ಬೆಂಗಳೂರು: ವಿದ್ಯುತ್ ಬಿಲ್ ಪಾವತಿ ಮೇಲೆ ವಿನಾಯಿತಿ ನೀಡುವ ಗೃಹಜ್ಯೋತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದೆ. 200 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ ಬಿಲ್ ಕಟ್ಟಬೇಕಿಲ್ಲ ಎಂದು ಚುನಾವಣೆಗೆ ಮುನ್ನ ಹೇಳಲಾಗಿತ್ತು. ಇದೀಗ ಜಾರಿ ಮಾಡುವಾಗ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಇದೆಲ್ಲದರ ನಡುವೆ, ನಮಗೆ ಈ ಯೋಜನೆಯಿಂದ ಲಾಭ ಆಗುತ್ತದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?
ಗೃಹಜ್ಯೋತಿ ಯೋಜನೆ
ಪ್ರತಿ ಮನೆಯು ಹಿಂದಿನ 12 ತಿಂಗಳಲ್ಲಿ ಎಷ್ಟು ವಿದ್ಯುತ್ ಬಳಸಿದೆ ಎಂಬ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಅಷ್ಟೂ ತಿಂಗಳ ವಿದ್ಯುತ್ ಬಳಕೆಯ ಸರಾಸರಿ ಪಡೆದುಕೊಳ್ಳಲಾಗುತ್ತದೆ. ಅದಕ್ಕೆ ಶೇ.10 ಸೇರಿಸಲಾಗುತ್ತದೆ. ಅಂದರೆ ಉದಾಹರಣೆಗೆ ಯಾವುದಾದರೂ ಮನೆಯ ವಾರ್ಷಿಕ ಸರಾಸರಿ ವಿದ್ಯುತ್ ಬಳಕೆ ಮಾಸಿಕ 170 ಯೂನಿಟ್ ಆಗಿದ್ದರೆ ಅದಕ್ಕೆ ಶೇ.10 ಅಂದರೆ 17 ಯೂನಿಟ್ ಸೇರಿಸಲಾಗುತ್ತದೆ. ಅಲ್ಲಿಗೆ ಒಟ್ಟು ಸರಾಸರಿ ಯೂನಿಟ್ 187 ಆಗುತ್ತದೆ. ಯಾವುದೇ ತಿಂಗಳು 187 ಯೂನಿಟ್ ಬಳಕೆ ಮಾಡುವವರೆಗೂ ಆ ಮನೆಯವರು ಬಿಲ್ ಕಟ್ಟುವಂತಿಲ್ಲ. ಆದರೆ ಯಾವುದಾದರೂ ಒಂದು ತಿಂಗಳು ಆ ಮನೆಯ ವಿದ್ಯುತ್ ಬಿಲ್ ಇದ್ದಕ್ಕಿದ್ದಂತೆ 190 ಯೂನಿಟ್ ಬಂದರೆ ಆ ತಿಂಗಳು ಬಿಲ್ ಕಟ್ಟಬೇಕಾಗುತ್ತದೆ. ಜುಲೈವರೆಗೆ ಬಾಕಿ ಉಳಿಸಿಕೊಂಡಿರುವವರು ಅವರೇ ಕಟ್ಟಬೇಕು. ಜುಲೈ ತಿಂಗಳ ಬಿಲ್‌ನಿಂದ ಈ ಯೋಜನೆ ಜಾರಿಯಾಗುತ್ತದೆ. ಅಂದರೆ ಆಗಸ್ಟ್‌ನಲ್ಲಿ ಬರುವ ಬಿಲ್ ಮೊತ್ತ 199 ಯೂನಿಟ್ ಒಳಗಿದ್ದರೆ ಅಂಥವರು ಪಾವತಿ ಮಾಡಬೇಕಾಗಿಲ್ಲ. ಇದಿಷ್ಟೂ ಯೋಜನೆಯ ಸ್ಥೂಲ ಚಿತ್ರಣ.
ಎಲ್ಲರಿಗೂ ಏಕೆ ಫ್ರೀ ಇಲ್ಲ?
ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಬಳಸಬಹುದು ಎನ್ನುವುದು ಎಲ್ಲರಿಗೂ ಅನ್ವಯ ಆಗುವುದಿಲ್ಲ. ಮುಖ್ಯವಾಗಿ ಈ ಹಿಂದಿನ 12 ತಿಂಗಳು ಎಷ್ಟು ವಿದ್ಯುತ್ ಬಳಕೆ ಮಾಡಲಾಗಿದೆ ಎನ್ನುವುದರ ಆಧಾರದಲ್ಲಿ ಉಚಿತ ವಿದ್ಯುತ್ ನಿಗದಿ ಆಗುತ್ತದೆ. ಉದಾಹರಣೆಗೆ ಒಂದು ಮನೆಯಲ್ಲಿ ಮಾಸಿಕ 60-70 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗುತ್ತಿರುತ್ತದೆ ಎಂದಿಟ್ಟುಕೊಳ್ಳೋಣ. ಆಗ ವಾರ್ಷಿಕ ಸರಾಸರಿ 65 ಯೂನಿಟ್ ಎಂದಾಗುತ್ತದೆ. ಅದಕ್ಕೆ ಶೇ.10 ಹೆಚ್ಚುವರಿ ಅಂದರೆ 6 ಯೂನಿಟ್‌ವರೆಗೆ ಹೆಚ್ಚುವರಿಯಾಗಿ ಬಳಸಬಹುದು. ಅಂದರೆ ಯಾವುದೇ ತಿಂಗಳು 71 (65+6) ಯೂನಿಟ್‌ವರೆಗೂ ಯಾವುದೇ ತಿಂಗಳು ಬಿಲ್ ಬಂದರೂ ಅದನ್ನು ಪಾವತಿ ಮಾಡಬೇಕಿಲ್ಲ. ಆದರೆ ಉಚಿತ ವಿದ್ಯುತ್ ಸಿಗುತ್ತದೆ ಎಂಬ ಕಾರಣಕ್ಕೆ ಫ್ರಿಜ್, ವಾಷಿಂಗ್ ಮಷೀನ್, ಎಲೆಕ್ಟ್ರಿಕ್ ವಾಹನಗಳನ್ನು ಕೊಂಡುಕೊಂಡು ಬಂದರೆ ಈ ಸರಾಸರಿ ಮೀರಬಹುದು. ಹಾಗೊಂದು ವೇಳೆ ಈ ಮೇಲೆ ಉದಾಹರಣೆ ನೀಡಿದ ಮನೆಯ ವಿದ್ಯುತ್ 71 ಯೂನಿಟ್ ಮೀರಿದರೆ, 71 ಯೂನಿಟ್ ಮೀರಿದ ಅಷ್ಟೂ ತಿಂಗಳು ಬಿಲ್ ಕಟ್ಟಬೇಕಾಗುತ್ತದೆ.
ಮುಂದಿನ ವರ್ಷ ಉಪಯೋಗ
ಇಡೀ ವರ್ಷ ಸರಾಸರಿ ವಿದ್ಯುತ್ ಬಿಲ್ ಹೆಚ್ಚು ಆಗಬಹುದು. ಆದರೆ ಇಡೀ ವರ್ಷ ಬಿಲ್ ಕಟ್ಟಿದ ನಂತರ ಆ ಮನೆಯ ಸರಾಸರಿ ಹೆಚ್ಚಾಗುತ್ತದೆ. ಆ ಸರಾಸರಿಯು 199 ಯೂನಿಟ್ ಒಳಗಿದ್ದರೆ ಆ ವರ್ಷ ಪೂರ್ತಿ ಮತ್ತೆ ಉಚಿತ ವಿದ್ಯುತ್ ಸಿಗುತ್ತದೆ. ಹೀಗೆ, ಉಚಿತ ವಿದ್ಯುತ್ ಎನ್ನುವುದು ಈ ವರ್ಷವೇ ಎಲ್ಲರಿಗೂ 200 ಯೂನಿಟ್ ಉಚಿತವಾಗಿ ಸಿಗುವುದಿಲ್ಲ.
ತಿಳಿಯುವುದು ಹೇಗೆ?
