ಬೆಂಗಳೂರು: ಕೆಂಗೇರಿ ಬಳಿಯ ಬಿಡಿಎ ವಸತಿ ಸಮುಚ್ಚಯದಲ್ಲಿ 2ನೇ ಮಹಡಿಯ ಬಾಲ್ಕನಿಯಿಂದ ಬಿದ್ದ (Child fell from Balcony) ಮೂರು ವರ್ಷದ ಮಗುವಿಗೆ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಅಪಾಯದಿಂದ ಪಾರಾಗಿದೆ.
ಬಾಲ್ಕನಿಯಲ್ಲಿ ಆಟವಾಡುತ್ತಿದ್ದ ಮಗು ಒಮ್ಮಿಂದೊಮ್ಮೆಗೇ ಕೆಳಗೆ ಬಿದ್ದ ಏಟಿಗೆ ಎಲ್ಲರೂ ಭಯಗೊಂಡಿದ್ದರು. ತಲೆಯ ಭಾಗ ನೇರವಾಗಿ ನೆಲಕ್ಕೆ ಹೊಡೆದಿದೆ ಎಂದು ಹೇಳಲಾಗುತ್ತಿತ್ತು. ಬಿದ್ದ ಕೂಡಲೇ ಮಗುವಿಗೆ ಪ್ರಜ್ಞೆ ಕೂಡಾ ತಪ್ಪಿತ್ತು. ಕಿವಿಯ ಭಾಗದಲ್ಲಿ ರಕ್ತ ಸ್ರಾವ ಆಗುತ್ತಿತ್ತು. ಹೀಗಾಗಿ ದೊಡ್ಡ ಏಟು ಬಿದ್ದಿರಬಹುದು ಎಂದು ಹೇಳಲಾಗಿತ್ತು. ಆದರೆ, ಎರಡನೇ ಮಹಡಿಯಿಂದ ಬಿದ್ದರೂ ದೇವರ ದಯೆಯಿಂದ ಮಗುವಿಗೆ ದೊಡ್ಡ ಏಟು ಬಿದ್ದಿಲ್ಲ. ಕಿವಿಯಲ್ಲಿ ರಕ್ತ ಸ್ರಾವ ಆಗುತ್ತಿತ್ತು. ಆದರೆ, ಮೆದುಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಗುವಿನ ತಂದೆ ಶಿವಪ್ಪ ತಿಳಿಸಿದ್ದಾರೆ.
ಜ್ಞಾನಭಾರತಿ ಎನ್ ಕ್ಲೇವ್ ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮಹಡಿಯಿಂದ ಮಗು ಬಿದ್ದು ಗಾಯಗೊಂಡ ಮಗು ರಾಹುಲ್‌ನ ತಂದೆ ಶಿವಪ್ಪ ತಾಯಿ ಅಂಬಿಕಾ. ಇವರ ಕೊನೆಯ ಮಗ ರಾಹುಲ್. ಈ ದಂಪತಿ ಕಲಬುರಗಿ ಮೂಲದವರು. ಅಪಾರ್ಟ್‌ಮೆಂಟ್‌ನ ಕಾವೇರಿ H ಬ್ಲಾಕ್‌ನಲ್ಲಿ ಸುಮಾರು 3 ವರ್ಷದಿಂದ ಈ ಕುಟುಂಬ ವಾಸವಿದೆ.
ನಿಜಕ್ಕೂ ಆಗಿದ್ದೇನು?
