Site icon Vistara News

Honorary doctorate : ಮಾಜಿ ಸಿಎಂ ಬಿಎಸ್‌ವೈ ಅವರು ಇನ್ನು ಡಾ. ಬಿ.ಎಸ್‌ ಯಡಿಯೂರಪ್ಪ

BS Yediyurappa

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಹಿರಿಯ ನಾಯಕ ಬಿಎಸ್‌ ಯಡಿಯೂರಪ್ಪ (BS Yediyurappa) ಅವರು ಇನ್ನು ಮುಂದೆ ಡಾಕ್ಟರ್‌ ಬಿ.ಎಸ್‌. ಯಡಿಯೂರಪ್ಪ (Dr. BS Yediyurappa) ಆಗಲಿದ್ದಾರೆ. ಶಿವಮೊಗ್ಗದ ಇರುವಕ್ಕಿ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್‌ (Honorary doctorate) ಪ್ರದಾನ ಮಾಡಲಿದೆ.

ಇರುವಕ್ಕಿ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಶುಕ್ರವಾರ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ಪಾಲ್ಗೊಳ್ಳಲಿದ್ದು, ಈ ಸಮಯದಲ್ಲಿ ಬಿಎಸ್‌ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್‌ ಅನ್ನು ಪ್ರದಾನ ಮಾಡಲಿದ್ದಾರೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಗದೀಶ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿ.ಎಸ್‌. ಯಡಿಯೂರಪ್ಪ ಅವರು ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದವರು. ನಗರಪಾಲಿಕೆ ಮಟ್ಟದಿಂದ ಹಂತ ಹಂತವಾಗಿ ಏರುತ್ತಾ ಸಿಎಂ ಪಟ್ಟವನ್ನು ಅಲಂಕರಿಸಿದವರು. ಸುದೀರ್ಘ ರಾಜಕೀಯ ಅನುಭವದೊಂದಿಗೆ ಮುತ್ಸದ್ಧಿಯಾಗಿ ಬೆಳೆದು ನಿಂತಿರುವ ಯಡಿಯೂರಪ್ಪ ಅವರು ಇತ್ತೀಚೆಗೆ ಚುನಾವಣಾ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದರು. ಅದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿದಿದ್ದಾರೆ. ಇದೀಗ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿವಿ ಆಯ್ಕೆ ಸಮಿತಿಯು ಗೌರವ ಡಾಕ್ಟರೇಟ್‌ಗೆ ಯಡಿಯೂರಪ್ಪ ಹೆಸರನ್ನು ಆಯ್ಕೆ ಮಾಡಿ ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಕಳೆದ ಜುಲೈ 17ರಂದು ರಾಜ್ಯಪಾಲರಿಗೆ ಪತ್ರ ಬರೆದಿತ್ತು. ರಾಜ್ಯಪಾಲರು ಮರುದಿನವೇ ಪತ್ರ ಬರೆದು ಸಮ್ಮತಿ ಸೂಚಿಸಿದ್ದಾರೆ.

ಗೌರವ ಡಾಕ್ಟರೇಟ್‌ ಇದು ಮೊದಲ ಸಲವೇನಲ್ಲ

ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗೌರವ ಡಾಕ್ಟರೇಟ್‌ ಸ್ವೀಕರಿಸುತ್ತಿರುವುದು ಇದು ಎರಡನೇಯ ಬಾರಿ ಈ ಹಿಂದೆ 2008ರಲ್ಲಿ ಅಮೆರಿಕದ ಮಿಷಿಗನ್‌ನ ಸ್ಯಾಗಿನೌ ವ್ಯಾಲಿ ಸ್ಟೇಟ್‌ ಯುನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿತ್ತು.

ಬಿಎಸ್‌ವೈ ಅವರೇ ಪಿಎಚ್‌ಡಿ ಅಧ್ಯಯನ ವಿಷಯ!

ಹೌದು, ಈಗ ಗೌರವ ಡಾಕ್ಟರೇಟ್‌ ಪಡೆದಿರುವ ಬಿ.ಎಸ್‌. ಯಡಿಯೂರಪ್ಪ ಅವರ ಮೇಲೆ ಪಿಎಚ್‌ಡಿ ಅಧ್ಯಯನ ನಡೆದಿದೆ. ಯಡಿಯೂರಪ್ಪನವರ ರಾಜಕೀಯ ಹೋರಾಟ, ಅವರು ಸವೆಸಿರುವ ಕಲ್ಲುಮುಳ್ಳಿನ ಹಾದಿಯ ಕುರಿತು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ರಾಜಕೀಯ ಶಾಸ್ತ್ರದಲ್ಲಿ ಪ್ರೊಫೆಸರ್ ಆಗಿರುವ ಮೂಲತಃ ಶಿಕಾರಿಪುರದ ಪ್ರಸನ್ನ ಕುಮಾರ್ ಅವರು ಪಿಎಚ್‌ಡಿ ಮಾಡಿದ್ದಾರೆ.

ಪ್ರಸನ್ನ ಕುಮಾರ್‌ ಅವರು ‘B S Yeddyurappa”s Political Leadership: A Case Study’ ವಿಷಯಾಧಾರಿತ ಡಾಕ್ಟರೇಟ್ ಥೀಸಿಸ್ ಅನ್ನು ಮೈಸೂರು ವಿವಿಯಲ್ಲಿ ಮಂಡಿಸಿದ್ದಾರೆ. ರಾಜ್ಯದಲ್ಲಿ ಎಚ್ ಡಿ ದೇವೇಗೌಡ, ಜೆಎಚ್ ಪಟೇಲ್, ಎಸ್ ಬಂಗಾರಪ್ಪ ಮತ್ತು ಎಸ್ಎಂ ಕೃಷ್ಣ ಮೊದಲಾದ ರಾಜಕಾರಣಿಗಳ ಬದುಕಿನ ಬಗ್ಗೆ ಪಿಎಚ್‌.ಡಿ ಅಧ್ಯಯನ ನಡೆದಿದೆ.

Exit mobile version