ತುಮಕೂರು: ಗುರುವಾರ ಮುಂಜಾನೆ ತುಮಕೂರಿನ ಕಳ್ಳಂಬೆಳ್ಳ ಬಳಿ 9 ಮಂದಿ ಕೂಲಿ ಕಾರ್ಮಿಕರನ್ನು ಬಲಿ ತೆಗೆದುಕೊಂಡ ಅಪಘಾತ (tumkur accident) ಸಂಭವಿಸಿದ್ದು ಹೇಗೆ ಎಂಬುದರ ಮಾಹಿತಿಯನ್ನು ಕೆಲವು ಗಾಯಾಳುಗಳು ಬಿಚ್ಚಿಟ್ಟಿದ್ದಾರೆ.
ಬೆಳಗ್ಗಿನ ಜಾವ 4:30ರ ಸಮಯದಲ್ಲಿ ಲಾರಿ ಹಾಗೂ ಕ್ರೂಸರ್ ನಡುವೆ ಅಪಘಾತವಾಗಿದೆ. ಲಾರಿಯನ್ನು ಓವರ್‌ಟೇಕ್ ಮಾಡಲು ಕ್ರೂಸರ್ ಚಾಲಕ ಮುಂದಾಗಿದ್ದು, ಆಗ ಡಿವೈಡರ್ ಮೇಲೆ ಅದರ ಚಕ್ರ ಹತ್ತಿದೆ. ಕೂಡಲೇ ಟಯರ್ ಬ್ಲಾಸ್ಟ್ ಆಗಿದ್ದು, ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸ್ಥಳದಲ್ಲೇ ಚಾಲಕ ಸೇರಿ 9 ಜನ ಸಾವನ್ನಪ್ಪಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳು. 14 ಜನರಿಗೆ ಗಾಯಗಳಾಗಿದೆ. ಇಬ್ಬರು ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಆಸ್ಪತ್ರೆ ಭೇಟಿ ಬಳಿಕ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಹೇಳಿದ್ದರು.
ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು. ಬೆಂಗಳೂರಿನ ನಾನಾ ಕಡೆಗಳಲ್ಲಿ ಕೂಲಿ ಮಾಡುತ್ತಿದ್ದವರು. ಪ್ರತಿ ವರ್ಷವೂ ಹಬ್ಬಕ್ಕೆ ಊರಿಗೆ ಹೋಗಿ ಬರುತ್ತಿದ್ದ ಇವರು ಈ ಸಲವೂ ಹಬ್ಬಕ್ಕಾಗಿ ಬೆಂಗಳೂರಿನಿಂದ ತಮ್ಮ ಊರಿಗೆ ಹೋಗಿದ್ದರು. ಬರುವಾಗ ವಡವಟ್ಟಿ ಗ್ರಾಮದ ಕೃಷ್ಣಪ್ಪ ಎಂಬವರ ಕ್ರೂಸರ್ ಅನ್ನು ಪ್ರಯಾಣಕ್ಕೆ ನಿಗದಿಪಡಿಸಿಕೊಂಡಿದ್ದರು. ನಿನ್ನೆ ಮಧ್ಯಾಹ್ನ ರಾಯಚೂರಿನಿಂದ ಬೆಂಗಳೂರು ಕಡೆಗೆ ಬರಲು ಊರು ಬಿಟ್ಟಿದ್ದಾರೆ. ನಡುರಾತ್ರಿ ಒಂದು ಕಡೆ ಟೀ ಕುಡಿಯಲು ಕ್ರೂಸರನ್ನು ನಿಲ್ಲಿಸಿದ್ದು, ಇತರರೆಲ್ಲರೂ ಟೀ ಸೇವಿಸಿ ಬಂದಿದ್ದರು. ಈ ನಡುವೆಯೇ ಕೃಷ್ಣಪ್ಪ ಬೇರೆ ಕಡೆಗೆ ಹೋಗಿ ಮದ್ಯ ಸೇವಿಸಿ ಬಂದಿದ್ದಾನೆ. ಇದರ ನಂತರ ಅತಿ ವೇಗದಿಂದ ಕ್ರೂಸರ್ ಚಲಾಯಿಸಿದ್ದಾನೆ. ಬೆಳಗ್ಗೆ 4.30ರ ವೇಳೆಗೆ ಲಾರಿಯನ್ನು ಓವರ್‌ಟೇಕ್ ಮಾಡಲು ಮುಂದಾಗಿ ಡಿವೈಡರ್‌ಗೆ ಡಿಕ್ಕಿಯಾಗಿ, ನಂತರ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಇದನ್ನೂ ಓದಿ | Tumkur accident | ಶಿರಾ ಬಳಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ, 9 ಕಾರ್ಮಿಕರ ಸಾವು
ಮೃತರ ವಿವರ
ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕು ಕುರಕುಂದ ಗ್ರಾಮದ ಸುಜಾತ (25) ಮೀನಾಕ್ಷಿ, ವಿನೋದ (3), ಕ್ರೂಸರ್ ವಾಹನ್ ಚಾಲಕ ಕೃಷ್ಣಪ್ಪ (21), ಕಸನದೊಡ್ಡಿಯ ಬಸಮ್ಮ (50), ಪ್ರಭು. ಇನ್ನೂ ಇಬ್ಬರು ಗಂಡಸರು ಹಾಗೂ ಒಬ್ಬಳು ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಗಾಯಾಳುಗಳ ವಿವರ
ಸಿರಿವಾರ ತಾಲೂಕಿನ ಮೋನಿಕ (40), ಮಲ್ಕಿಯ ದುರ್ಗಮ್ಮ (52), ನವಿಲುಕಲ್ಲಿನ ಬಾಲಾಜಿ (6), ಅನಿಲ್ (8), ಸಂದೀಪ (05), ಮಾಡಗಿರಿಯ ಉಮೇಶ (30), ಯಲ್ಲಮ್ಮ (25), ದೇವದುರ್ಗ ತಾಲೂಕು ಗುಡನಾಳಿನ ದೇವರಾಜ (06), ಕುರುಕುಂದದ ಲಲಿತ (30), ವಿರುಪಾಕ್ಷ (30), ದೇವದುರ್ಗದ ನಾಗಮ್ಮ (55), ಮಾಲಚಿ ಗ್ರಾಮದ ವೈಶಾಲಿ (32), ಮಾಸ್ತಿ ತಾಲೂಕಿನ ವಸಂತ (40).
ಇದನ್ನೂ ಓದಿ | Tumkur accident | ಸಂತ್ರಸ್ತರಿಗೆ ಪ್ರಧಾನ ಮಂತ್ರಿ ಪರಿಹಾರ ಘೋಷಣೆ, ಸಂತಾಪ