| ವಿಕ್ರಮ್, ವಿಸ್ತಾರ ನ್ಯೂಸ್, ಹೊಸದಿಲ್ಲಿ
ಜನವರಿ 26ರ ಗಣರಾಜ್ಯೋತ್ಸವ ನಮ್ಮ ದೇಶದ ಹೆಮ್ಮೆಯ ರಾಷ್ಟ್ರೀಯ ಉತ್ಸವ. ದೇಶದ ವೈವಿಧ್ಯಮಯ ಸಂಸ್ಕೃತಿ, ಸೇನಾ ಶಕ್ತಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಈ ಸಂದರ್ಭವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಎಲ್ಲ ರಾಜ್ಯಗಳು ತಮ್ಮ ಸ್ತಬ್ಧ (ಟ್ಯಾಬ್ಲೋ) ಚಿತ್ರಗಳನ್ನು ಸ್ಪರ್ಧೆ ಕಳುಹಿಸುತ್ತವೆ. ಆದರೆ, ಎಲ್ಲ ರಾಜ್ಯಗಳ ಟ್ಯಾಬ್ಲೋಗಳು ಆಯ್ಕೆಯಾಗುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಮೊದಲಿಗೆ ಕರ್ನಾಟಕದ ಟ್ಯಾಬ್ಲೋ ತಿರಸ್ಕರಿಸಲಾಗಿತ್ತು. ವಿರೋಧ ಹೆಚ್ಚಾದ್ದರಿಂದ ಮತ್ತೆ ಆಯ್ಕೆಗೆ ಪರಿಗಣಿಸಲಾಗಿದೆ. ಹಾಗಿದ್ದರೆ, ಈ ಟ್ಯಾಬ್ಲೋಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ, ಯಾರು ಆಯ್ಕೆ ಮಾಡುತ್ತಾರೆ, ಆಯ್ಕೆಗೆ ಇರುವ ಮಾನದಂಡಗಳೇನು..? ಇತ್ಯಾದಿ ಮಾಹಿತಿ ಇಲ್ಲಿದೆ.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ರಕ್ಷಣಾ ಇಲಾಖೆಯದ್ದಾಗಿರುತ್ತದೆ. ಈ ಇಲಾಖೆಯು ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರದ ವಿವಿಧ ಇಲಾಖೆಗಳಿಗೆ ಸ್ತಬ್ಧ ಚಿತ್ರಗಳನ್ನು ರಚಿಸಿಕೊಡುವಂತೆ ಆಹ್ವಾನ ನೀಡುತ್ತದೆ.
ಪ್ರತಿ ವರ್ಷ ಸ್ತಬ್ಧ ಚಿತ್ರಗಳು ಯಾವ ರೀತಿಯಲ್ಲಿರಬೇಕು ಎಂಬ ಕುರಿತು ಮಾರ್ಗಸೂಚಿಯನ್ನು ರಕ್ಷಣಾ ಇಲಾಖೆಯೇ ಹೊರಡಿಸುತ್ತದೆ. ಈ ಸ್ತಬ್ಧಚಿತ್ರಗಳ ಮೇಲೆ ರಾಜ್ಯಗಳ ಹೆಸರು ಹೊರತುಪಡಿಸಿ, ಯಾವುದೇ ಲೋಗೋ ಇರುವಂತಿಲ್ಲ. ಟ್ಯಾಬ್ಲೋಗಳ ಮುಂದೆ ಹಿಂದಿ, ಹಿಂಭಾಗದಲ್ಲಿ ಇಂಗ್ಲಿಷ್ ಮತ್ತು ಪಕ್ಕದಲ್ಲಿ ಆಯಾ ಪ್ರಾದೇಶಿಕ ಭಾಷೆಯಲ್ಲಿ ರಾಜ್ಯಗಳು, ಇಲಾಖೆಗಳ ಹೆಸರನ್ನು ಬರೆದಿರಲಾಗಿರುತ್ತದೆ.
ಟ್ಯಾಬ್ಲೋ ಆಯ್ಕೆಗೆ ಸಮಿತಿ
ಈ ಟ್ಯಾಬ್ಲೋಗಳನ್ನು ಆಯ್ಕೆ ಮಾಡಲು ಒಂದು ಸಮಿತಿ ನೇಮಕಾವಾಗಿರುತ್ತದೆ. ಈ ಸಮಿತಿಯಲ್ಲಿ 16 ಮಂದಿ ಸದಸ್ಯರು ಇರುತ್ತಾರೆ. ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ಗೃಹವಿನ್ಯಾಸ, ನೃತ್ಯ ಸಹಿತ ಇತರ ವಲಯಗಳ ತಜ್ಞರು ಈ ಸಮಿತಿಯಲ್ಲಿ ಇರುತ್ತಾರೆ. ಈ ಸದಸ್ಯರು ಒಪ್ಪಿದ ಟ್ಯಾಬ್ಲೋ ಗಳು ದಿಲ್ಲಿಯ ಕರ್ತವ್ಯ ಪಥ್‌ದಲ್ಲಿ ಗಣರಾಜ್ಯೋತ್ಸವದಂದು ಪ್ರದರ್ಶನಗೊಳ್ಳುತ್ತವೆ.
ಇದನ್ನೂ ಓದಿ | Karnataka Tableau | ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ!