Site icon Vistara News

10 ವರ್ಷ ಅನ್ನ ಹಾಕಿದ ಬ್ಯಾಂಕ್‌ಗೆ ಕನ್ನ; ಹಾಸನದಲ್ಲಿ ಕೋಟಿ ರೂ. ಮೌಲ್ಯದ ಚಿನ್ನ ಕದ್ದು ಹೌಸ್‌ ಕೀಪರ್‌ ಎಸ್ಕೇಪ್‌

Gold Theft In Hassan Bank By Its Housekeeper

House Keeper Steals Crores of Worth Gold In Bank in Hassan

ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ಗಿರವಿ ಇಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನು ಬ್ಯಾಂಕ್‌ನ ಹೌಸ್‌ ಕೀಪರ್‌ ಕದ್ದು ಪರಾರಿಯಾಗಿದ್ದಾನೆ. ಅಸಲಿ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಇಟ್ಟು, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಲಪಟಾಯಿಸಿರುವ ಖತರ್ನಾಕ್‌ ಕಳ್ಳನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಬ್ಯಾಂಕ್‌ನಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು ಲವ ಬಿ.ಎನ್‌.ವಿರುದ್ಧ ಬ್ಯಾಂಕ್‌ ದೂರು ದಾಖಲಿಸಿದೆ. ಈತನ ವಿರುದ್ಧ ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಕಳ್ಳತನ ಮಾಡಲಾದ ಆರೋಪ ಇದೆ. ಮೇ 5ರಂದು ಬ್ಯಾಂಕಿನ ಗಿರವಿ ವಿಭಾಗದ ಚಿನ್ನ ಪರಿಶೀಲನೆ ವೇಳೆ ಸಿಬ್ಬಂದಿಯ ವಂಚನೆ ಬಯಲಾಗಿದೆ.

ಆರೋಪಿ ಲವ ವಿರುದ್ಧ ದಾಖಲಾದ ಎಫ್‌ಐಆರ್‌ ಪ್ರತಿ

ಬ್ಯಾಂಕ್‌ ಲಾಕರ್‌ನಲ್ಲಿ ಚಿನ್ನ ಇರುವ 30 ಪ್ಯಾಕೆಟ್‌ಗಳಲ್ಲಿ 18 ಪ್ಯಾಕೆಟ್‌ ಇದ್ದ ಚಿನ್ನವನ್ನು ಎಗರಿಸಿ, ಅವುಗಳಲ್ಲಿ ನಕಲಿ ಚಿನ್ನವನ್ನು ಇಟ್ಟ ಕಾರಣ ವಂಚನೆಯು ತಡವಾಗಿ ಬೆಳಕಿಗೆ ಬಂದಿದೆ. 2013ರಿಂದಲೂ ಬ್ಯಾಂಕ್‌ ಹೌಸ್‌ ಕೀಪರ್‌ ಆಗಿ ಲವ ಕೆಲಸ ಮಾಡುತ್ತಿದ್ದ. ಬ್ಯಾಂಕ್‌ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ ಈತ ಚಿನ್ನದ ಸಾಲದ ದಸ್ತಾವೇಜು ಉಸ್ತುವಾರಿಯನ್ನೂ ವಹಿಸಿದ್ದ. ಆದರೀಗ ಚಿನ್ನದ ದಸ್ತಾವೇಜು ಮಾಡುವ ಬದಲು ಆತನೇ ಚಿನ್ನ ಕದ್ದು ಪರಾರಿಯಾಗಿದ್ದಾನೆ.

ಕೊಣನೂರು ಪೊಲೀಸ್‌ ಠಾಣೆಯಲ್ಲಿ ಎಸ್‌ಬಿಐ ಅನುರಾಧಾ ಅವರು ದೂರು ದಾಖಲಿಸಿದ್ದಾರೆ. ಎರಡು ಪ್ಯಾಕೆಟ್‌ ಚಿನ್ನವನ್ನು ಸಂಪೂರ್ಣವಾಗಿ ಎಗರಿಸಿ, 10 ಪ್ಯಾಕೆಟ್‌ಗಳಲ್ಲಿ ನಕಲಿ ಚಿನ್ನವನ್ನು ತುಂಬಿದ್ದಾನೆ. ಎರಡು ಪ್ಯಾಕೆಟ್‌ ಚಿನ್ನದ ಕೊರತೆ ಕಂಡಿದ್ದನ್ನು ನೋಡಿ ಪರಿಶೀಲನೆ ನಡೆಸಿದಾಗ ಕಳ್ಳತನ ಬಯಲಾಗಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಬ್ಯಾಂಕ್‌ನಲ್ಲಿ ಚಿನ್ನವನ್ನು ಗಿರವಿ ಇಡಲು ಭಯಪಡುವಂತಾಗಿದೆ ಎಂದು ತಿಳಿದುಬಂದಿದೆ.

Exit mobile version