ಬೆಂಗಳೂರು: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ (MLA Munirathna) ವಿರುದ್ಧ ಹನಿಟ್ರ್ಯಾಪ್ (Honey Trap) ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಮುನಿರತ್ನ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ಎಂಬವರೇ ಈ ಗಂಭೀರ ಆರೋಪ ಮಾಡಿದ್ದಾರೆ.
ಮುನಿರತ್ನ ಜೊತೆಯಲ್ಲಿದ್ದ ಕೆಲವು ಮಾಜಿ ಕಾರ್ಪೋರೇಟರ್‌ಗಳು ಆರ್.ಆರ್ ನಗರದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಮುನಿರತ್ನ ಕುರಿತು ಈ ಗಂಭೀರ ಆರೋಪ ಮಾಡಿದರು.
ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದೆವು. ಅದಕ್ಕೆ ಮುನಿರತ್ನ, ನಿಮ್ಮಗಳದ್ದು ಈಸ್ಟ್‌ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತೀರಾ ಎಂದು ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸುವುದು, ಹನಿಟ್ರ್ಯಾಪ್ ಮಾಡುವುದು, ಅದನ್ನು ಇಟ್ಟುಕೊಂಡು ಹೆದರಿಸುವುದು ಮಾಡುತ್ತಾರೆ ಎಂದು ವೇಲು ಆರೋಪಿಸಿದರು.
ಮುನರತ್ನ ಮಾಡಿದ ಮೊದಲ ಚಿತ್ರವೇ ಆಂಟಿ ಪ್ರೀತ್ಸೆ. ಹೀಗಾಗಿ ಅವರು ಸಚಿವರಾದ ಮೇಲೂ ವಿಕಾಸಸೌಧ, ವಿಧಾನಸೌಧ ಚೇಂಬರ್‌ಗಳಲ್ಲೆಲ್ಲ ಬರೀ ಆಂಟಿಯರೇ ಇರುತ್ತಿದ್ದರು. ಜೆಪಿ ಪಾರ್ಕ್‌ನಲ್ಲಿ ಸ್ಟುಡಿಯೋ ಇದೆ, ಡಾಲರ್ಸ್ ಕಾಲನಿಯಲ್ಲೊಂದು ಸ್ಟುಡಿಯೋ ಇದೆ. ಅವರು ಸಿನಿಮಾ ಪ್ರೊಡ್ಯೂಸರ್, ಹೀಗಾಗಿ ಹನಿಟ್ರ್ಯಾಪ್ ಮಾಡೋದು ಹೆದರಿಸೋದು ಸಾಮಾನ್ಯವಾಗಿದೆ ಎಂದು ಭಾಷಣದ ವೇಳೆ ಆರೋಪ ಮಾಡಿದರು.
ಇವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್, ಆರ್.ಆರ್ ನಗರದ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಹಾಜರಿದ್ದರು.
ಇದನ್ನೂ ಓದಿ: MLA Muniratna : ಬಿಜೆಪಿ ಶಾಸಕ ಮುನಿರತ್ನಗೆ ಸಂಕಷ್ಟ; ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ FIR