ತುಮಕೂರು: ಕುಣಿಗಲ್‌ನ ಸ್ಟಡ್ ಫಾರಂನಲ್ಲಿ ಇತ್ತೀಚೆಗೆ ಹೆಜ್ಜೇನು ದಾಳಿ (Honeybee bite) ನಡೆದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಎರಡು ಗಂಡು ಕುದುರೆಗಳು ಒದ್ದಾಡಿ ಒದ್ದಾಡಿ ಪ್ರಾಣಬಿಟ್ಟಿವೆ.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲೇ ಸ್ಟಡ್ ಫಾರ್ಮ್ ಇದೆ. ಇದು ಬೀಜದ ಕುದುರೆಗಳಿಗೆ ಜನಪ್ರಿಯವಾದ ಒಂದು ಫಾರ್ಮ್. ಇಲ್ಲಿ ಬೀಜದ ಕುದುರೆಗಳನ್ನು ವಿದೇಶದಿಂದ ತಂದು ಸಾಕುತ್ತಾರೆ. ದೇಶಾದ್ಯಂತ ಇವುಗಳಿಗೆ ಬೇಡಿಕೆ ಇದೆ.
ಎಂದಿನಂತೆ ಬುಧವಾರವೂ ಈ ಎರಡು ಕುದುರೆಗಳನ್ನು ಮೇಯಲು ಬಿಡಲಾಗಿತ್ತು. ಆದರೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಎರಡು ಕುದುರೆಗಳ ಮೇಲೆ ದಿಢೀರನೆ ಹೆಜ್ಜೇನು ದಾಳಿ ನಡೆದಿತ್ತು. ಜೇನು ಹುಳುಗಳ ದಾಳಿಗೆ ನೋವಿನಿಂದ ನರಳಿದ ಕುದುರೆಗಳು ಕಿರುಚಿಕೊಂಡು ನೆಲಕ್ಕೆ ಬಿದ್ದು ಒದ್ದಾಡಿದ್ದವು. ಇದನ್ನು ಗಮನಸಿ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿದ್ದ ಸಿಬ್ಬಂದಿ. ಘಟನಾ ಸ್ಥಳಕ್ಕೇ ವೈದ್ಯರು ಧಾವಿಸಿ ಚಿಕಿತ್ಸೆ ನೀಡಿದರು. ಕಣ್ಣು ಮತ್ತಿತರ ಭಾಗಗಳಿಗೆ ತೀವ್ರವಾಗಿ ಗಾಯಗೊಂಡಿದ್ದ ಕುದುರೆಗಳಿಗೆ ಸ್ಟಡ್ ಫಾರಂ ನಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ, ಹೆಜ್ಜೇನು ದಾಳಿಯ ತೀವ್ರತೆಯನ್ನು ಸಹಿಸಿಕೊಳ್ಳಲಾಗದೆ ಈ ಎರಡೂ ಕುದುರೆಗಳು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿವೆ.
ಇವು ಐರ್ಲ್ಯಾಂಡ್ ಮತ್ತು ಅಮೆರಿಕ ದೇಶದಿಂದ ತರಿಸಲಾಗಿದ್ದ ಬೀಜದ ಕುದುರೆಗಳಾಗಿವೆ. ಐರ್ಲ್ಯಾಂಡ್ ದೇಶದಿಂದ ತಂದಿರುವ ಹತ್ತು ವರ್ಷದ ಕುದುರೆಗೆ ಸನಸ್ ಪರ್ ಅಕ್ಚಮ್ ಎಂದು ಹೆಸರಿದೆ. ಅಮೆರಿಕದಿಂದ ತರಲಾದ 15 ವರ್ಷ ಪ್ರಾಯದ ಕುದುರೆಯ ಹೆಸರು ಏರ್ ಸಫೋರ್ಟ್.
ಮಾರುಕಟ್ಟೆಯಲ್ಲಿ ಈ ಕುದುರೆಗಳ ಬೆಲೆ ಒಂದೊಂದಕ್ಕೂ ಒಂದು ಕೋಟಿ ರೂಪಾಯಿಗಳಿಗಿಂತಲೂ ಜಾಸ್ತಿ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Leopard trapped | ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಮೂರು ಚಿರತೆಗಳ ಸೆರೆ: ಇನ್ನೂ ಎಷ್ಟಿದ್ದಾವೋ?!