಕ ಶಿಕ್ಷಣ ಕಾಯಿದೆ 1989ರ ನಿಯಮ 35ರಡಿ ಟ್ಯುಟೋರಿಯಲ್ ಕೇಂದ್ರಗಳನ್ನು ನೋಂದಾಯಿಸುವುದು ಕಡ್ಡಾಯ ಮಾಡಿದೆ.
ಈ ಆದೇಶದ ಪ್ರಕಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಿಭಾಗಕ್ಕೆ ಜಿಲ್ಲಾ ಉಪನಿರ್ದೇಶಕರನ್ನು ನೋಂದಣಿ ಪ್ರಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಜತೆಗೆ ಕರ್ನಾಟಕ ಟ್ಯುಟೋರಿಯಲ್ ಇನ್ಸ್ಟಿಟ್ಯೂಷನ್ ನೋಂದಣಿ ಮತ್ತು ನಿಯಂತ್ರಣ ನಿಯಮಗಳು 2001 (Karnataka Tutorial Institutions registration and Regulation Rules 2001) ರಲ್ಲಿ ಸವಿವರವಾಗಿ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ 1ರಿಂದ 10ನೇ ತರಗತಿಗಳ ವರೆಗೆ ಟ್ಯುಟೋರಿಯಲ್ ಸಂಸ್ಥೆಗಳನ್ನು ಆರಂಭಿಸಲು ನೋಂದಣಿ ಕಡ್ಡಾಯ ಮಾಡಲಾಗಿದೆ.
ಟ್ಯೂಷನ್ ಹಾಗೂ ಕೋಚಿಂಗ್ ಸೆಂಟರ್ ನಡೆಸಲು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರ ನೋಂದಣಿ ಪ್ರಾಧಿಕಾರಿಗಳಲ್ಲಿ ನೋಂದಾಯಿಸಿಕೊಳ್ಳಬೇಕಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಟ್ಯೂಷನ್ ತರಬೇತಿ ಕೇಂದ್ರಗಳು ಅನಧಿಕೃತವಾಗಿ ನಡೆಯುತ್ತಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಶಿಕ್ಷಣ ಕಾಯ್ದೆಯನ್ವಯ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ | Somalia Attack | ಸೊಮಾಲಿಯಾ ಶಿಕ್ಷಣ ಇಲಾಖೆ ಕಚೇರಿ ಬಳಿ ಬಾಂಬ್ ದಾಳಿ; 100 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