Site icon Vistara News

DJ Halli case : ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ

Tejasvi surya CM Siddaramaiah and CT Ravi

ಬೆಂಗಳೂರು: 2020ರ ಆಗಸ್ಟ್‌ನಲ್ಲಿ ನಡೆದಿದ್ದ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ (DJ Halli case) ಪ್ರಕರಣವನ್ನು ಕೈಬಿಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮದ ಕುರಿತು ಬಿಜೆಪಿ ಕಿಡಿಕಾರಿದೆ. “ಈಗ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ನೀತಿಯನ್ನು ಗಮನಿಸಿದರೆ, ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನವಾಗಿದೆ?” ಎಂದು ಸಂಸದ ತೇಜಸ್ವಿ ಸೂರ್ಯ (MP Tejaswi Surya) ಪ್ರಶ್ನೆ ಮಾಡಿದರೆ, “ಆರೋಪಿಗಳನ್ನು ಅಮಾಯಕರು ಅನ್ನುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.‌ ರವಿ (CT Ravi) ಕಿಡಿಕಾರಿದ್ದಾರೆ.

ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.‌ರವಿ, ಆರೋಪಿಗಳನ್ನು ಅಮಾಯಕರು ಅನ್ನುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿಯಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಅಮಾಯಕರು ಅನ್ನುವುದು ಖಂಡನೀಯ. ಇಂತಹ ಮಾನಸಿಕತೆ ದೇಶದ ಸಮಗ್ರತೆಗೆ ಧಕ್ಕೆ ತರುತ್ತದೆ. ಇಂತಹ ಮಾನಸಿಕತೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Udupi Toilet Video : ಟಾಯ್ಲೆಟ್ಟಲ್ಲಿ ಹೆಣ್ಮಕ್ಕಳ ವಿಡಿಯೊ ಮಾಡಿದ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ FIR

ಈ ಪ್ರಕರಣ ಸಂಬಂಧ ಕಾನೂನು ಹೋರಾಟವನ್ನು ನಾವು ಮುಂದುವರಿಸುತ್ತೇವೆ. ಉಗ್ರ ಚಟುವಟಿಕೆಯಲ್ಲಿ ತೊಡಗಿರುವ ಆರೋಪಿಗಳನ್ನು ರಕ್ಷಣೆ ಮಾಡುವುದು ಸರಿಯಲ್ಲ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ತಿಳಿದುಕೊಳ್ಳದಿದ್ದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

2020ರ ಆಗಸ್ಟ್‌ 11ರಂದು ನಡೆದಿದ್ದ ಗಲಭೆಯಲ್ಲಿ ಜಖಂಗೊಂಡಿರುವ ಪೊಲೀಸ್‌ ಜೀಪ್‌ (ಸಂಗ್ರಹ ಚಿತ್ರ)

ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನವಾಗಿದೆ?: ತೇಜಸ್ವಿ ಸೂರ್ಯ

ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನವಾಗಿದೆ? ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದ್ದಾರೆ.

“ಬೆಂಗಳೂರು ನಗರದಲ್ಲಿ ಐವರು ಶಂಕಿತ ಭಯೋತ್ಪಾದಕರನ್ನು ಬೆಂಗಳೂರು ಪೊಲೀಸರು ಬಂಧಿಸಿದ ಒಂದು ವಾರದೊಳಗೆ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದಲ್ಲಿ ಪೊಲೀಸ್ ಠಾಣೆ ಮತ್ತು ಕಾಂಗ್ರೆಸ್ ದಲಿತ ಶಾಸಕರ ಮನೆಗೆ ಬೆಂಕಿ ಹಚ್ಚಿದ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕೈಬಿಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮೊದಲ ಆವೃತ್ತಿಯಲ್ಲಿ, ಪಿಎಫ್ಐ ಮತ್ತು ಕೆಎಫ್‌ಡಿ ಕಾರ್ಯಕರ್ತರ 1700ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲಾಯಿತು. ಇದು ರಾಜ್ಯದಲ್ಲಿ ಕೊಲೆಗಳು ಮತ್ತು ಸ್ಲೀಪರ್ ಸೆಲ್‌ಗಳ ಅಣಬೆಗಳಿಗೆ ಕಾರಣವಾಯಿತು. ಇಂಡಿಯನ್ ಮುಜಾಹಿದ್ದೀನ್‌ಗಿಂತ ಐ.ಎನ್.ಡಿ.ಐ.ಎ (I.N.D.I.A) ಹೇಗೆ ಭಿನ್ನವಾಗಿದೆ?” ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ ಮಾಡಿ ಪ್ರಶ್ನೆ ಮಾಡಿದ್ದಾರೆ.

