ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿಯಲ್ಲಿ ಮೇಗರವಳ್ಳಿ ಮೂಲದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹನಿಟ್ರ್ಯಾಪ್‌ಗೆ (Honey trapped) ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಹನಿಟ್ರ್ಯಾಪ್ ಗ್ಯಾಂಗ್‌ನವರು ಸುಮಾರು 15 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇವರಿಗೆ ಬೆದರಿದ ಅರಣ್ಯಾಧಿಕಾರಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದರು.
ಆದರೂ ಬೆನ್ನುಬಿಡದೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿಗೆ ಗ್ಯಾಂಗ್ ಮುಂದಾಗಿತ್ತು. ಇವರಿಂದ ಬೇಸತ್ತು ಹೋದ ಅರಣ್ಯಾಧಿಕಾರಿ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏಳು ಜನರ ವಿರುದ್ಧ ದೂರು ದಾಖಲಾಗಿದೆ. ಧನುಷ್, ಅನ್ಸರ್, ಕಾರ್ತಿಕ್, ಪುಂಡ, ಸಿದ್ದಿಕಿ ಹಾಗೂ ಮೋಹಿತೆ ಗೌಡ, ಅನನ್ಯ ಯಾನೆ ಸೌರಭ ಪ್ರಮುಖ ಆರೋಪಿತರಾಗಿದ್ದಾರೆ.
ಸದ್ಯ, ಅನನ್ಯ, ಮೋಹಿತೆ ಗೌಡ, ಸಿದ್ದಿಕ್ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ಉಳಿದ ನಾಲ್ವರಿಗಾಗಿ ಹುಡುಕಾಟ ನಡೆಸಿದ್ದಾರೆ. ಹನಿ ಗ್ಯಾಂಗ್ ಈ ಮೊದಲು ಬೇರೆಯವರಿಗೂ ಟ್ರ್ಯಾಪ್ ಮಾಡಿತ್ತಾ? ಸರ್ಕಾರಿ ಅಧಿಕಾರಿಗಳೇ ಇವರ ಟಾರ್ಗೆಟಾ? ಎಷ್ಟು ಮಂದಿ ಇವರಿಂದ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಬೆಜ್ಜವಳ್ಳಿ ಮೂಲದ ಯುವತಿ, ಗಂಟೆಹಕ್ಲು ಮೂಲದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇವರ ಹಿಂದೆ ದೊಡ್ಡದಾದ ಗ್ಯಾಂಗ್‌ವೊಂದು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈಗಾಗಲೇ ತೀರ್ಥಹಳ್ಳಿಯ ಪ್ರತಿಷ್ಠಿತ ಜ್ಯುವೆಲರ್ಸ್ ಮಾಲೀಕ ಹಾಗೂ ಅರಣ್ಯ ಇಲಾಖೆ ಅಧಿಕಾರಿ ಸೇರಿ ಉಡುಪಿ ಮೂಲದ ಮೂರ್ನಾಲ್ಕು ಮಂದಿ ಟ್ರ್ಯಾಪ್ ಆಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ: Porn Websites: ನಿಷೇಧ ಬದಲಿಗೆ ಪೋರ್ನ್ ವೆಬ್‌ಸೈಟ್ಸ್ ನಾರ್ಮಲ್ ಮಾಡಿ! ಪೋರ್ನ್‌ಹಬ್ ಮಾಲೀಕನ ಸಲಹೆ
ಹುಡುಗಿ ಛೂ ಬಿಟ್ಟು ಹಣ ಸಂಪಾದನೆ
ಕೆಲವು ಸುಲಿಗೆಕೋರರು ಹುಡುಗಿಯರನ್ನು ಛೂ ಬಿಟ್ಟು ಹಣ ಸಂಪಾದನೆ ಮಾಡುವ ದಾರಿಯನ್ನು ಹುಡುಕಿಕೊಂಡಿದ್ದಾರೆ. ಹಣದ ಖಜಾನೆ ಇರುವವರನ್ನೆ ಗುರಿಯಾಗಿಸಿಕೊಳ್ಳುವ ಈ ಗ್ಯಾಂಗ್ ಚೆಲುವೆಯ ಮುಖಾಂತರ ಖೆಡ್ಡಕ್ಕೆ ಬೀಳಿಸಿಕೊಳ್ಳುತ್ತಾರೆ. ಹನಿ ಟ್ರ್ಯಾಪ್ ಮಾಡುವುದನ್ನು ವೃತ್ತಿ ಮಾಡಿಕೊಂಡಿರುವ ಈ ಗ್ಯಾಂಗ್ ಮೊದಲು ಅಧಿಕಾರಿಗಳನ್ನು ಹಾಗೂ ಪ್ರಸಿದ್ಧ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಬಳಿಕ ನಿಧಾನವಾಗಿ ನಂಬರ್ ತೆಗೆದುಕೊಂಡು ಅವರ ಜತೆ ಆತ್ಮೀಯತೆ ಬೆಳೆಸಿಕೊಂಡು ಖೆಡ್ಡಕ್ಕೆ ಬೀಳಿಸಿಕೊಳ್ಳುತ್ತಾರೆ. ನಂತರ ಬೆತ್ತಲೆ ವಿಡಿಯೋ, ಕಾಲ್ ರೆಕಾರ್ಡ್ ಮಾಡಿಕೊಂಡು ಲಕ್ಷಾಂತರ ರೂ. ವಸೂಲಿಗೆ ಮುಂದಾಗುತ್ತಾರೆ. ಮಾನ ಮರ್ಯಾದೆಗೆ ಅಂಜುವವರು ಹಣ ಕೊಟ್ಟು ಸುಮ್ಮನಾಗುತ್ತಾರೆ. ಇದೇ ದೌರ್ಬಲ್ಯವನ್ನು ಬಳಸಿಕೊಂಡು ಸುಲಿಗೆ ಮಾಡುತ್ತಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