ರಾಯಚೂರು: ಗೃಹಿಣಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಗರದ ನೇತಾಜಿ ನಗರದಲ್ಲಿ ನಡೆದಿದೆ. ಮನೆ ಮಹಡಿಯ ಮೇಲಿಂದ ಬಿದ್ದು ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಗಂಡನ ಕುಟುಂಬಸ್ಥರ ವಿರುದ್ಧ ಹತ್ಯೆ (Suspicious Death) ಆರೋಪ ಕೇಳಿಬಂದಿದೆ.
ಶಿಲ್ಪಾ(28) ಮೃತ ಗೃಹಿಣಿ. ಮೃತಳ ಪತಿ ಶರತ್, ತಾಯಿ ಶಶಿಕಲಾ ಹಾಗೂ ತಂದೆ ಸುರೇಶ್ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನು ಕೊಂದು, ಬಳಿಕ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಶಿಲ್ಪಾ ಮಹಡಿ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ | Husband Harrassed: ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಸಂಶಯ ಪಿಶಾಚಿ ಹೆಂಡತಿ!
ಘಟನೆ ಬಗ್ಗೆ ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪತಿ ಶರತ್ ಪರಾರಿಯಾಗಿದ್ದು, ಆತ ಬರುವವರೆಗೆ ಮೃತದೇಹ ಅಂತ್ಯ ಸಂಸ್ಕಾರ ಮಾಡಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
5 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವವಿವಾಹಿತೆ ನೇಣಿಗೆ ಶರಣು; ವರದಕ್ಷಿಣೆಗಾಗಿ ಜೀವ ಹಿಂಡಿದ ಕಿರಾತಕರು
ಗದಗ: ವರದಕ್ಷಿಣೆ (Dowry Case) ಎನ್ನುವ ಪೆಡಂಭೂತ ಇವತ್ತಿಗೂ ಹೆಣ್ಣು ಮಕ್ಕಳ ಬದುಕನ್ನು ಹೇಗೆ ಸರ್ವನಾಶ ಮಾಡುತ್ತಿದೆ ಎನ್ನುವುದಕ್ಕೆ ಪಕ್ಕಾ ಉದಾಹರಣೆ ಇಲ್ಲಿದೆ. ಇಲ್ಲಿ ಕೇವಲ ಐದು ತಿಂಗಳ ಹಿಂದಷ್ಟೇ ಹೊಸ ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹೆಣ್ಮಗಳೊಬ್ಬಳು ಆತ್ಮಹತ್ಯೆ (Newly married woman ends life) ಮಾಡಿಕೊಂಡಿದ್ದಾಳೆ. ಹಣ ಹಣ (Dowry Case) ಎಂದು ಬಾಯಿ ಬಿಡುವ ಗಂಡನ ಮನೆಯವರು (Harrassment by husband and family) ಈಕೆಯನ್ನು ಹೆಣವಾಗಿಸಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿಬಂದಿದೆ.
ಇದು ಗದಗ ತಾಲೂಕಿನ (Gadaga News) ತಿಮ್ಮಾಪುರ ಗ್ರಾಮದಲ್ಲಿ ಘಟನೆ. ಉಮಾ ವಿಷ್ಣು ಎಮ್ಮಿ (23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಹೆಣ್ಮಗಳು. ಮಂಗಳವಾರ ರಾತ್ರಿ ಈಕೆ ಬೆಡ್ ರೂಮ್‌ನಲ್ಲಿರುವ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನಾಲ್ಕು ಲಕ್ಷದಲ್ಲಿ ಬರೀ 50 ಸಾವಿರ ಬಾಕಿ ಇತ್ತು! ಆದರೂ ಬಿಡಲಿಲ್ಲ ಕಿರಾತಕರು!
ನೂರಾರು ಕನಸುಗಳೊಂದಿಗೆ ಕೇವಲ ಐದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದಳು ಉಮಾ. ವಿಷ್ಣು ಎಂಬ ಸುಂದರ ಹೆಸರಿನ ಹುಡುಗನ ಜತೆಗೆ ಆಕೆಯ ಮದುವೆ ನಡೆದಿತ್ತು. ಆದರೆ, ತಾನು ಕಾಲಿಟ್ಟಿದ್ದು ಸ್ವರ್ಗಕ್ಕಲ್ಲ, ನರಕಕ್ಕೆ ಎಂದು ತಿಳಿಯಲು ಆಕೆಗೆ ಹೆಚ್ಚು ದಿನ ಬೇಕಾಗಿರಲಿಲ್ಲ.
