ಬೆಂಗಳೂರು: ಪುತ್ತೂರಿನಲ್ಲಿ ನಡೆದ ಕೋಟಿ-ಚೆನ್ನಯ ಕಂಬಳದ ಸಂದರ್ಭದಲ್ಲಿ ಪುಟ್ಟ ಗೌರಿ ಮದುವೆ ಧಾರಾವಾಹಿ ಮತ್ತು ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ (Saanya iyer) ಕಿರಿಕ್ ಮಾಡಿದ್ದಾರೆ ಎಂಬ ಸುದ್ದಿಗಳಿಗೆ ಸ್ವತಃ ಸಾನ್ಯಾ ಅವರೇ ಸ್ಪಷ್ಟನೆ ನೀಡಿದ್ದಾರೆ. ʻʻನಾನು ಅವನಿಗೇನೂ ಹೊಡೆದಿಲ್ಲ. ಅವನು ನನಗೆ ಹೊಡೆದಿದ್ದಾನೆ ಎನ್ನುವುದೂ ಸುಳ್ಳು. ಅವನು ನನ್ನ ಗೆಳತಿಯರಿಗೆ ಕಿರುಕುಳ ನೀಡಿದಾಗ ನಾನು ರೋಷವನ್ನು ಪ್ರದರ್ಶಿಸಿ ಆವಾಜ್ ಹಾಕಿದ್ದೆ. ಅದಷ್ಟೇ ನಾನು ಮಾಡಿರುವುದು. ಒಬ್ಬ ಹೆಣ್ಣಾಗಿ ನಾನು ಅದನ್ನೂ ಮಾಡಬಾರದಾ?ʼʼ ಎಂದು ಮಾರ್ಮಿಕ ಪ್ರಶ್ನೆ ಕೇಳಿದ್ದಾರೆ ಸಾನ್ಯಾ ಅಯ್ಯರ್.
ಕಳೆದ ಶನಿವಾರ ಪುತ್ತೂರಿನಲ್ಲಿ ನಡೆದ ಕಂಬಳದ ಸಭಾ ಕಾರ್ಯಕ್ರಮಕ್ಕೆ ಸಾನ್ಯಾ ಅಯ್ಯರ್ ಅವರು ಅಧಿಕೃತ ಆಹ್ವಾನದಮೇರೆಗೆ ಹೋಗಿದ್ದರು. ಅಲ್ಲಿ ಒಬ್ಬ ಯುವಕ ಸಾನ್ಯಾ ಒಟ್ಟಿಗೆ ಇದ್ದ ಗೆಳತಿಯ ಜತೆ ಅಸಭ್ಯವಾಗಿ ವರ್ತಿಸಿದಾಗ ಸಾನ್ಯಾ ಅಯ್ಯರ್ ಆತನ ಕಪಾಳಕ್ಕೆ ಹೊಡೆದಿದ್ದರು, ಆತನೂ ಸಾನ್ಯಾಗೆ ಹೊಡೆದಿದ್ದಾನೆ. ನಂತರ ಅಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಧರ್ಮದೇಟು ನೀಡಿದ್ದರು ಎಂದು ವರದಿಯಾಗಿತ್ತು.
ಈ ವಿಚಾರದಲ್ಲಿ ಹಲವಾರು ಗಾಸಿಪ್‌ಗಳು ಹರಡಿದ್ದವು. ಸಾನ್ಯಾ ಅಯ್ಯರ್ ಹುಡುಗನಿಗೆ ಹೊಡೆದದ್ದು ತಪ್ಪು, ಪೊಲೀಸ್ ಕಂಪ್ಲೇಂಟ್ ಯಾಕೆ ಕೊಟ್ಟಿಲ್ಲ. ವೇದಿಕೆಗೆ ಹೋಗಿ ಕಾರ್ಯಕ್ರಮ ಆಯೋಜಕರಿಗೆ ಆವಾಜ್ ಹಾಕಿದ್ದು ಯಾಕೆ ಎಂಬೆಲ್ಲ ಪ್ರಶ್ನೆಗಳ ಜತೆಗೆ, ಗಲಾಟೆ ನಡೆಯುವ ಹೊತ್ತಿನಲ್ಲಿ ಸಾನ್ಯಾ ಅಯ್ಯರ್ ಕುಡಿದಿದ್ದರು ಎಂಬಲ್ಲಿಯ ವರೆಗೆ ಜನ ಕಂಡ ಕಂಡ ಹಾಗೆ ಮಾತನಾಡಿಕೊಂಡಿದ್ದರು. ಈ ಗಾಸಿಪ್‌ಗಳಿಂದ ಬೇಸತ್ತ ಸಾನ್ಯಾ ಅಯ್ಯರ್ ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ಘಟನೆಯ ವಿವರ ನೀಡಿದರು. ಮತ್ತು ಹಲವು ಪ್ರಶ್ನೆಗಳಿಗೆ ಖಡಕ್ ಉತ್ತರವನ್ನೇ ನೀಡಿದರು.
