Site icon Vistara News

Honeybee attack | ಬೀಚ್‌ನಲ್ಲಿ ಹೆಜ್ಜೇನು ದಾಳಿ ನಡೆಸಿತೆಂದು ಸಮುದ್ರಕ್ಕೆ ಹಾರಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

honey bee attack

ಉಡುಪಿ: ಪಡುಬಿದ್ರಿ ಬೀಚ್ ಬಳಿ ಹೆಜ್ಜೇನು ದಾಳಿ (Honeybee attack) ನಡೆಸಿದ ಪರಿಣಾಮವಾಗಿ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.

ಪಡುಬಿದ್ರಿ ಮುಖ್ಯ ಬೀಚ್ ಬಳಿ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳೀಯ ನಿವಾಸಿ ವಾಸುದೇವ ಡಿ. ಸಾಲ್ಯಾನ್ (65) ಮೃತಪಟ್ಟವರು, ಇನ್ನೋರ್ವ ಚಂದ್ರಶೇಖರ್ ಗಂಭೀರ ಗಾಯಗೊಂಡಿದ್ದಾರೆ.

ಬೀಚ್ ಬಳಿ ಅಡ್ಡಾಡುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ನಡೆಸಿದ್ದು, ದಾಳಿ ಮಾಡಿದ ತಕ್ಷಣ ವಾಸುದೇವ್ ರಕ್ಷಣೆಗಾಗಿ ಸಮುದ್ರದ ನೀರಿಗೆ ಹಾರಿದವರು ಮತ್ತೆ ಮೇಲೆ ಬರಲಾಗದೆ ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಅದೇ ವೇಳೆ ಪಕ್ಕದಲ್ಲಿದ್ದ ಚಂದ್ರಶೇಖರ್ ರವರಿಗೂ ದಾಳಿ ನಡೆದಿದ್ದು ಅವರನ್ನು ತಕ್ಷಣ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳೀಯ ಹಲವರ ಮೇಲೆ ದಾಳಿ ನಡೆಯಿತಾದರೂ ಅವರು ಓಡಿ ತಪ್ಪಿಸಿಕೊಂಡಿದ್ದಾರೆ.

ಪಡುಬಿದ್ರಿ ಆಸ್ಪತ್ರೆಯ ಹೊರಾವರಣದಲ್ಲಿ ಸೇರಿದ ಬಂಧುಗಳು ಮತ್ತು ಊರಿನವರು

ಘಟನೆ ನಡೆದ ಪಕ್ಕದಲ್ಲೇ ಆಂಗ್ಲ ಮಾಧ್ಯಮ ಶಾಲೆಯೊಂದಿದ್ದು, ಶಾಲೆ ಬಿಟ್ಟು ಶಾಲಾ ವಾಹನ ಮಕ್ಕಳನ್ನು ಕರೆದುಕೊಂಡು ಹೋಗಿದ್ದರಾದರೂ ನಡೆದುಕೊಂಡು ಹೋಗುವ ಮಕ್ಕಳು ಇನ್ನೇನು ಆ ಪ್ರದೇಶಕ್ಕೆ ಬರುತ್ತಾರೆ ಎನ್ನುವಾಗ ಸಾರ್ವಜನಿಕರು ಬೊಬ್ಬೆ ಹಾಕಿ ಮಕ್ಕಳನ್ನು ತಡೆದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ವಾರಾಂತ್ಯವಾಗಿದ್ದರೆ ಬೀಚ್ ಪ್ರದೇಶದಲ್ಲಿ ಭಾರಿ ಜನಸಂದಣಿ ಇರುತ್ತಿದ್ದು ಮತ್ತಷ್ಟು ದುರಂತ ನಡೆಯುವ ಸಾಧ್ಯವಿತ್ತು. ಸದ್ಯ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಯವರು ಆ ಹೆಜ್ಜೇನು ಹಿಂಡನ್ನು ತೆರವು ಮಾಡುವಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Honey Bee attack | ಮಾಗಡಿ ಸರ್ಕಾರಿ ಸಂಕೀರ್ಣದಲ್ಲಿ 50ಕ್ಕೂ ಹೆಚ್ಚು ಮಂದಿ ಮೇಲೆ ಹೆಜ್ಜೇನು ದಾಳಿ; ನಾಲ್ವರು ಆಸ್ಪತ್ರೆಗೆ ದಾಖಲು

Exit mobile version