ಶುಕ್ರವಾರ ಬೆಳಗ್ಗೆ ಸುಮಾರು 11:07 ಹೊತ್ತು. ನಾನು, ಹೆಂಡತಿ ಮತ್ತು ಮಗು ಮೂವರೂ ಮನೆಯಲ್ಲಿ ಇದ್ದೆವು. ನಾನು ಶೌಚಾಲಯಕ್ಕೆ ಹೋಗಿದ್ದೆ. ನನ್ನ ಹೆಂಡತಿ ಅಡುಗೆ ಮಾಡುತ್ತಿದ್ದರು. ಮಗು ರಾಹುಲ್ ಬಾಲ್ಕನಿಯಲ್ಲಿದ್ದ. ಅಲ್ಲಿ ಅವನು ಕುರ್ಚಿ ಹಾಕಿಕೊಂಡು ಅದರ ಮೇಲೆ ಬೆಡ್ ಶೀಟ್ ಹಾಕಿದ್ದಾನೆ. ಆ ಬೆಡ್ ಶೀಟ್ ಮೇಲೆ ಹತ್ತಿದಾಗ ಕಾಲು ಜಾರಿ ಆಯತಪ್ಪಿ ಬಾಲ್ಕನಿಯ ಆಚೆಗೆ ಬಿದ್ದುಬಿಟ್ಟಿದ್ದಾನೆ ಎಂದು ಘಟನೆಯನ್ನು ವಿವರಿಸಿದ್ದಾರೆ ಶಿವಪ್ಪ. ನಾವು ಸರಿಯಾಗಿ ಗಮನ ಕೊಡದೆ ಈ ರೀತಿ ಆಗಿದೆ ಎಂದು ಬೇಸರಿಸಿಕೊಂಡಿದ್ದಾರೆ ಶಿವಪ್ಪ.
ನಿಜ ಅಂದ್ರೆ ಮಗು ಬಿದ್ದಿದ್ದು ನಮಗೆ ಗೊತ್ತಾಗಿರಲೇ ಇಲ್ಲ. ಕೆಳಗಿನಿಂದ ಯಾರೋ ಬೊಬ್ಬೆ ಹೊಡೆಯುತ್ತಿರುವುದು ಕೇಳಿ ನೋಡಿದಾಗ ನಮ್ಮ ಮಗುವೇ ಬಿದ್ದಿದೆ ಎಂದು ತಿಳಿದುಬಂತು. ನಾವು ಕೂಡಲೇ ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಸೂಕ್ತ ಚಿಕಿತ್ಸೆ ಲಭ್ಯ ಇರದ ಕಾರಣ ರಾಜರಾಜೇಶ್ವರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಶಿವಪ್ಪ ವಿವರಿಸಿದರು.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಮಗು ಬಿದ್ದ ದೃಶ್ಯ
ಅಪಾರ್ಟ್‌ಮೆಂಟ್‌ನ ಗ್ರೌಂಡ್‌ಫ್ಲೋರ್‌ನಲ್ಲಿ ವೃದ್ಧೆಯೊಬ್ಬರು ಬುಟ್ಟಿ ನೇಯುತ್ತಾ ಕುಳಿತಿದ್ದರು. ಆಗ ಎರಡನೇ ಮಹಡಿಯಿಂದ ಮಗು ದೊಪ್ಪನೆ ಕೆಳಗೆ ಬಿದ್ದಿದೆ. ಆದರೆ, ಇದ್ಯಾವುದೂ ಕ್ಷಣಕಾಲ ವೃದ್ಧೆಯ ಅರಿವಿಗೆ ಬಂದಿಲ್ಲ. ಆದರೆ ಮಗು ಬಿದ್ದ ಸೌಂಡ್ ಕೇಳಿ ಮೊದಲನೇ ಮಹಡಿಯಲ್ಲಿದ್ದ ಯುವತಿಯೊಬ್ಬರು ಚೀರುತ್ತಾ ಓಡಿ ಬಂದಿದ್ದಾರೆ. ಯಾರಾದರೂ ಬನ್ನಿ ಎಂದು ಕೂಗಿ ಕೊಂಡಿದ್ದು, ಕೆಳಗೆ ಬಿದ್ದ ಮಗುವನ್ನು ಓಡಿ ಹೋಗಿ ಎತ್ತಿಕೊಂಡಿದ್ದಾರೆ. ಆಗ ಅಕ್ಕಪಕ್ಕದವರೆಲ್ಲ ಓಡಿ ಬಂದು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ. ಈಗ ಮಗು ಚೇತರಿಸಿಕೊಳ್ಳುತ್ತಿದೆ.
ಇದನ್ನೂ ಓದಿ : Child falls from Balcony: ಆಟವಾಡುತ್ತಾ ಬಾಲ್ಕನಿಯಿಂದ ಕೆಳಗೆ ಬಿದ್ದ 3 ವರ್ಷದ ಮಗು; ತಲೆಗೆ ಗಂಭೀರ ಗಾಯ