Site icon Vistara News

Housefly | ಉಣ್ಣಂಗಿಲ್ಲ, ತಿನ್ನಂಗಿಲ್ಲ ನೊಣ ಬಂದು ಕೂರ್ತೈತಲ್ಲ; ನೊಣಗಳ ಕಾಟಕ್ಕೆ ಬೇಸತ್ತ ಜನ!

housefly

ಮೈಸೂರು: ಇಲ್ಲಿನ ಜಯಪುರ ಹೋಬಳಿಯಲ್ಲಿ ಈಗ ನೊಣಗಳದ್ದೇ ಕಾಟ. ಹತ್ತಲ್ಲ, ಇಪ್ಪತ್ತಲ್ಲ, ನೂರಾರು, ಸಾವಿರಾರು ನೊಣಗಳು (Housefly) ದಾಳಿ ಇಡುತ್ತಿವೆ. ಮಲಗಲು ಹೋದರೆ ಕಿವಿಯಲ್ಲಿ ಗುಯ್‌ ಗುಡುತ್ತವೆ, ಇನ್ನು ಹಸಿವು ಎಂದು ತಿನ್ನಲು ಹೋದರೆ ತಟ್ಟೆ ಮೇಲೆ ನೊಣದ ರಾಶಿ ರಾಶಿ. ಇಲ್ಲಿ ನೊಣಗಳ ಮಧ್ಯೆ ತಿಂಡಿ, ಊಟವನ್ನು ಹುಡುಕುವ ಪರಿಸ್ಥಿತಿ!

ಅಂದಹಾಗೆ ಮೆಲ್ಲಹಳ್ಳಿ,‌‌ ಬೀರಿಹುಂಡಿ ಸೇರಿ ಹಲವು ಗ್ರಾಮದಲ್ಲಿ ನೊಣಗಳ (Housefly) ಕಾಟ ವಿಪರೀತವಾಗಿದ್ದು, ಜನರ ನಿದ್ದೆಗೆಡಿಸಿದೆ. ನೊಣಗಳನ್ನು ಓಡಿಸಲೂ ಆಗದೆ, ಅವುಗಳನ್ನು ನಿಯಂತ್ರಣ ಮಾಡಲೂ ಆಗದೆ ಹೈರಾಣಾಗಿದ್ದಾರೆ.

ಜನಕ್ಕೆ ಅಡುಗೆ ಮಾಡುವಾಗ, ಊಟ ಮಾಡುವಾಗ ಸೇರಿದಂತೆ ಯಾವುದಕ್ಕೂ ನೊಣಗಳು ಬಿಡುತ್ತಿಲ್ಲ. ಹಿಂಡು ಹಿಂಡಾಗಿ ನೊಣಗಳು ಕಾಟ (Housefly) ಕೊಡುತ್ತಿದ್ದು, ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ನೊಣಗಳಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಮನೆಯಲ್ಲಿದ್ದರೆ ಹಗಲು ರಾತ್ರಿಯನ್ನದೇ ಒಮ್ಮೆಲೇ ನೂರಾರು ನೊಣಗಳು ಬರುತ್ತಿದ್ದು, ಸೊಳ್ಳೆ ಪರದೆಯನ್ನು ಹಾಕಿಕೊಂಡೇ ಇರುವಂತಾಗಿದೆ. ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ನೊಣಗಳಿಂದ ಸಂರಕ್ಷಿಸಿಕೊಳ್ಳಲು ಆಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನೊಣದೂರಿಗೆ ನಾವು ಹೆಣ್ಣು ಕೊಡುವುದಿಲ್ಲ

ಈ ಊರುಗಳಲ್ಲಿ ನೊಣಗಳದ್ದೇ ಸಾಮ್ರಾಜ್ಯ ನಿರ್ಮಾಣಗೊಂಡಿದ್ದು, ಹೆಣ್ಣು ಕೇಳಲು ಗ್ರಾಮದ ಹುಡುಗರು ಹೋದರೆ ಹುಡುಗಿ ಮನೆಯವರು ಹಿಂದೇಟು ಹಾಕುತ್ತಿದ್ದಾರಂತೆ. ನೊಣಗಳ ಊರಿಗೆ ಯಾರು ಹೆಣ್ಣು ಕೊಡುತ್ತಾರೆ ಎಂದು ವ್ಯಂಗ್ಯದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಮಾದಹಳ್ಳಿ, ಶೆಟ್ಟನಾಯ್ಕನ ಹಳ್ಳಿ, ನುಗ್ಗಹಳ್ಳಿ, ಮಾರ್ಗೋಡನಹಳ್ಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ನೊಣಗಳ ಹೆಚ್ಚಳಕ್ಕೆ ಅವೈಜ್ಞಾನಿಕ ಕೋಳಿ ಫಾರಂ ಕಾರಣ

ಗ್ರಾಮದಲ್ಲಿ ಕೋಳಿ ಫಾರಂನಿಂದಾಗಿ ನೊಣದ ಸಮಸ್ಯೆ ಹೆಚ್ಚಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೋಳಿ ಫಾರಂನ ಅವೈಜ್ಞಾನಿಕ ನಿರ್ವಹಣೆಗೆ ಕಿಡಿಕಾರಿದ್ದು, ಸಮಸ್ಯೆ ಬಗೆಹರಿಸುವಂತೆ ಕೋಳಿ ಫಾರಂ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನೊಣಗಳಿಂದ ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಮೈಸೂರು ನಗರದ ಪಕ್ಕವೇ ಮರಿಗಳ ಜತೆ ಕಾಣಿಸಿಕೊಂಡ ತಾಯಿ ಚಿರತೆ, ಭಯದಲ್ಲಿ ಜನ, ಶಾಲೆಗಳಿಗೆ ರಜೆ

Exit mobile version