ಹಾಗಿದ್ದರೆ ಸಾನ್ಯಾ ಅಯ್ಯರ್ ಪ್ರಕಾರ ನಡೆದಿದ್ದೇನು?
ಪುತ್ತೂರು ಕಂಬಳಕ್ಕೆ ನಾನು ಅತಿಥಿಯಾಗಿ ಹೋಗಿದ್ದೆ. ಆಯೋಜಕರು ನನ್ನನ್ನು ತುಂಬಾ ಚೆನ್ನಾಗಿ ನಡೆಸಿಕೊಂಡರು. ನಾನು ಕಂಬಳದ ಆ ವೈಭವ ನೋಡಿ ಖುಷಿಪಟ್ಟೆ. ಕಾರ್ಯಕ್ರಮ ಮುಗಿದು ಸ್ವಲ್ಪ ವಿಶ್ರಾಂತಿ ಪಡೆದ ಬಳಿಕ ಆಗ ನೋಡಿದ್ದು ಸರಿಯಾಗಿಲ್ಲ, ಇನ್ನೂ ಸ್ವಲ್ಪ ಸರಿಯಾಗಿ ನೋಡೋಣ ಅನಿಸಿತು. ಅಷ್ಟು ಹೊತ್ತಿಗೆ ನನ್ನ ಇಬ್ಬರು ಗೆಳತಿಯರು ಮತ್ತು ಅವರ ಗೆಳೆಯರು ಕೂಡಾ ನನ್ನನ್ನು ಜತೆಯಾದರು. ನಾವು ಎಲ್ಲರೂ ಸೇರಿ ಮತ್ತೆ ಕಂಬಳಕ್ಕೆ ಹೋದೆವು. ನಾವಾಗಿಯೇ ಹೋಗಿ ಬರೋಣ ಎಂದು ಆಯೋಜಕರಿಗೂ ತಿಳಿಸದೆ ನಮ್ಮ ಪಾಡಿಗೆ ಹೋಗಿದ್ದೆವು. ಹೋಗಿ ಹಿಂದೆ ಬರುವ ಹೊತ್ತಿನಲ್ಲಿ ಯಾರೋ ಒಬ್ಬ ಯುವಕ ನನ್ನ ಗೆಳತಿಗೆ ಕಿರುಕುಳ ನೀಡಿದ. ಆಕೆ ಜೋರಾಗಿ ಕಿರುಚಿಕೊಂಡಳು. ನನ್ನ ಕಣ್ಣೆದುರೇ ನಡೆದ ಘಟನೆಯಿಂದ ಆಕ್ರೋಶಿತಳಾದ ನಾನು ಚೆನ್ನಾಗಿ ಆವಾಜ್ ಹಾಕಿದೆ. ಆಗ ಆತ ಓಡಿ ಹೋದ. ಜತೆಗೆ ಅಲ್ಲಿದ್ದ ಕೆಲವರು ಆತನನ್ನು ಹೊಡೆದರು. ಆತ ತಪ್ಪಿಸಿಕೊಂಡ.
