Site icon Vistara News

Honey Trap | 79ರ ಅಜ್ಜನಿಗೆ ಹನಿಟ್ರ್ಯಾಪ್‌; ಬೆತ್ತಲೆಗೊಳಿಸಿ ಬ್ಲ್ಯಾಕ್‌ಮೇಲ್‌ ಮಾಡಿದವಳು ಕಂಬಿ ಹಿಂದೆ

honey trap

ದಾವಣಗೆರೆ: ಅವರು 79ರ ವಯಸ್ಸಿನ ವೃದ್ಧ. ಈಕೆ ಮಧ್ಯ ವಯಸ್ಸಿನ ಮಹಿಳೆ. ತನಗೆ ಕಷ್ಟವಿದೆ ಎಂದು ಹೇಳಿಕೊಂಡು ಹಣ ಕೇಳಿದ್ದಾಳೆ. ಏನೋ ಪರಿಚಯ ಎಂಬ ಕಾರಣಕ್ಕೆ ಅವರೂ ಸಹ ಕನಿಕರದಿಂದ ಹಣ ನೀಡಿದ್ದಾರೆ. ಹಣ ವಾಪಸ್‌ಗೆ ಗಡುವೂ ನಿರ್ಧಾರವಾಗಿತ್ತು. ಈ ವೇಳೆ, ನೀಡಿದ್ದ ಗಡುವು ಮುಗಿದಿದೆ. ಈಕೆಯಿಂದ ಹಣ ಕೊಡುವ ಸುಳಿವಿಲ್ಲ. ಆ ವೃದ್ಧ ವಾಪಸ್‌ ಕೇಳಿದಾಗ ಈಕೆ ಖತರ್ನಾಕ್‌ ಪ್ಲ್ಯಾನ್‌ ಮಾಡಿದ್ದಾಳೆ. ಹನಿ ಟ್ರ್ಯಾಪ್‌ (Honey Trap) ಮಾಡುವ ಸಂಚು ರೂಪಿಸಿದ್ದಾಳೆ. ಆದರೆ, ಅದೃಷ್ಟ ಕೈಕೊಟ್ಟಿದೆ, ಈಗ ಕಂಬಿ ಹಿಂದೆ ಇದ್ದಾಳೆ.

ಇಲ್ಲಿನ ಶಿವಕುಮಾರ್ ಸ್ವಾಮಿ ಬಡಾವಣೆಯಲ್ಲಿ ವೃದ್ಧ ಶಿವಕುಮಾರ್ ಎಂಬುವವರಿಗೆ ಯಶೋಧಾ ಎಂಬಾಕೆ ಹನಿಟ್ರ್ಯಾಪ್‌ಗೆ ಯತ್ನಿಸಿದ್ದಳು. ಶಿವಕುಮಾರ್‌ ಅವರು ಯಶೋಧಾಳಿಗೆ 85 ಸಾವಿರ ರೂಪಾಯಿಯನ್ನು ಸಾಲವಾಗಿ ನೀಡಿದ್ದರು. ಕೊಟ್ಟ ಸಾಲ ಸರಿಯಾದ ಸಮಯಕ್ಕೆ ಹಿಂದಿರುಗಿಸದೆ ಇದ್ದಾಗ, ಹಣ ವಾಪಸ್‌ ಕೊಡುವಂತೆ ಕೇಳಿದ್ದಾರೆ. ಈ ವೇಳೆ ವೃದ್ಧ ಶಿವಕುಮಾರ್‌ಗೆ ಹಣ ವಾಪಸ್ ಕೊಡುವುದಾಗಿ ಯಶೋಧಾ ಮನೆಗೆ ಕರೆಸಿಕೊಂಡಿದ್ದಾಳೆ.

ಮನೆಗೆ ಬಂದ ಶಿವಕುಮಾರ್‌ಗೆ ಜ್ಯೂಸ್‌ನಲ್ಲಿ ಅಮಲು ಬರುವ ಔಷಧ ಹಾಕಿದ್ದಾಳೆ. ಬಳಿಕ ಅವರನ್ನು ನಗ್ನ ಮಾಡಿ, ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಳು. ಇದಾದ ನಂತರ ನಗ್ನ ಫೋಟೊ ಇಟ್ಟುಕೊಂಡು ವೃದ್ಧರಿಗೆ 15 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕುವುದಾಗಿ ಬೆದರಿಸಿದ್ದಳು.

ಇದರಿಂದ ಕಕ್ಕಾಬಿಕ್ಕಿಯಾದ ವೃದ್ಧ ಶಿವಕುಮಾರ್‌, ಭಯಗೊಂಡು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಎಚ್ಚರಗೊಂಡ ಪೊಲೀಸರು ವೃದ್ಧ ಶಿವಕುಮಾರ್‌ರ ದೂರನ್ನು ದಾಖಲಿಸಿಕೊಂಡು, ಯಶೋಧಾಳನ್ನು ಕಂಬಿ ಹಿಂದೆ ತಳ್ಳಿದ್ದಾರೆ. ಹನಿಟ್ರ್ಯಾಪ್ ಮಾಡಲು ಹೋದವಳು ಈಗ ಖಾಕಿ ಬಲೆಗೆ ಬಿದ್ದಿದ್ದಾಳೆ.

ಇದನ್ನೂ ಓದಿ | BJP Janasankalpa Yatre | ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಬೇಕಿದೆ: ಶ್ರೀರಾಮುಲು

Exit mobile version