ಮದುವೆಯ ಸಂದರ್ಭದಲ್ಲೇ ಸಾಕಷ್ಟು ಹಣ ಮತ್ತು ಒಡವೆಗಳನ್ನು ಕೊಟ್ಟು ಕ್ರಮಬದ್ಧವಾಗಿ ಮದುವೆ ಮಾಡಿಸಿದ್ದರು ಉಮಾಳ ತಾಯಿ-ತಂದೆ. ಆದರೆ, ಮದುವೆಯಾಗಿ ಕೆಲವೇ ದಿನಗಳಲ್ಲಿ ತವರುಮನೆಯಿಂದ ಹೆಚ್ಚಿನ ವರದಕ್ಷಿಣೆ, ಬಂಗಾರ ತರುವಂತೆ ಮಾನಸಿಕ ಕಿರುಕುಳ ಶುರುವಾಗಿತ್ತು.
ಗಂಡನ ಮನೆಯವರು ಹೊಸದಾಗಿ ಇಟ್ಟ ಬೇಡಿಕೆ ನಾಲ್ಕು ಲಕ್ಷ ರೂಪಾಯಿ. ಉಮಾ ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಳು. ಮಗಳ ಬದುಕು ಚೆನ್ನಾಗಿರಲಿ ಎಂದು ತವರು ಮನೆಯವರು ಕಷ್ಟಪಟ್ಟು 3.5 ಲಕ್ಷ ರೂ.ಯನ್ನು ಆಗಲೇ ಕೊಟ್ಟಿದ್ದರು. ಆದರೆ, ಬಾಕಿ 50 ಸಾವಿರ ರೂಪಾಯಿ ಹಣ ತರುವಂತೆ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಮುಂದುವರಿದಿತ್ತು.
ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ರಾಜಿ ಸಂಧಾನ ಮಾಡಿಸಲಾಗಿತ್ತು. ಆದರೆ, ಆ ಕ್ಷಣಕ್ಕೆ ಒಪ್ಪಿಕೊಳ್ಳುವ ವಿಷ್ಣು ಮತ್ತು ಮನೆಯವರು ಬಳಿಕ ಮತ್ತೆ ಹಿಂಸೆಗೆ ಇಳಿಯುತ್ತಿದ್ದರು. ಇದನ್ನೆಲ್ಲ ಸಹಿಸಲು ಸಾಧ್ಯವೇ ಇಲ್ಲದೆ ಉಮಾ ನೆಯಲ್ಲಿನ ಬೆಡ್ ರೂಮ್‌ನಲ್ಲಿರುವ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದು ಧಾವಿಸಿದ ಉಮಾಳ ಸಹೋದರ ಗದಗ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾನೆ.
ಉಮಾ ಆತ್ಮಹತ್ಯೆ ತಿಳಿಯುತ್ತಿದ್ದಂತೆಯೇ ಗಂಡ, ಅತ್ತೆ-ಮಾವ ಎಸ್ಕೇಪ್!
ಈ ನಡುವೆ ಉಮಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಗಂಡ ವಿಷ್ಣು, ಅತ್ತೆ ಮತ್ತು ಇತರರು ಎಸ್ಕೇಪ್ ಆಗಿದ್ದಾರೆ! ವಿಷ್ಣುವಿನ ತಾಯಿ ಗಿರಿಜಾ ಕೂಡಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಸೊಸೆಯ ಸಾವಿನ ಹೆದರಿಕೆಯಿಂದ ಆಕೆ ತಪ್ಪಿಸಿಕೊಂಡಿದ್ದಾಳೆ.
ಗಂಡ, ಅತ್ತೆಯನ್ನು ಕರೆತನ್ನಿ: ಆಂಬ್ಯುಲೆನ್ಸ್‌ಗೆ ಅಡ್ಡ ಮಲಗಿ ಪ್ರತಿಭಟನೆ
ಈ ನಡುವೆ, ಪರಾರಿಯಾಗಿರುವ ಉಮಾಳ ಅತ್ತೆ, ಮಾವನನ್ನು ಕರೆದುಕೊಂಡು ಬಾರದಿದ್ದರೆ ಹೆಣವನ್ನು ತೆಗೆಯಲು ಬಿಡುವುದಿಲ್ಲ ಎಂದು ಉಮಾಳ ಹೆತ್ತವರು ಹೇಳಿದ್ದಾರೆ. ಮಾತ್ರವಲ್ಲ, ಹೆಣ ಒಯ್ಯಲು ಬಂದ ಆಂಬ್ಯುಲೆನ್ಸ್ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಆಕೆಯ ಶವವನ್ನು ಒಯ್ಯುವುದಕ್ಕಾಗಿ ಮನೆಯವರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ನಡೆಸಬೇಕಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : Husband Harrassed: ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಸಂಶಯ ಪಿಶಾಚಿ ಹೆಂಡತಿ!