ಈ ನಡುವೆ, ಆಯೋಜಕರು ನಮ್ಮನ್ನು ವೇದಿಕೆಗೆ ಕರೆದುಕೊಂಡು ಹೋದರು. ಅಲ್ಲಿ ಅವರಿಗೆ ವಿಷಯವನ್ನು ತಿಳಿಸುವಾಗಲೂ ನಾನು ಸ್ವಲ್ಪ ಉದ್ವೇಗದಲ್ಲೇ ಇದ್ದೆ. ನನ್ನ ಗೆಳತಿಗಾದ ದಾಳಿಯಿಂದ ನನಗೆ ವಿಪರೀತ ಸಿಟ್ಟು ಬಂದಿತ್ತು. ಅದನ್ನು ವಿವರಿಸುವಾಗ ನನ್ನೊಳಗೆ ರೋಷ ಉಕ್ಕುತ್ತಿತ್ತು. ಅದನ್ನು ಹೊರತುಪಡಿಸಿದರೆ ನಾವು ವೇದಿಕೆಯಲ್ಲೇನೂ ಸೀನ್ ಕ್ರಿಯೇಟ್ ಮಾಡಿಲ್ಲ- ಎಂದು ಸಾನ್ಯಾ ವಿವರಿಸಿದರು.
ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲವೇಕೆ?
ಈಗ ಎಲ್ಲರೂ ಇಷ್ಟೆಲ್ಲ ರಂಪ ಮಾಡಿದವರು ಪೊಲೀಸ್ ಕಂಪ್ಲೇಂಟ್ ಕೊಟ್ಟಿಲ್ಲ ಯಾಕೆ ಎಂದು ಕೇಳುತ್ತಿದ್ದಾರೆ. ನಿಜವೆಂದರೆ, ಇದೆಲ್ಲ ಕ್ಷಣ ಮಾತ್ರದಲ್ಲಿ ಆಗಿ ಹೋಗಿರುವ ಘಟನೆ. ಚಿಟಿಕೆ ಹೊಡೆಯುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಆತ ಯಾರು? ಎಲ್ಲಿ ಹೋದ ಎನ್ನುವುದು ಕೂಡಾ ನಮಗೆ ಗೊತ್ತಿಲ್ಲ.
ನಿಜವೆಂದರೆ, ಒಂದೊಮ್ಮೆ ನನಗೇನಾದರೂ ಈ ರೀತಿ ಆಕ್ರಮಣ ಆಗಿದ್ದರೆ ನಾನು ನೇರವಾಗಿ ಪೊಲೀಸರಿಗೆ ಖಂಡಿತ ದೂರು ನೀಡುತ್ತಿದ್ದೆ. ಆದರೆ, ನಿಜವಾಗಿ ಅದನ್ನು ಅನುಭವಿಸಿದ ಗೆಳತಿ ಭಯದಿಂದ ನಡುಗುತ್ತಿದ್ದಳು. ಆಕೆಗೆ ದೂರು ಕೊಡುವಷ್ಟು ಧೈರ್ಯವಿರಲಿಲ್ಲ. ನಾನು ಬೆಂಗಳೂರಲ್ಲಿ ಒಬ್ಬಳೇ ಓಡಾಡುತ್ತಿರುತ್ತೇನೆ. ನನ್ನ ಮೇಲೆ ಅಟ್ಯಾಕ್ ಮಾಡಿಬಿಟ್ಟರೆ ಅಂತ ಆಕೆ ಎಣಿಸಿಕೊಂಡೇ ಭಯಪಟ್ಟಿದ್ದಳು. ಈಗ ದೂರು ಕೊಡಬಹುದಾಗಿತ್ತು ಎಂದು ಹೇಳುವುದು ಸುಲಭ. ಆ ಪರಿಸ್ಥಿತಿಯನ್ನು ಅನುಭವಿಸಿಯೇ ನೋಡಬೇಕು ಅಂದರು ಸಾನಿಯಾ.
ರೋಷ ತೋರಿಸದೆ ಇರುವುದಾದರೂ ಹೇಗೆ?
ಕೆಲವರು ನನ್ನನ್ನು ಅಷ್ಟೊಂದು ರೋಷ ಯಾಕೆ ತೋರಿಸಿದಿರಿ ಎಂದು ನನ್ನನ್ನು ಕೇಳಿದ್ದಾರೆ. ಇದೆಲ್ಲ ಕೇಳುವ ಪ್ರಶ್ನೆಯಾ? ಒಬ್ಬ ಹೆಣ್ಮಗಳ ಮೇಲೆ ನನ್ನ ಕಣ್ಣೆದುರೇ ಆ ರೀತಿ ಆದಾಗಲೂ ನಾನು ಸುಮ್ಮನೆ ಇರಬೇಕಿತ್ತು ಅಂತ ಹೇಳೋದು ಯಾವ ನ್ಯಾಯ ಇದು. ನನಗೆ ಆ ವಿಷಯದಲ್ಲಿ ತುಂಬ ಸಿಟ್ಟಿದೆ. ನನ್ನ ಪಕ್ಕದಲ್ಲಿ ಒಬ್ಬ ಹೆಣ್ಮಗಳ ಮೇಲೆ ಅನ್ಯಾಯ ನಡೆದಾಗ ನಾನು ಧ್ವನಿ ಎತ್ತೋದು ನನ್ನ ಕರ್ತವ್ಯ. ಆ ಧೈರ್ಯ ನನಗಿದೆ. ಒಂದು ವೇಳೆ ಈ ರೀತಿ ಒಬ್ಬ ಹೆಣ್ಮಗಳ ಪರವಾಗಿ ಧ್ವನಿ ಎತ್ತುವುದು ನನ್ನ ನಡತೆಗೆ ಒಂದು ಕಳಂಕ ಎಂದು ಯಾರಾದರೂ ಭಾವಿಸುವುದಾದರೆ, ಇಂಥ ಘಟನೆಗಳು ನನಗೆ ನೆಗೆಟಿವ್ ಆಗೋದಾದರೆ ಆಗಲಿ ಬಿಡಿ, ಒಬ್ಬ ಗೆಳತಿಯ ಪರವಾಗಿ ನಿಂತ ಹೆಮ್ಮೆಯೆ ನನಗೆ ಸಾಕು. ಆದರೆ, ಖಂಡಿತವಾಗಿ ಒಬ್ಬ ಹೆಣ್ಮಗಳಿಗೆ ಆಗುವ ನೋವನ್ನು ನೋಡಿಕೊಂಡು ಸುಮ್ಮನಿರುವುದು ನನ್ನಿಂದ ಸಾಧ್ಯವೇ ಇಲ್ಲ.
ಸಕ್ಕರೇನೇ ಮುಟ್ಟಲ್ಲ ನಾನು ಇನ್ನು ಕುಡೀತೀನಾ?
ಕಂಬಳದ ಸಭಾ ಕಾರ್ಯಕ್ರಮದ ಬಳಿಕ ಸಾನ್ಯಾ ಮತ್ತು ಗೆಳೆಯ-ಗೆಳತಿಯರು ಒಂದು ಕಡೆ ಹೋಗಿ ಪಾನಮತ್ತರಾಗಿ ಮರಳಿದ್ದಾರೆ. ಕುಡಿತದ ಮತ್ತಿನಲ್ಲಿ ಈ ರೀತಿ ಆವೇಶ ಪ್ರದರ್ಶಿಸಿದ್ದಾರೆ ಎಂಬೆಲ್ಲ ಮಾತುಗಳಿಗೆ ಖಡಕ್ ಉತ್ತರ ನೀಡಿದ್ದಾರೆ ಸಾನ್ಯಾ.
ʻʻಪುತ್ತೂರಿನ ದೇವರಮಾರು ಕಂಬಳದ ಪಾವಿತ್ರ್ಯತೆ ಬಗ್ಗೆ ನನಗೆ ಗೊತ್ತಿದೆ. ನಾವ್ಯಾರು ಕುಡಿದಿರಲಿಲ್ಲ. ನಾನು ಸಕ್ಕರೇನೇ ತಿನ್ನಲ್ಲ. ಡಯಟ್‌ನಲ್ಲಿದ್ದೀನಿ. ಹೀಗಿರುವಾಗ ನಾನು ಕುಡಿಯೋದು, ಸಿಗರೇಟು ಸೇದೋದು ಮಾಡ್ತೀನಾ? ನಾನು ರುದ್ರಾಕ್ಷಿ ಧರಿಸಿದ್ದೇನೆ. ಅದನ್ನು ಧರಿಸಿಕೊಂಡು ಕುಡೀತಿನಾʼʼ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | Saanya iyer : ಪುತ್ತೂರು ಕಂಬಳದಲ್ಲಿ ಸೆಲ್ಫಿ ಕಿರಿಕ್, ಯುವಕನ ಕಪಾಳಕ್ಕೆ ಬಾರಿಸಿದ ಸಾನ್ಯಾ ಅಯ್ಯರ್