ಏನಿದು ಕೇಸ್?‌

ನವೀನ್‌ ಎಂಬಾತನ ಫೇಸ್‌ಬುಕ್‌ ಸಂದೇಶದಿಂದ 2020ರ ಆಗಸ್ಟ್‌ 11ರಂದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಗಲಭೆ (KJ Halli DJ Halli riot case) ಆರಂಭವಾಗಿತ್ತು. ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – Social Democratic Party of India – SDPI) ಸದಸ್ಯರ ಸಂಚಿನಿಂದ ಗಲಭೆ ನಡೆದಿತ್ತು. ಗಲಭೆಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗಿತ್ತು. ಅಷ್ಟೇ ಅಲ್ಲದೆ, ಡಿಜೆ ಹಳ್ಳಿ ನಿವಾಸಿಗಳಾದ ಯಾಸಿನ್‌ ಪಾಷಾ (21), ವಾಜೀದ್‌ ಖಾನ್‌ (21), ಕೆ.ಜಿ. ಹಳ್ಳಿ ನಿವಾಸಿ ಶೇಕ್‌ ಸಿದ್ದಿಕ್‌ (25) ಮೃತಪಟ್ಟಿದ್ದರು. ಕೆಜಿ ಹಳ್ಳಿ ಪೊಲೀಸ್‌ ಸ್ಟೇಷನ್‌ ಹಾಗೂ ಆಗಿನ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಚ್ಚಲಾಗಿತ್ತು. ಈ ಗಲಭೆಯಲ್ಲಿ 230ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. 11 ಆರೋಪಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ನಾಲ್ಕು ಆರೋಪಿಗಳು ಮೃತಪಟ್ಟಿದ್ದಾರೆ. ಉಳಿದ ಆರೋಪಿಗಳು ಜಾಮೀನು ಪಡೆದು ಹೊರ ಬಂದಿದ್ದಾರೆ.

NIA ಸುಪರ್ದಿಯಲ್ಲಿ ಕೇಸ್

ಸದ್ಯ ಎನ್ಐಎ ಬಳಿ ಈ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಇದೆ. ಗಲಭೆ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಈ ಪ್ರಕರಣ ಇದೆ. ಗಲಭೆ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಒಟ್ಟು 57 ಪ್ರಕರಣ ಸೇರಿದಂತೆ ಬೇರೆ ಬೇರೆ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ. ಎನ್ಐಎ ಪ್ರಕರಣ ಸಂಬಂಧ ನ್ಯಾಯಾಲಯದ ವಿಚಾರಣೆಗೆ ಹಲವು ಆರೋಪಿಗಳು ಗೈರಾಗುತ್ತಿದ್ದಾರೆ. ವಿಚಾರಣೆಗೆ ಗೈರಾದ ಆರೋಪಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಮನ್ಸ್ ನೀಡಲಾಗಿದೆ. ಸುಮಾರು 80ಕ್ಕೂ ಹೆಚ್ಚು ಆರೋಪಿಗಳ ಹೆಸರಲ್ಲಿ ಸಮನ್ಸ್ ನೀಡಲಾಗಿದೆ. ವಿಚಾರಣೆಗೆ ಗೈರಾದ ಆರೋಪಿಗಳ ಬಗ್ಗೆ ಡಿಜೆ ಹಳ್ಳಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: DJ Halli case : ಮತ್ತೆ ಬೆಂಕಿ ಕಾರಿದ ಕೆಜಿ-ಡಿಜೆ ಹಳ್ಳಿ ಕೇಸ್!‌ ಪ್ರಕರಣ ವಾಪಸ್‌ಗೆ ಮುಂದಾಯಿತೇ ಸರ್ಕಾರ?

ಬೃಹತ್‌ ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಜಾಕೀರ್ ಹುಸೇನ್, ಕಾರ್ಪೋರೇಟರ್‌ವೊಬ್ಬರ ಪತಿ ಕಲಿಂ ಪಾಷಾ ಹಾಗೂ ಮಾಜಿ ಮೇಯರ್ ಸಂಪತ್ ರಾಜ್ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಈಗ ಈ ಪ್ರಕರಣಗಳನ್ನು ಮರುಪರಿಶೀಲನೆ ಮಾಡಿ, ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಶಾಸಕ ತನ್ವೀರ್‌ ಸೇಠ್‌ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಆ ಮನವಿ ಪತ್ರವನ್ನು ಆಧಾರವಾಗಿಟ್ಟುಕೊಂಡು ಪ್ರಕರಣವನ್ನು ವಾಪಸ್‌ ಪಡೆಯುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಒಳಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

Exit mobile version