ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಮತ್ತು ವಂಚಿಸಿದ ಆರೋಪದ ಮೂಲಕ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿರುವ ಮೈಸೂರಿನ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ಕೇಸ್ (Santro Ravi case) ಈಗ ಎಲ್ಲ ರಾಜಕಾರಣಿಗಳ ನಿದ್ದೆಗೆಡಿಸಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಹಲವು ನಾಯಕರ ಜತೆಗೆ ಸ್ಯಾಂಟ್ರೋ ರವಿ ಆತ್ಮೀಯವಾಗಿ ಓಡಾಡಿಕೊಂಡಿರುವುದು ಕಾಂಗ್ರೆಸ್‌ಗೆ ದಾಳವಾಗಿ ಲಭಿಸಿದೆ. ಅದು ಈಗ ನೇರವಾಗಿ ಸಿಎಂ ಬೊಮ್ಮಾಯಿ ಅವರನ್ನೇ ಟಾರ್ಗೆಟ್ ಮಾಡಿದೆ. ಸ್ಯಾಂಟ್ರೋ ರವಿ ಯಾರೆಂದು ತಮಗೆ ಗೊತ್ತೇ ಇಲ್ಲ ಎಂದ ಅವರನ್ನು ಹಲವು ಬಗೆಗಳಲ್ಲಿ ಪ್ರಶ್ನೆ ಮಾಡಿದೆ.
ʻʻಸ್ಯಾಂಟ್ರೋ ರವಿ ನನಗೆ ಪರಿಚಯವೇ ಇಲ್ಲ ಎನ್ನುವ ಬಸವರಾಜ ಬೊಮ್ಮಾಯಿ ಅವರೇ, ‘ಸಿಎಂ ನೇರ ಪರಿಚಯ ನನಗೆ’ ಎಂದು ರವಿ ಹೇಳಿದ್ದು ಹೇಗೆ? ನಿಮ್ಮ ಪುತ್ರ ಸ್ಯಾಂಟ್ರೋ ರವಿಗೆ ‘ಸ್ವೀಟ್ ಬ್ರದರ್’ ಆಗಿರುವುದು ಹೇಗೆ?ʼʼ ಎಂದು ಪ್ರಶ್ನೆ ಮಾಡಿದೆ. ಹಲವು ಟ್ವೀಟ್‌ಗಳ ಮೂಲಕ ಅದು ಸಿಎಂ ಮತ್ತು ಬಿಜೆಪಿಯನ್ನು ಕೆಣಕಿದೆ.
ಕಾಂಗ್ರೆಸ್‌ನ ಕೆಣಕು ಟ್ವೀಟ್‌ಗಳು
– ನಿಮ್ಮ ಸರ್ಕಾರದ ಬಹುತೇಕ ಸಚಿವರಿಗೆ ಆಪ್ತನಾಗಿರುವ ಸ್ಯಾಂಟ್ರೋ ರವಿ ನಿಮಗೂ ಆಪ್ತನಲ್ಲವೇ? ತಾವು ಆತನಿಗೆ ಸಾರ್ ಎಂದು ಸಂಬೋಧಿಸುವುದಿಲ್ಲವೇ?
– ವೇಶ್ಯಾವಾಟಿಕೆ ದಂಧೆಯ ಸ್ಯಾಂಟ್ರೋ ರವಿ ಜೊತೆಗೆ ಸಾಲು ಸಾಲು ಬಿಜೆಪಿ ಸಚಿವರು ಆಪ್ತರಾಗಿರುವುದು ಹೇಗೆ? ಸಚಿವರು ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಪ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ ಬಿಜೆಪಿ ನಾಯಕರೇ?
– ಸಚಿವ ಸುಧಾಕರ್ ಅವರೇ ತಮ್ಮ ಸಿಡಿ ತಡೆಯಾಜ್ಞೆಯ ಹಿಂದಿನ ರಹಸ್ಯ ಸ್ಯಾಂಟ್ರೋ ರವಿ ಬಳಿ ಇದೆಯೇ?
– ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು? ಬೊಮ್ಮಾಯಿ ಕೃಪೆಯೇ? ಜ್ಞಾನೇಂದ್ರ ಕೃಪೆಯೇ?
ಇದನ್ನೂ ಓದಿ | Sexual harrassement | ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್, ರಾಜಕೀಯ ನಾಯಕರ ಆಪ್ತನೇ ಇವನು?