Site icon Vistara News

Karnataka Election: ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಕೈಗೊಂಡ ಒಟ್ಟು ರ‍್ಯಾಲಿ, ರೋಡ್‌ ಶೋ ಎಷ್ಟು? ಇಲ್ಲಿದೆ ಪೂರ್ತಿ ಮಾಹಿತಿ

Karnataka Election

Karnataka Election

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election) ಕೆಲವೇ ಗಂಟೆಗಳು ಬಾಕಿ ಇವೆ. ಬಹಿರಂಗ ಪ್ರಚಾರ ಮುಗಿದಿದ್ದು, ರಾಜಕೀಯ ನಾಯಕರು ಇನ್ನು ಮನೆ ಮನೆ ಪ್ರಚಾರ ಕೈಗೊಳ್ಳಲಿದ್ದಾರೆ. ಆದರೆ, ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ಎಲ್ಲಿ ನೋಡಿದರೂ ಅಲ್ಲಿ ರಾಜಕೀಯ ಸಮಾವೇಶಗಳು, ಚುನಾವಣೆ ರ‍್ಯಾಲಿಗಳು, ರೋಡ್‌ ಶೋಗಳು, ಅಬ್ಬರದ ಪ್ರಚಾರವೇ ಕಾಣುತ್ತಿತ್ತು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಸಾಲು ಸಾಲು ರ‍್ಯಾಲಿ, ರೋಡ್‌ ಶೋಗಳ ಮೂಲಕ ಜನರ ಮತ ಸೆಳೆಯಲು ಯತ್ನಿಸಿದರು. ಹಾಗಾದರೆ, ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕೈಗೊಂಡ ರ‍್ಯಾಲಿ, ಸಮಾವೇಶಗಳು ಎಷ್ಟು? ಇವರಲ್ಲಿ ರಾಷ್ಟ್ರೀಯ ನಾಯಕರ ರ‍್ಯಾಲಿ ಎಷ್ಟು? ರಾಜ್ಯ ನಾಯಕರ ಸಮಾವೇಶಗಳು ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.

ಬಿಜೆಪಿಯಿಂದ 9 ಸಾವಿರಕ್ಕೂ ಅಧಿಕ ಸಮಾವೇಶ

ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಂದ ತುಂಬಿ ತುಳುಕುತ್ತಿರುವ ಬಿಜೆಪಿಯು ರಾಜ್ಯದಲ್ಲಿ 9,125 ಸಮಾವೇಶಗಳನ್ನು ಆಯೋಜಿಸಿದೆ. ಹಾಗೆಯೇ, 1,377 ರೋಡ್‌ ಶೋಗಳನ್ನು ಕೈಗೊಂಡಿದೆ. ಇವುಗಳ ಜತೆಗೆ 311 ದೇವಾಲಯ ಹಾಗೂ ಮಠಗಳಿಗೆ ಭೇಟಿ, 3,116 ಪ್ರಚಾರ ಸಭೆ, 9,077 ಸಣ್ಣ ಪ್ರಮಾಣದ ಸಭೆ ನಡೆಸಿದೆ. ಸಮಾವೇಶಗಳಲ್ಲಿ 9.87 ಲಕ್ಷ ಜನ ಭಾಗವಹಿಸಿದ್ದರೆ, ರೋಡ್‌ ಶೋಗಳಲ್ಲಿ 19.81 ಲಕ್ಷ ಜನ ಪಾಲ್ಗೊಂಡಿದ್ದರು ಎಂದು ಬಿಜೆಪಿ ಮಾಹಿತಿ ನೀಡಿದೆ.

