ಮಂಡ್ಯ: ಇಲ್ಲಿನ ಪಾಂಡವಪುರ ಪಟ್ಟಣದ ಹೊರ ವಲಯದ ಹಾರೋಹಳ್ಳಿಯಲ್ಲಿ ಶವಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ಹೆಜ್ಜೇನು ದಾಳಿ (Honey Bee Attack) ನಡೆಸಿದೆ. ಜೇನು ದಾಳಿಯಿಂದಾಗಿ 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಹಾರೋಹಳ್ಳಿ ನಿವಾಸಿ ಧನರಾಜ್ ಎಂಬುವವರು ಮರಣ ಹೊಂದಿದ್ದರು. ಧನರಾಜ್ ಅಂತ್ಯಸಂಸ್ಕಾರ ನೆರವೇರಿಸಲು ಹಾರೋಹಳ್ಳಿ ಸಮೀಪದ ಜಮೀನು ಬಳಿ ಸಂಬಂಧಿಕರು ತೆರಳುತ್ತಿದ್ದರು. ಈ ವೇಳೆ ಶವಸಂಸ್ಕಾರದಲ್ಲಿ ಧೂಪದ ಹೊಗೆ ಹಾಕಿದ್ದರಿಂದ ಜೇನುಗಳು ಎದ್ದಿವೆ, ಕೂಡಲೇ ಅಲ್ಲಿದ್ದವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ಈ ವೇಳೆ ಎಲ್ಲರೂ ದಿಕ್ಕಾಪಾಲಾಗಿ ಓಡಿದ್ದಾರೆ. ಅವಿತುಕೊಂಡು ರಕ್ಷಿಸಿಕೊಂಡಿದ್ದಾರೆ. ಆದರೆ, ಈ ವೇಳೆ ಕೆಲವರಿಗೆ ತೀವ್ರ ಗಾಯಗಳಾಗಿವೆ. ಜೇನುಹುಳುಗಳು ಅಲ್ಲಿಂದ ದೂರಾದ ಬಳಿಕ ಕುಟುಂಬಸ್ಥರು ಶವ ಸಂಸ್ಕಾರ ನೆರವೇರಿಸಿದ್ದಾರೆ.
ಗಾಯಾಳುಗಳಿಗೆ ಪಾಂಡವಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಂಡವಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ | Minister Protest | ನೀರು ಬಿಡೋವರೆಗೂ ಕದಲಲ್ಲ ಎಂದ ಶ್ರೀರಾಮುಲು; ಸಿಎಂ, ಪಿಎಂ ವಿರುದ್ಧದ ಧರಣಿಯೇ ಎಂದ ಕಾಂಗ್ರೆಸ್!