ಸದ್ಯ ಸರ್ಕೃ ತಿಳಿಸಿರುವ ಮಾಹಿತಿ ಆಧಾರದಲ್ಲಿ ನೋಡುವುದಾದರೆ ಅದಕ್ಕೆ ಒಂದು ಸರಳ ಸೂತ್ರ ಇದೆ. ಅದಕ್ಕೆ ಈ ಕೆಳಗಿನ ಕೋಷ್ಟಕವನ್ನು ನೋಡಬಹುದು.
- ನಿಮ್ಮ ಮನೆಗೆ 2022ರ ಜೂನ್‌ನಿಂದ 2023ರ ಜೂನ್‌ವರೆಗೆ ಬಂದಿರುವ ವಿದ್ಯುತ್ ಬಿಲ್ ಅನ್ನು ಕೈಗೆತ್ತಿಕೊಳ್ಳಿ
- ಅದರಲ್ಲಿ ಬಳಕೆ ಮಾಡಿದ ಯುನಿಟ್ ಎಂದು ನಮೂದಿಸಿರುವುದನ್ನು ಗಮನಿಸಿ
- ಪ್ರತಿ ತಿಂಗಳ ಬಿಲ್‌ನಿಂದಲೂ ಈ ಮಾಹಿತಿಯನ್ನು ಒಂದು ಕಡೆ ಬರೆದುಕೊಂಡು ಎಲ್ಲವನ್ನೂ ಕೂಡಿ
- ಅಂತಿಮ ಫಲಿತಾಂಶವನ್ನು 12ರಿಂದ ಭಾಗಿಸಿ, ಆಗ ಸರಾಸರಿ ಸಂಖ್ಯೆ ಬರುತ್ತದೆ
- ಈ ಸರಾಸರಿ ಸಂಖ್ಯೆಗೆ ಶೇ.10 ಸೇರಿಸಿ. (ಉದಾಹರಣೆಗೆ ಸರಾಸರಿ 152 ರೂ. ಇದ್ದರೆ 15.52 ರೂ. ಸೇರಿಸಿ, ಒಟ್ಟು 167.52 ಆಗುತ್ತದೆ)
- ಈ ಸಂಖ್ಯೆಯೇ ನಿಮ್ಮ ಮನೆಯ ವಾರ್ಷಿಕ ವಿದ್ಯುತ್ ಬಳಕೆ ಸರಾಸರಿ.
- ಈ ಸಂಖ್ಯೆ 199ರವರೆಗೆ ಇದ್ದರೆ ಮಾತ್ರ ಉಚಿತ ವಿದ್ಯುತ್ ಪಡೆಯಲು ಅರ್ಹರಾಗುತ್ತಾರೆ
ಬಿಲ್ ಇಲ್ಲದಿದ್ದರೆ ಏನು ಮಾಡುವುದು?
ನಿಮ್ಮ ಬಳಿ ಕಳೆದ ಒಂದು ವರ್ಷದ ವಿದ್ಯುತ್ ಬಿಲ್ ಇಲ್ಲ ಎಂದರೆ ಏನು ಮಾಡುವುದು? ಯಾವುದಾದರೂ ಬಾಡಿಗೆ ಮನೆಗೆ ಹೋದಾಗ, ಹಿಂದೆ ಆ ಮನೆಯಲ್ಲಿದ್ದವರು ಎಷ್ಟು ಪಾವತಿ ಮಾಡಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಅದಕ್ಕಾಗಿ ಬೆಸ್ಕಾಂ ಆನ್‌ಲೈನ್ ಪೋರ್ಟಲ್‌ಗೆ ಹೋಗಿ.
ಅಲ್ಲಿ ಸೈನ್ ಇನ್ ಎಂಬಲ್ಲಿ, ತಮ್ಮ ಮನೆಯ ವಿದ್ಯುತ್ ಖಾತೆಯ ಸಂಖ್ಯೆ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಿ. ನೋಂದಣಿ ನಂತರ ಸೈನ್ ಇನ್ ಆದರೆ ಅಲ್ಲಿ ಕಳೆದ ವರ್ಷ ಪೂರ್ತಿಯ ಬಿಲ್‌ಗಳು ಲಭಿಸುತ್ತವೆ. ಅದನ್ನು ಹಿಡಿದು ಲೆಕ್ಕ ಮಾಡಬಹುದು.
ಬೆಸ್ಕಾಂ ಪೋರ್ಟಲ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.