ಮೋದಿ ರೋಡ್‌ ಶೋ ಮೇನಿಯಾ

ರಾಷ್ಟ್ರೀಯ, ರಾಜ್ಯ ನಾಯಕರ ರ‍್ಯಾಲಿ

ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ದಂಡೇ ಪ್ರಚಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು 19 ಸಮಾವೇಶ, 6 ರೋಡ್‌ ಶೋ, ಅಮಿತ್‌ ಶಾ 16 ರ‍್ಯಾಲಿ, 15 ರೋಡ್‌ ಶೋ, ಯೋಗಿ ಆದಿತ್ಯನಾಥ್‌ 9 ಸಮಾವೇಶ, 3 ರೋಡ್‌ ನಡೆಸಿದ್ದಾರೆ. ಜೆ.ಪಿ.ನಡ್ಡಾ, ರಾಜನಾಥ್‌ ಸಿಂಗ್‌ ಸೇರಿ ಹಲವು ನಾಯಕರು ಸಮಾವೇಶ, ರೋಡ್‌ ಶೋ ಕೈಗೊಂಡಿದ್ದಾರೆ. ಇನ್ನು ಬಿಜೆಪಿಯ ರಾಜ್ಯ ನಾಯಕರಲ್ಲಿ ಬಸವರಾಜ ಬೊಮ್ಮಾಯಿ ಅವರು 4 ಸಮಾವೇಶ 40 ರೋಡ್‌ ಶೋ ಕೈಗೊಂಡರೆ, ಬಿ.ಎಸ್.ಯಡಿಯೂರಪ್ಪ ಅವರು 44 ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಬಸನಗೌಡ ಪಾಟೀಲ್‌ ಯತ್ನಾಳ್‌ 41 ಸಮಾವೇಶ, ಸಿ.ಟಿ.ರವಿ 16 ರ‍್ಯಾಲಿ, 4 ರೋಡ್‌ ಶೋ, ಪ್ರಲ್ಹಾದ್‌ ಜೋಶಿ 5 ರ‍್ಯಾಲಿ ಸೇರಿ ಹಲವು ನಾಯಕರು ಸಮಾವೇಶಗಳಲ್ಲಿ ಪಾಲ್ಗೊಂಡಿದ್ದಾರೆ.

ಪ್ರಿಯಾಂಕಾ ಗಾಂಧಿ ಪ್ರಚಾರದ ಝಲಕ್

ಕಾಂಗ್ರೆಸ್‌ನಲ್ಲಿ ಯಾರ ಸಮಾವೇಶ ಎಷ್ಟು?

ಕರ್ನಾಟಕದಲ್ಲಿ ರಾಹುಲ್‌ ಗಾಂಧಿ 14 ಸಾರ್ಜನಿಕ ಸಭೆ ಹಾಗೂ 4 ರೋಡ್‌ ಶೋ ಕೈಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 26 ಸಮಾವೇಶ, 8 ರೋಡ್‌ ಶೋ, ಮಲ್ಲಿಕಾರ್ಜುನ ಖರ್ಗೆ 25 ರ‍್ಯಾಲಿ, 1 ರೋಡ್‌ ಶೋ, ಸಿದ್ದರಾಮಯ್ಯ 50 ಸಮಾವೇಶ, 7 ರೋಡ್‌ ಶೋ, ಡಿ.ಕೆ.ಶಿವಕುಮಾರ್‌ 57 ರ‍್ಯಾಲಿ, 35 ರೋಡ್‌ ಶೋ, ಸೋನಿಯಾ ಗಾಂಧಿ 1 ಸಮಾವೇಶ ಸೇರಿ ಈ ಆರು ನಾಯಕರು ರಾಜ್ಯದಲ್ಲಿ 173 ಸಮಾವೇಶ ಹಾಗೂ 55 ರೋಡ್‌ ಶೋ ಕೈಗೊಂಡಿದ್ದಾರೆ.

ಇದನ್ನೂ ಓದಿ: Karnataka Election : ಕೊನೆ ಪ್ರಚಾರದಲ್ಲೂ ಸಿಎಂ ಕನಸು ಬಿಚ್ಚಿಟ್ಟ ಡಿ.ಕೆ ಶಿವಕುಮಾರ್‌

Exit mobile version