ಬೆಂಗಳೂರು: ರಾಜಧಾನಿಯ ಅಸ್ಮಿತೆಗಳಲ್ಲಿ ಒಂದು ಎಂಬಂತೆ ಬಿಂಬಿಸಲ್ಪಟ್ಟಿದ್ದ, ಅತ್ಯಂತ ಹಳೆಯ ಹೋಟೆಲ್‌ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನಕ್ಕೆ (New Krishna Bhavan) ನೀವೇನಾದರೂ ಹೋಗಬೇಕು ಎನ್ನುವ ಪ್ಲ್ಯಾನ್ ಮಾಡಿದ್ದರೆ, ಬೇಗನೆ ಹೋಗಿ. ಯಾಕೆಂದರೆ, ಡಿಸೆಂಬರ್ 6ರಿಂದ (Closed from December 6) ಈ ಹೋಟೆಲ್ ಕಾರ್ಯಾಚರಿಸುವುದಿಲ್ಲ!
ಹೌದು ಮಲ್ಲೇಶ್ವರದ ಸಂಪಿಗೆ ಥಿಯೇಟರ್ (Malleshwara Sampige Theatre) ಎದುರು ಭಾಗದಲ್ಲಿರುವ ಈ ಹೋಟೆಲ್ ಡಿಸೆಂಬರ್ 6ರಿಂದ ಬಂದ್ ಆಗಲಿದೆ. ಹೋಟೆಲ್‌ನ ಎದುರು ಭಾಗದಲ್ಲಿ ಹಾಕಲಾಗಿರುವ ಬ್ಯಾನರ್ ನೋಡಿ ಗ್ರಾಹಕರಿಗೆ ಶಾಕ್ ಆಗಿದೆ. ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಇಲ್ಲಿ ಸಸ್ಯಾಹಾರಿ ಊಟ ಭಾರಿ ಫೇಮಸ್ ಆಗಿತ್ತು. ಅದರ ಜತೆಗೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೀಗ ಬಂದ್ ಆಗಲಿದೆ ಎಂದು ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.
70 ವರ್ಷಗಳ ಇತಿಹಾಸ ಇರುವ ಹೋಟೆಲ್
1954ರಲ್ಲಿ ಆಗಿನ ಕಾಲದ ಅತ್ಯಂತ ವೈಭವೋಪೇತ ಹೋಟೆಲ್ ಎಂಬ ಗೌರವದೊಂದಿಗೆ ಈ ಹೋಟೆಲ್ ಪ್ರಾರಂಭವಾಗಿತ್ತು. ಇಲ್ಲಿ ಉಡುಪಿ ಭಕ್ಷ್ಯಗಳ ಜೊತೆಗೆ ಕಾಫಿ ಕೂಡಾ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಅದಕ್ಕಿಂತೂ ಮುಖ್ಯವಾಗಿ ಊಟ ಎಲ್ಲರ ಗಮನ ಸೆಳೆಯುತ್ತಿತ್ತು. 70 ವರ್ಷಗಳ ಹಿಂದೆಯೇ ಇಲ್ಲಿ ದಿನಕ್ಕೆ 2500ಕ್ಕೂ ಹೆಚ್ಚು ಊಟ ನೀಡಲಾಗುತ್ತಿತ್ತು ಎಂದರೆ ಇದು ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದಿತ್ತು ಎನ್ನುವುದು ಅರ್ಥವಾಗುತ್ತದೆ. ಇಲ್ಲಿ ಆ ಕಾಲದಲ್ಲೇ ಉತ್ತರ ಭಾರತದ ವಿಶೇಷ ಅಡುಗೆಗಳನ್ನು ಮಾಡಲಾಗುತ್ತಿತ್ತು.
ಹಿಂದಿನ ಕಾಲದಲ್ಲೇ ಹಸಿ ಮತ್ತು ಒಣ ಕಸ ವಿಭಜನೆ, ಹೋಟೆಲ್‌ನಲ್ಲಿ ಉಳಿದ ಆಹಾರ ವಸ್ತುಗಳನ್ನು ಹಂದಿ ಸಾಕುವವರಿಗೆ ಕೊಡುವ ಪದ್ಧತಿ ಮೂಲಕ ಹೋಟೆಲ್ ಗಮನ ಸೆಳೆದಿತ್ತು.
ಈಗ ಯಾರಿಗೆ ಮಾರಾಟ? ಮುಂದೇನು?
ಹೋಟೆಲ್‌ನ ಮಾಲೀಕರು ಈ ಜಾಗವನ್ನು ಭೀಮಾ ಜ್ಯುವೆಲರ್ಸ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಭೀಮಾ ಜ್ಯುವೆಲರ್ಸ್‌ನವರು ಹಳೆಯ ಕಟ್ಟಡವನ್ನು ಒಡೆದು ಹೊಸ ಕಟ್ಟಡ ನಿರ್ಮಾಣ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ಕೃಷ್ಣ ಭವನದ ಮಾಲೀಕರು ಶೀಘ್ರವೇ ಹೊಸ ಹೋಟೆಲ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದು ಮಾರಾಟವಾದ ಬಳಿಕ ಇದೇ ಜಾಗದಲ್ಲಿ ಕಟ್ಟಡಲಾಗುವ ಹೊಸ ಕಟ್ಟಡದಲ್ಲಿ ಆರಂಭವಾಗುತ್ತದಾ ಅಥವಾ ಬೇರೆ ಕಡೆ ನಿರ್ಮಾಣವಾಗುತ್ತದೆಯೇ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
100 ಮಂದಿಗೆ ಉದ್ಯೋಗ ನಷ್ಟ
ಈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಹೆಚ್ಚಿನವರು ಕಳೆದ ಕನಿಷ್ಠ 25 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದವರು. ಅವರು ಎಂದೂ ಬೇರೆ ಕಡೆಗೆ ಹೋಗಿಲ್ಲ. ಇಲ್ಲಿ ಸುಮಾರು 100ರಷ್ಟು ಸಿಬ್ಬಂದಿಗಳಿದ್ದಾರೆ. ಇಲ್ಲಿಗೆ ಹೊಂದಿಕೊಂಡಿದ್ದ ಅವರಿಗೆ ಬೇರೆ ಕಡೆ ಉದ್ಯೋಗ ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ.
ಅಂತೂ ಬೆಂಗಳೂರಿನ ಐಕಾನಿಕ್ ಹೋಟೆಲ್ ಒಂದು ಬಾಗಿಲು ಮುಚ್ಚುತ್ತಿದೆ. ಅದು ಬೇರೆ ರೂಪದಲ್ಲಿ ತೆರೆದುಕೊಂಡರೂ ಅದರ ಐತಿಹಾಸಿಕವಾದ ಚರಿಷ್ಮಾ ಒಂದು ಹಂತದಲ್ಲಿ ಕಳೆದುಹೋಗುತ್ತದೆ. ಹೀಗಾಗಿ ಅದು ನೆನಪಿನ ಮರೆಗೆ ಸರಿಯುತ್ತದೆ.
ಕಳೆದ ವರ್ಷ ಹೋಟೆಲ್ ಸಾಮ್ರಾಟ್ ಬಂದ್ ಆಗಿತ್ತು
ಬೆಂಗಳೂರಿನ ಇನ್ನೊಂದು ಹಳೆಯ ಜನಪ್ರಿಯ ಹೋಟೆಲ್ ಆಗಿದ್ದ ಸಾಮ್ರಾಟ್ ರೆಸ್ಟೋರೆಂಟ್ 2022ರ ಸೆಪ್ಟೆಂಬರ್ 25ಕ್ಕೆ ತನ್ನ ವ್ಯವಹಾರ ಬಂದ್ ಮಾಡಿತ್ತು. ಪ್ರತಿಷ್ಠಿತ ಚಾಲುಕ್ಯ ಹೋಟೆಲ್ ನ ಒಳಗೆ ಇದ್ದ ಈ ಸಾಮ್ರಾಟ್ ರೆಸ್ಟೋರೆಂಟ್ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪ್ರವಾಸಿಗರ ಮೆಚ್ಚಿನ ತಾಣವಾಗಿತ್ತು. ದಿನವೊಂದಕ್ಕೆ 3000ಕ್ಕೂ ಅಧಿಕ ಮಂದಿ, ವಾರಾಂತ್ಯದಲ್ಲಂತೂ 5000 ಮಂದಿ ಭೇಟಿ ನೀಡುತ್ತಿದ್ದ ಹೋಟೆಲ್‌ನಲ್ಲಿ ಗ್ರಾಹಕರಿಗೆ ದೊಡ್ಡ ಮಟ್ಟದ ಗೌರವ ಸಿಗುತ್ತಿತ್ತು. ಅದು 1977ರಲ್ಲಿ ಕಾರ್ಯಾರಂಭ ಮಾಡಿ 45 ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು.